ಅಭಿವೃದ್ಧಿಗೆ ಕಾದಿವೆ ಗರಡಿ ಮನೆಗಳು

MYK GARADI
Published on

ಪಿ.ಎಚ್. ಕೃಷ್ಣಮೂರ್ತಿ, ಮಾಯಕೊಂಡ: ದೇಶದ ಸ್ವಾತಂತ್ರ್ಯಕ್ಕಾಗಿ ನೂರಾರು ಚಳವಳಿಗಾರರನ್ನು ನೀಡಿರುವ, ರಾಜ್ಯ-ಅಂತಾರಾಜ್ಯ ಮಟ್ಟದಲ್ಲಿ ಜಗಜಟ್ಟಿಗಳನ್ನು ತಯಾರು ಮಾಡಿದ ಮಾಯಕೊಂಡದ ನೆಲಕ್ಕೆ ಗಂಡುಭೂಮಿ ಎಂಬ ಹೆಸರುಂಟು. ತೋಳು-ತೊಡೆ ತಟ್ಟಿ ಕುಸ್ತಿ ಅಖಾಡದಲ್ಲಿ ಮುನ್ನುಗ್ಗಿ, ಪಟ್ಟುಗಳನ್ನು ಹಾಕುತ್ತ, ಎದುರಾಳಿ ಎದೆ ಝಲ್ಲೆನೆಸುವ ಪೈಲ್ವಾನರನ್ನು ನೀಡಿದ ಇಲ್ಲಿನ ಗತವೈಭವದ ಮೂರು ಗರಡಿ ಮನೆಗಳು ಅಕ್ಷರಶಃ ಅವನತಿ ಅಂಚಿನಲ್ಲಿವೆ.

200 ವರ್ಷದ ಇತಿಹಾಸ : ಮಾಯಕೊಂಡ ಗ್ರಾಮದಲ್ಲಿರುವ ಕಲ್ಗಿ ಗರಡಿ, ಪೇಟೆಗರಡಿ ಮತ್ತು ಕೋಟಿ ಗರಡಿ ಮನೆಗಳಿಗೆ ಸುಮಾರು 200 ವರ್ಷಗಳ ಇತಿಹಾಸವಿದೆ ಎನ್ನುತ್ತಾರೆ ಗ್ರಾಮದ ಹಿರಿಯರು ಮತ್ತು ಹಳೆಯ ಪೈಲ್ವಾನರು.

ಮೂರು ಗರಡಿ ಮನೆಗಳು ಹಳೆಯ ಪ್ರಾಚೀನ ಕಾಲದಲ್ಲಿ ಕಲ್ಲು ಮಣ್ಣಿನಿಂದ ಗೋಡೆ ನಿರ್ಮಾಣವಾಗಿದ್ದು, ಹಾಗೇ ಕಪ್ಪು ಹೆಂಚಿನ ಛಾವಣಿ ಇದೆ. ಉಪ್ಪಾರ ಸಮುದಾಯದ ಕಾಲನಿಯಲ್ಲಿನ ಕೋಟೆ ಗರಡಿ, ಹಲವು ವರ್ಷಗಳಿಂದ ಮಳೆಗೆ ಸಿಲುಕಿ ಹೆಂಚುಗಳು ಒಡೆದು ಹೋಗಿವೆ. ನೀರಿನಲ್ಲಿ ನೆಂದಿರುವ ಗೋಡೆಗಳು ಬಿರುಕು ಬಿಟ್ಟಿವೆ. ಗರಡಿ ಮನೆ ಅವನತಿಯ ಅಂಚಿಗೆ ತಲುಪಿದೆ. ಕುರುಬ ಸಮುದಾಯದ ಕಾಲನಿಯಲ್ಲಿನ ಕಲ್ಗಿ ಗರಡಿ ಮತ್ತು ಪೇಟೆ ಗರಡಿ ಅಭಿವೃದ್ಧಿಗಾಗಿ ಕಾಯುತ್ತಿವೆ.

ವಿಖ್ಯಾತ ಜಟ್ಟಿಗಳ ಕೊಡುಗೆ: ಇಲ್ಲಿನ ಗರಡಿ ಮನೆಗಳಲ್ಲಿ ತಾಲೀಮು ನಡೆಸಿದ ನೂರಾರು ಜಟ್ಟಿಗಳು, ರಾಜ್ಯ-ಅಂತಾರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಗಳಲ್ಲಿ ಗೆದ್ದು, ಪದಕ, ಪ್ರಮಾಣಪತ್ರಗಳನ್ನು ಗ್ರಾಮಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಅಂತಾರಾಜ್ಯ ಕುಸ್ತಿ ಎದುರಿಸಿದ್ದ ಗ್ರಾಮದ ಶೇಖರಪ್ಪ ಬಸವರಾಜಪ್ಪ ಹಾಗೂ ಉಮಾಪತಿ ಸರ್ಕಾರ ನೀಡುವ 3 ಸಾವಿರ ಮಾಸಾಶನ ಪಡೆಯುತ್ತಿದ್ದಾರೆ. ದಿ. ಕುಸ್ತಿ ಭೀಮಪ್ಪ ಮತ್ತು ಮುನ್ನಾವರ್ ಸಾಬ್ ಇವರು ಮೈಸೂರು ದಸರಾ ಕ್ರೀಡಾಕೂಟದ ಕುಸ್ತಿ ಪಂದ್ಯಾವಳಿಯ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ ಹೆಮ್ಮೆ ಇಲ್ಲಿನದು.

ನೀಲಗಿರಿಯಪ್ಪ, ದಾಸರ ಧರ್ಮಪ್ಪ, ನಿವೃತ್ತ ದೈಹಿಕ ಶಿಕ್ಷಕ ದಾಸರ ಹನುಮಂತಪ್ಪ, ನಿವೃತ್ತ ದೈಹಿಕ ಶಿಕ್ಷಕ ದಿ. ನಾಗೇಂದ್ರಪ್ಪ ಮೊದಲಾದ ಪೈಲ್ವಾನರು ಅಖಾಡದಲ್ಲಿ ಸೆಣಸಾಡಿ ಗೆದ್ದು ಊರಿನ ಕೀರ್ತಿ ಪತಾಕೆಯನ್ನು ಹಾರಿಸಿದ್ದು ಇತಿಹಾಸ. ಗರಡಿ ಮನೆಗಳಲ್ಲಿ ಹಳೆಯ ತಾಲೀಮು ಪರಿಕರಗಳಾದ ಕಲ್ಲಿನ ಗದೆ, ಕಲ್ಲಿನ ದುಂಡಿ, ಭಾರವಾದ ಕಬ್ಬಿಣದ ಸಲಾಕೆಗಳು ಇವೆ. ಇಂದಿನ ಯುವಕರು ಅಷ್ಟಾಗಿ ಗರಡಿ ಮನೆಗಳತ್ತ ತೆರಳಿ ಸಾಮ್ ತೆಗೆಯುವತ್ತ ಮನಸ್ಸು ಮಾಡುತ್ತಿಲ್ಲ.

ದಸರಾ ಹಬ್ಬದಲ್ಲಿ ಮೂರೂ ಗರಡಿ ಮನೆಗಳ ಯುವಕರು ಚಕ್ಕಡಿ ಗಾಡಿಗಳಲ್ಲಿ ಮೈಸೂರಿನ ಅಂಬಾರಿ ಆನೆಯಂತೆ ಕೃತಕ ಆನೆಗಳನ್ನು ತಯಾರಿಸಿ ಅದರ ಮೇಲೆ ದೇವರ ಮೂರ್ತಿ ಕೂರಿಸಿ, ಗ್ರಾಮದ ವೃತ್ತದಲ್ಲಿ ಆಟ ಆಡಿಸಿ ವೈಭವ ಮೆರೆಯುತ್ತಾರೆ. ಹೀಗಾಗಿ ಗರಡಿ ದಸರಾ ಎಂದೇ ನಾಮಾಂಕಿತವಾಗಿದೆ. ಸರ್ಕಾರ ಗರಡಿ ಮನೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ಗ್ರಾಮೀಣ ಕ್ರೀಡೆ ಉಳಿಸಲು ಮುಂದಾಗಬೇಕಿದೆ.

ಹಬ್ಬ- ಜಾತ್ರೆಗಳ ಸಂದರ್ಭದಲ್ಲಿ ಖಾಸಗಿಯಾಗಿ ಕುಸ್ತಿ ಪಂದ್ಯಗಳನ್ನು ನಡೆಸಲಾಗುತ್ತದೆ. ಮುಜರಾಯಿ ದೇವಸ್ಥಾನಗಳ ವ್ಯಾಪ್ತಿಯ ಜಾತ್ರೆಗಳ ಸಂದರ್ಭದಲ್ಲೂ ಕುಸ್ತಿ ಕ್ರೀಡೆಗೆ ಉತ್ತೇಜಿಸಿದಲ್ಲಿ ಅನುಕೂಲವಾಗಲಿದೆ ಎಂಬುದು ಕುಸ್ತಿಪ್ರಿಯರ ಮಾತು.

ಶಿಥಿಲಾವಸ್ಥೆಯಲ್ಲಿನ ಗರಡಿ ಮನೆಗಳನ್ನು ಜೀರ್ಣೋದ್ಧಾರ ಮಾಡಬೇಕು. ಅದರ ಜತೆಯಲ್ಲೇ ಗ್ರಾಮೀಣ ಭಾಗದ ಯುವಕರಿಗೆ ಆಧುನಿಕ ಸಲಕರಣೆಗಳನ್ನು ಒದಗಿಸಬೇಕು. ರಾಷ್ಟ್ರೀಯ ಹಾಗೂ ಅಂತಾ ರಾಷ್ಟ್ರೀಯ ಮಟ್ಟದ ಕುಸ್ತಿ ಪಂದ್ಯಾವಳಿಗಳಿಗೆ ಆಯ್ಕೆಯಾಗಲು ಸಹಕರಿಸಬೇಕು.

ಕೆ. ರವಿ, ಮಾಜಿ ಅಧ್ಯಕ್ಷರು,

ಕನ್ನಡ ಯುವ ಶಕ್ತಿ ಕೇಂದ್ರ, ಮಾಯಕೊಂಡ

ಗರಡಿ ಮನೆಗಳ ವೈಭವ ಮರುಕಳಿಸಬೇಕಿದೆ. ಕುಸ್ತಿ ತಾಲೀಮಿಗೆ ಸರ್ಕಾರ ಅತ್ಯಾಧುನಿಕ ಸಲಕರಣೆಗಳನ್ನು ಸರ್ಕಾರ ಒದಗಿಸಬೇಕು ಗ್ರಾಮೀಣ ಯುವಕರಿಗೆ ಕುಸ್ತಿ ತರಬೇತಿ ನೀಡುವತ್ತಲೂ ಕ್ರಮ ಆಗಬೇಕಿದೆ.

ಬಸವರಾಜಪ್ಪ, ಮಾಜಿ ಕುಸ್ತಿಪಟು,

ಮಾಯಕೊಂಡ

ಅಮೃತ ಗ್ರಾಮ ಯೋಜನೆಯಡಿ ಮೂರೂ ಗರಡಿ ಮನೆಗಳ ಅಭಿವೃದ್ಧಿಗಾಗಿ 2.20 ಲಕ್ಷ ರೂ.ಗಳನ್ನು ಮೀಸಲಿರಿಸಿದ್ದು, ಈ ಬಗ್ಗೆ ಕಾರ್ಯಾದೇಶವಾಗಿದೆ. ಸದ್ಯದಲ್ಲೇ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ಸಿಗಲಿದೆ.

ಎನ್. ಶ್ರೀನಿವಾಸ್, ಪಿಡಿಒ, ಗ್ರಾಪಂ ಮಾಯಕೊಂಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net