

ರಾಮನಗರ: ತಾಲೂಕಿನ ಮಾಯಗಾನಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವಸದಸ್ಯರ ಸಭೆಯಲ್ಲಿ ಹಾಲು ಉತ್ಪಾದಕರು ಮತ್ತು ಸಂಘದ ಅಧ್ಯಕ್ಷರ ನಡುವೆ ವಾಗ್ವಾದ ನಡೆದು, ಎರಡೂ ಕಡೆಯವರ ಮಧ್ಯೆ ತೀವ್ರ ಜಟಾಪಟಿಗೆ ಆಸ್ಪದವಾಯಿತು.
ಸಂಘದ ಅಧ್ಯಕ್ಷ ಪಿ.ನಾಗರಾಜು ಅಧ್ಯಕ್ಷತೆಯಲ್ಲಿ ಮಂಗಳವಾರ ಸರ್ವಸದಸ್ಯರ ವಾರ್ಷಿಕ ಸಭೆ ಕರೆಯಲಾಗಿತ್ತು. ಸಂಘದ ನಿರ್ದೇಶಕ ಪುಟ್ಟಲಿಂಗಯ್ಯ ಅವರು ಪುತ್ರ ಯೋಗೇಶ್ ಮತ್ತು ಕೆಲ ಸದಸ್ಯರ ಜತೆಗೂಡಿ ಸಭೆಗೆ ಆಗಮಿಸಿ, ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಸಲ್ಲಿಸಲು ಮುಂದಾದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಂಘದ ಅಧ್ಯಕ್ಷ ಪಿ.ನಾಗರಾಜು, ಇದು ಸರ್ವ ಸದಸ್ಯರ ಸಭೆ, ಇದಕ್ಕೆ ಹೊರಗಿನವರು ಬರಲು ಅವಕಾಶವಿಲ್ಲ ಎಂದರು. ಇದರಿಂದಾಗಿ ಕುಪಿತಗೊಂಡ ಯೋಗೇಶ್ ಮತ್ತು ಕೆಲ ಹಾಲು ಉತ್ಪಾದಕ ಸದಸ್ಯರು ಪಿ.ನಾಗರಾಜು ಜತೆ ವಾಗ್ವಾದಕ್ಕಿಳಿದರು. ಇದರಿಂದಾಗಿ ಸಭೆಯಲ್ಲಿ ಕೆಲಕಾಲ ಗೊಂದಲ ಗದ್ದಲ ಏರ್ಪಟ್ಟಿತು.
ಲಕ್ಷಾಂತರ ರೂ. ಅವ್ಯವಹಾರ? : ಯೋಗೇಶ್ ಮಾತನಾಡಿ, ನಮ್ಮ ತಂದೆ ಅನಕ್ಷರಸ್ಥರಾಗಿದ್ದು, ಇವರನ್ನು ನೇಪಮಾತ್ರಕ್ಕೆ ನಿರ್ದೇಶಕರನ್ನಾಗಿ ಮಾಡಿಕೊಂಡಿದ್ದಾರೆ. ಸಂಘದಲ್ಲಿ ನಡೆದಿರುವ ಲಕ್ಷಾಂತರ ರೂಪಾಯಿ ಅವ್ಯವಹಾರ ಖಂಡಿಸಿ ರಾಜೀನಾಮೆ ಸಲ್ಲಿಸುತ್ತಿದ್ದಾರೆ. ಸಭೆಯ ಪೂರ್ವಭಾವಿ ನೋಟಿಸ್‌ಗಳನ್ನು ನೀಡದೆ ಕಾರ್ಯಕಾರಿ ಸಭೆ, ಮಹಾಸಭೆ ಹಾಗೂ ಚುನಾವಣೆಗಳನ್ನು ಯಾವ ಸದಸ್ಯರ ಗಮನಕ್ಕೂ ಬಾರದ ರೀತಿಯಲ್ಲಿ ಸರ್ವಾಧಿಕಾರಿಯಂತೆ 20 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. 2022-23ನೇ ಸಾಲಿನಲ್ಲಿ ಚುನಾವಣೆ ಖರ್ಚಿನ ನೆಪದಲ್ಲಿ 1 ಲಕ್ಷ ರೂಪಾಯಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪ ಮಾಡಿದರು.
ಚುನಾವಣೆಯನ್ನೇ ನಡೆಸದೆ ಅಧ್ಯಕ್ಷರಾಗಿರುವ ಪಿ.ನಾಗರಾಜು ಒಂದು ಲಕ್ಷ ರೂ.ಖರ್ಚು ಎಂದು ತೋರಿಸಿದ್ದಾರೆ. ಪುಟ್ಟಲಿಂಗಯ್ಯ ನಿರ್ದೇಶಕರಾದ ಮೇಲೆ ಯಾವ ಸಭೆಗೂ ಸೂಚನಾ ಪತ್ರ ನೀಡಿಲ್ಲ. ಖರೀದಿಸಿರುವ ನಿವೇಶನ ಬಿಟ್ಟು ಬೇರೆ ನಿವೇಶನದಲ್ಲಿ ಸಂಘದ ಕಟ್ಟಡ ನಿರ್ಮಾಣ ಮಾಡಲಾಗಿದೆ. ಗ್ರಾಮದ ಅಂಚಿನಲ್ಲಿಯೇ ಕಡಿಮೆ ಬೆಲೆಯಲ್ಲಿ ಡೇರಿ ಕಟ್ಟಡಕ್ಕೆ ನಿವೇಶನ ಲಭ್ಯವಿದ್ದರೂ ಪಿ.ನಾಗರಾಜು ಆಸ್ತಿಯಲ್ಲಿ ಅತಿ ಹೆಚ್ಚು ಬೆಲೆ ನಿವೇಶನ ಖರೀದಿಸಲು ಮಹಾಸಭೆಯಲ್ಲಿ ತೀರ್ಮಾನ ಮಾಡಿಸಿದರು. ವರ್ಷಾನುಗಟ್ಟಲೆ ಸಂಘಕ್ಕೆ ಹಾಲು ಸರಬರಾಜು ಮಾಡಿದ ರೈತರಿಗೆ ಸದಸ್ಯತ್ವ ನೀಡದೆ ವಂಚಿಸುತ್ತಿರುವುದರ ಉದ್ದೇಶ ಏನೆಂದು ಪ್ರಶ್ನಿಸಿದರು.
ಸಂಘದಲ್ಲಿ ಅಧ್ಯಕ್ಷ ಮತ್ತು ಮುಖ್ಯಕಾರ್ಯನಿರ್ವಾಹಕರು ಸ್ವೇಚ್ಛಾಚಾರದಿಂದ ವರ್ತಿಸುತ್ತಿದ್ದು, ಇವರ ಕುತಂತ್ರಗಳಿಂದಾಗಿ ಸಂಘಕ್ಕೆ ಹಿನ್ನಡೆಯಾಗಿದೆ. ಇದನ್ನು ಖಂಡಿಸಿ ಪುಟ್ಟಲಿಂಗಯ್ಯ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದಾರೆ ಎಂದರು.
ಸ್ವಂತ ಹಣದಲ್ಲಿ ಕಟ್ಟಡ ನಿರ್ಮಾಣ: ಅವ್ಯವಹಾರದ ಆರೋಪಕ್ಕೆ ಕೆಎಂಎ್ ಮಾಜಿ ಅಧ್ಯಕ್ಷ ಪಿ.ನಾಗರಾಜು ಪ್ರತಿಕ್ರಿಯಿಸಿ, ಸಂಘದ ಕಟ್ಟಡ ನಿರ್ಮಾಣ ಮತ್ತು ನಿವೇಶನದ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂಬುದು ಸತ್ಯಕ್ಕೆ ದೂರವಾದ ಮಾತು. 37 ಲಕ್ಷ ರೂ. ನನ್ನ ಸ್ವಂತಹಣದಲ್ಲಿ ಸಂಘದ ಕಟ್ಟಡವನ್ನು ನಿರ್ಮಾಣ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು.