ಕಾಮಗಾರಿಗಳು ಶೀಘ್ರ ಪೂರ್ಣಗೊಳ್ಳಲಿ

19 HANUR 3
Published on

ಹನೂರು: ಪ್ರಾಧಿಕಾರ ವತಿಯಿಂದ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವ ಮೂಲಕ ಭಕ್ತರ ಸೇವೆಗೆ ಸಮರ್ಪಿಸಬೇಕು. ಈ ಸಂಬಂಧ ಅಗತ್ಯ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಟಿ ಶಿಲ್ಪಾನಾಗ್ ಅಧಿಕಾರಿಗಳಿಗೆ ಸೂಚಿಸಿದರು.


ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಕೈಗೊಂಡಿರುವ ಕಾಮಗಾರಿಗಳ ಸಂಬಂಧ ತಾಲೂಕಿನ ಮಲೆಮಹದೇಶ್ವರ ಬೆಟ್ಟದ ನಾಗಮಲೆ ಭವನದಲ್ಲಿ ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು.


ಭಕ್ತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಧಿಕಾರದಿಂದ ಹಲವು ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಇದರಲ್ಲಿ ದೀಪದಗಿರಿ ಒಡ್ಡುವಿನಲ್ಲಿ 21 ಕೋಟಿ ರೂ. ವೆಚ್ಚದಲ್ಲಿ ಈಗಾಗಲೇ ಮಹದೇಶ್ವರರ ಪ್ರತಿಮೆ ನಿರ್ಮಿಸಲಾಗಿದೆ. ಆದರೆ ಗುಹೆಯಲ್ಲಿ ಮ್ಯೂಸಿಯಂ ಹಾಗೂ ಸಿಸಿ ರಸ್ತೆ ಕಾಮಗಾರಿ ವಿಳಂಬ ಗತಿಯಲ್ಲಿ ಸಾಗುತ್ತಿದೆ. ಇದರಿಂದ ಭಕ್ತರಿಗೆ ಸೇವೆ ದೊರಕದಂತಾಗಿದ್ದು, ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಆದ್ದರಿಂದ ಸಂಬಂಧಪಟ್ಟವರು ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು.ದೊಡ್ಡಕೆರೆ ಅಭಿವೃದ್ಧಿ, ಭಕ್ತರ ವಸತಿ ಕಟ್ಟಡ, ತಾಳುಬೆಟ್ಟದಿಂದ ಮ.ಬೆಟ್ಟದವರೆಗೆ ಮೆಟ್ಟಿಲುಗಳ ನಿರ್ಮಾಣ ಕಾಮಗಾರಿ, ಒಳ ಚರಂಡಿ ಪ್ರಗತಿಯಲ್ಲಿದ್ದು, ಬಾಕಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.


ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ: ಪುಣ್ಯ ಕ್ಷೇತ್ರದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ದೂರು ಕೇಳಿ ಬಂದಿದೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು. ಅಕ್ರಮ ಮಣ್ಣು ಸಾಗಣೆ ಹಾಗೂ ಅಕ್ರಮ ಕಟ್ಟಡ ನಿರ್ಮಾಣ ಮಾಡುತ್ತಿರುವವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.


ಶಾಸಕ ಎಂ.ಆರ್ ಮಂಜುನಾಥ್ ಮಾತನಾಡಿ, ಮ.ಬೆಟ್ಟಕ್ಕೆ ಇತ್ತೀಚಿನ ವರ್ಷಗಳಲ್ಲಿ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಆದ್ದರಿಂದ ಮೂಲ ಸೌಕರ್ಯ ಒದಗಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಕೈಗೊಂಡಿರುವ ಕಾಮಗಾರಿಗಳು ವಿಳಂಬ ಗತಿಯಲ್ಲಿ ಸಾಗುತ್ತಿದೆ. ಇದರಿಂದ ಸೇವೆ ಲಭ್ಯವಾಗಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಅಗತ್ಯ ಮುತುರ್ವಜಿ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.


ಇದೇ ವೇಳೆ ಸಾಲೂರು ಬೃಹನ್ಮಠದ ಫೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರಿಂದ ಅಗತ್ಯ ಸಲಹೆ ಮತ್ತು ಸೂಚನೆಯನ್ನು ಪಡೆಯಲಾಯಿತು. ಬಳಿಕ ಶಾಸಕರು ಹಾಗೂ ಅಧಿಕಾರಿಗಳು ಕಾಮಗಾರಿಗಳನ್ನು ವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಶೀಲನೆ ನಡೆಸಿದರು.
ಜಿಪಂ ಸಿಇಒ ಆನಂದ್ ಪ್ರಕಾಶ್ ಮೀನಾ, ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು, ಉಪ ಕಾರ್ಯದರ್ಶಿ ಚಂದ್ರಶೇಖರ್, ತಹಸೀಲ್ದಾರ್ ವೈ.ಕೆ ಗುರುಪ್ರಸಾದ್, ಪಿಡಬ್ಯುಡಿ ಇಇ ಮಹೇಶ್, ಎಇಇ ಚಿನ್ನಣ್ಣ, ಪಿಡಿಒ ಕಿರಣ್‌ಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net