ಭಕ್ತರಿಗೆ ಮೂಲ ಸೌಕರ್ಯ ಕೊರತೆಯಾಗದಿರಲಿ

ಭಕ್ತರಿಗೆ ಮೂಲ ಸೌಕರ್ಯ ಕೊರತೆಯಾಗದಿರಲಿ
Published on

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಐತಿಹಾಸಿಕ ಹಿನ್ನೆಲೆ ಇರುವ ಶ್ರೀ ಭ್ರಮಾರಾಂಬ ಸಮೇತ ಶ್ರೀ ಸಿಡಿಲು ಮಲ್ಲಿಕಾರ್ಜುನಸ್ವಾಮಿ ರಥೋತ್ಸವವು ಫೆ.13ರಿಂದ ನಡೆಯಲಿರುವ ಹಿನ್ನೆಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆ ಹಾಗೂ ತಾಲೂಕು ಆಡಳಿತ ವತಿಯಿಂದ ಬೆಟ್ಟದಪುರದ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಪೂರ್ವಭಾವಿ ಸಭೆ ನಡೆಯಿತು.

ಸಭೆಯಲ್ಲಿ ಜಾತ್ರೆ ಸಂದರ್ಭದಲ್ಲಿ ಬರುವ ಭಕ್ತರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ, ಗ್ರಾಮದ ನೈರ್ಮಲ್ಯ ಕಾಪಾಡುವ ಕುರಿತು, ವಿದ್ಯುತ್ ದೀಪ ಅಲಂಕಾರ, ದೇವಸ್ಥಾನಕ್ಕೆ ಸುಣ್ಣ-ಬಣ್ಣ ಹೊಡೆಸುವುದು, ಜಾತ್ರೆ ಹರಾಜು, ಜಾನುವಾರು ಜಾತ್ರೆಗೆ ಸಮಸ್ಯೆಯಾಗದಂತೆ ವ್ಯವಸ್ಥೆ ಸೇರಿದಂತೆ ಮೂಲ ಸೌಕರ್ಯಗಳನ್ನು ನೋಡಿಕೊಳ್ಳಬೇಕು, ಬೆಟ್ಟಕ್ಕೆ ಸಿಸಿ ಕ್ಯಾಮರಾ ಹಾಗೂ ಸೋಲಾರ್ ಲೈಟ್ ಅಳವಡಿಕೆ ಸೇರಿದಂತೆ ಅನೇಕ ವಿಚಾರಗಳನ್ನು ಸ್ಥಳೀಯ ಮುಖಂಡರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಚರ್ಚಿಸಲಾಯಿತು.

ಹುಣಸೂರು ಉಪವಿಭಾಗಾಧಿಕಾರಿ ಎಚ್.ಬಿ ವಿಜಯಕುಮಾರ್ ಮಾತನಾಡಿ, ಕುಡಿಯುವ ನೀರು, ಜಾನುವಾರಗಳಿಗೆ ನೀರಿನ ವ್ಯವಸ್ಥೆ ಮತ್ತು ಗ್ರಾಮದ ನೈರ್ಮಲ್ಯ ಕಾಪಾಡುವಂತೆ ಗ್ರಾಮ ಪಂಚಾಯಿತಿ ಅಧಿಕಾರಿ ವರ್ಗದವರು ನೋಡಿಕೊಳ್ಳಬೇಕು. ಬೆಟ್ಟ ಸೇರಿದಂತೆ ಜಾತ್ರಾ ಮಹೋತ್ಸವದಲ್ಲಿ ಯಾವುದೇ ಸಮಸ್ಯೆಗಳು ಆಗದಂತೆ ಪೊಲೀಸ್ ಇಲಾಖೆ ಅಧಿಕಾರಿಗಳು ವಿಶೇಷ ಒತ್ತು ನೀಡಬೇಕು. ತುರ್ತು ಆರೋಗ್ಯ ಸೇವೆ ನೀಡುವ ಮೂಲಕ ಜಾತ್ರೆಗೆ ಬರುವ ಭಕ್ತರ ಆರೋಗ್ಯ ತಪಾಸಣೆಗೆ ಆರೋಗ್ಯ ಇಲಾಖೆಯ ವೈದ್ಯರು, ಸಿಬ್ಬಂದಿ ಕಾಳಜಿ ವಹಿಸಬೇಕು. ಜಾತ್ರಾ ಸಂದರ್ಭದಲ್ಲಿ ಗ್ರಾಮವು ಕಂಗೊಳಿಸುವಂತೆ ಬೇಕಾದ ಎಲ್ಲ ರೀತಿಯ ದೀಪಾಲಂಕಾರ ಸೇರಿದಂತೆ ವಿದ್ಯುತ್ ಪೂರೈಕೆ ಮಾಡುವ ಬಗ್ಗೆ ಸ್ಥಳೀಯ ವಿದ್ಯುತ್ ಇಲಾಖೆಯವರು ವ್ಯವಸ್ಥೆ ಮಾಡಬೇಕು. ಅಲ್ಲದೆ ಭಕ್ತರು ಹಾಗೂ ಗ್ರಾಮದ ಎಲ್ಲ ಮುಖಂಡರು ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿಯ ಜಾತ್ರೆಗೆ ಸಹಕರಿಸಬೇಕು ಎಂದರು.

ತಹಸೀಲ್ದಾರ್ ನಿಸರ್ಗ ಪ್ರಿಯಾ ಮಾತನಾಡಿ, ಸ್ಥಳೀಯರು, ಮುಖಂಡರು ಹಾಗೂ ಭಕ್ತರ ಸಹಕಾರದ ಮೂಲಕ ಜಾತ್ರೆಯನ್ನು ಸಂಭ್ರಮದಿಂದ ಆಚರಿಸೋಣ. ಜಾತ್ರೆಯ ಯಶಸ್ವಿಗೆ ತಾಲೂಕು ಆಡಳಿತದಿಂದ ಎಲ್ಲ ರೀತಿಯ ಸಹಕಾರ ನೀಡಲಾಗುತ್ತಿದೆ. ಜ.30ರಂದು ಜಾತ್ರೆ ಹರಾಜು ನಡೆಯಲಿದೆ. ಫೆ.3ರಿಂದ ಫೆ.7ರವರೆಗೆ ಜಾನುವಾರು ಜಾತ್ರೆ ನಡೆಯಲಿದೆ. ಫೆ.7ರಿಂದ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಜಾತ್ರಾ ಮಹೋತ್ಸವ ಆರಂಭಗೊಳ್ಳಲಿದ್ದು, ಫೆ.12ರಂದು ಗಿರಿಜಾ ಕಲ್ಯಾಣೋತ್ಸವ ಮತ್ತು ಫೆ.13ರಂದು ಬ್ರಹ್ಮ ರಥೋತ್ಸವ ಜರುಗಲಿದೆ. ಯಾವುದೇ ಅಡಚಣೆಗಳನ್ನು ಮಾಡಿಕೊಳ್ಳದೆ, ಪ್ರತಿಯೊಬ್ಬರೂ ಎಲ್ಲ ಉತ್ಸವಗಳಲ್ಲಿ ಭಾಗಿಯಾಗಿ ಯಶಸ್ವಿ ಮಾಡಬೇಕು ಎಂದರು.

ಗ್ರಾ.ಪಂ ಅಧ್ಯಕ್ಷ ರಾಜಶೇಖರ್, ಪಶು ಸಂಗೋಪನಾ ಇಲಾಖೆಯ ತಾಲೂಕು ಸಹಾಯಕ ನಿರ್ದೇಶಕ ಡಾ.ಸೋಮಯ್ಯ, ಲೋಕೋಪಯೋಗಿ ಇಲಾಖೆಯ ಎಇಇ ವೆಂಕಟೇಶ್, ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಶಿವಶಂಕರ್, ವೈದ್ಯಾಧಿಕಾರಿ ಡಾ.ಪೂಜಾ, ಉಪತಹಸೀಲ್ದಾರ್ ಶಶಿಧರ್, ಸೆಸ್ಕ್ ಎಇ ಪ್ರಶಾಂತ್, ಕಂದಾಯ ನಿರೀಕ್ಷಕ ಅಜ್ಮಲ್ ಷರೀಫ್, ಗ್ರಾ.ಪಂ. ಸದಸ್ಯೆ ಶಿಲ್ಪಾ, ಕಾರ್ಯದರ್ಶಿ ಪಾಂಡು, ಅರ್ಚಕ ಸತೀಶ್ ಕಶ್ಯಪಾ, ಕೃಷ್ಣಪ್ರಸಾದ್, ಗ್ರಾಮ ಆಡಳಿತಾಧಿಕಾರಿ ನಿರಂಜನ್, ಸಿದ್ದೇಶ್, ಗುರುನಾಯಕ್, ಅಯ್ಯಪ್ಪ, ಕೇಶವರಾಜು, ವೀಕ್ಷಿತಾ, ಪ್ರೀತಿಕಾ, ಚೈತ್ರಾ, ಯಲ್ಲಪ್ಪ ಸೇರಿದಂತೆ ವಿವಿಧ ಸಮುದಾಯದ ಮುಖಂಡರು, ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net