ಮಕ್ಕಳ ಪ್ರತಿಭೆ ಗುರುತಿಸುವ ಕಾರ್ಯವಾಗಲಿ

CHN PRATIBHA KARANGI
Published on

ಚನ್ನಗಿರಿ: ಗ್ರಾಮೀಣ ಮಕ್ಕಳಿಗೆ ದೇವರು ವಿಶೇಷವಾಗಿ ಪ್ರತಿಭೆಯನ್ನು ನೀಡಿರುತ್ತಾನೆ, ಆದರೆ ಅದಕ್ಕೆ ಪ್ರೋತ್ಸಾಹ ಸಿಗದೆ ಗ್ರಾಮಗಳಲ್ಲಿ ಉಳಿಯುತ್ತವೆ. ಅಂತಹ ಪ್ರತಿಭೆಯನ್ನು ಗುರುತಿಸಿ ಹೊರತರುವಂತಹ ಕೆಲಸ ಪಾಲಕರು ಹಾಗೂ ಶಿಕ್ಷಕರಿಂದ ಆಗಬೇಕು ಎಂದು ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ತಿಳಿಸಿದರು.

ತಾಲೂಕಿನ ಕೆಂಗಾಪುರ ಶ್ರೀ ರಾಮಲಿಂಗೇಶ್ವರ ವಿದ್ಯಾಸಂಸ್ಥೆ ಆವರಣದಲ್ಲಿ ಸೋಮವಾರ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಾಲೆಗಳಲ್ಲಿ ವ್ಯಾಸಂಗ ಮಾಡುವ ಮಕ್ಕಳು ನಮ್ಮವರು ಎನ್ನುವ ಭಾವನೆ ಶಿಕ್ಷಕರಲ್ಲಿರಬೇಕು. ತೀರ್ಪು ನೀಡುವಂತವರು ಶಿಫಾರಸು ಮಾಡದೇ ಪ್ರತಿಭೆ ಸೂಕ್ತ ತೀರ್ಪನ್ನು ನೀಡಿ, ನಿಜವಾದ ಪ್ರತಿಭೆಗೆ ಪ್ರೋತ್ಸಾಹ ಸಿಕ್ಕಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗೆಲುವು ಸಾಧಿಸಿ ಶಾಲೆಗೆ ಕೀರ್ತಿ ತರುತ್ತಾರೆ ಎಂದರು.

ಮಕ್ಕಳು ಟಿವಿ ಹಾಗೂ ಮೊಬೈಲ್‌ಗಳ ದಾಸರಾಗಿದ್ದಾರೆ. ಬದಲಿಗೆ ಪುಸ್ತಕದ ದಾಸರಾಗಿ, ಅದು ನಿಮ್ಮನ್ನ ತಲೆ ಮೇಲಕ್ಕೆ ಎತ್ತುವಂತೆ ಮಾಡುತ್ತದೆ. ಮೊಬೈಲ್‌ನನ್ನು ಬೆಳವಣಿಗೆಗೆ ಬಳಸಿಕೊಳ್ಳಿ ಎಂದರು.

ಸಾನ್ನಿಧ್ಯ ವಹಿಸಿದ್ದ ಕೆಂಗಾಪುರ ಮಠದ ಶ್ರೀ ರಾಮಲಿಂಗೇಶ್ವರ ಸ್ವಾಮಿಗಳು ಮಾತನಾಡಿ, ಪ್ರತಿಭೆಗೆ ಬಡತನ, ಶ್ರೀಮಂತಿಕೆ, ಜಾತಿ ಅಡ್ಡಿ ಆಗುವುದಿಲ್ಲ. ನಿಮಗೆ ಇಷ್ಟವಾದ ವಿಷಯದಲ್ಲಿ ಆಸಕ್ತಿ ತೋರಿಸಿ ಮಾರ್ಗದರ್ಶನ ಪಡೆದರೆ ಗುರಿಯನ್ನು ಸುಲಭವಾಗಿ ತಲುಪಬಹುದು. ವಿದ್ಯಾರ್ಥಿ ಜೀವನ ಬಂಗಾರ ಆಗುವುದು ಕಲಿಕೆಯನ್ನು ಪೂರ್ಣಗೊಳಿಸಿದಾಗ, ವ್ಯಾಸಂಗ ಮಾಡುವ ಸಮಯದಲ್ಲಿ ಮನಸ್ಸು ಬೇರೆಡೆಗೆ ವಾಲಿದರೆ ಜೀವನದಲ್ಲಿ ಕಷ್ಟ ಅನುಭವಿಸಬೇಕಾಗುತ್ತದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಲ್. ಜಯಪ್ಪ, ಕ್ಷೇತ್ರ ಸಮನ್ವಯಾಧಿಕಾರಿ ಡಾ.ಎಸ್. ಶಂಕರಪ್ಪ, ಕಣಿವೆಬಿಳಚಿ ಗ್ರಾಪಂ ಅಧ್ಯಕ್ಷೆ ಲತಾ ಶ್ರೀನಿವಾಸ್, ಸರ್ಕಾರಿ ನೌಕರ ಸಂಘದ ತಾಲೂಕು ಅಧ್ಯಕ್ಷ ಗಣೇಶ್, ಅಕ್ಷರ ದಾಸೋಹ ತಾಲೂಕು ನಿರ್ದೇಶಕ ಹಾಲಸಿದ್ದಪ್ಪ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ವಿ. ಸ್ವಾಮಿ, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಜಯಪ್ರಕಾಶ್, ಗುರುಮೂರ್ತಿ ವಸಂತ್, ಸದಾಶಿವಪ್ಪ, ರಾಮಚಂದ್ರಪ್ಪ, ಕುಬೇರಪ್ಪ, ಅಶೋಕ್, ಹನುಮಂತಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net