

ಗುಂಡ್ಲುಪೇಟೆ: ಮಹಾತ್ಮ ಗಾಂಧೀಜಿ ಕಂಡ ಕನಸು ನನಸಾಗಬೇಕಾದರೆ ಗ್ರಾಮಗಳು ಉದ್ಧಾರವಾಗಬೇಕು ಎಂದು ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ತಾಲೂಕಿನ ಬೆರಟಹಳ್ಳಿ ಗ್ರಾಮದಲ್ಲಿ ಮಾರಮ್ಮನ ದೇವಾಲಯ ಪ್ರಾರಂಭೋತ್ಸವ ಹಾಗೂ ಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ ಸೋಮವಾರ ಏರ್ಪಡಿಸಿದ್ದ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಗ್ರಾಮಗಳಲ್ಲಿ ಕೃಷಿ ಸೇರಿದಂತೆ ಇನ್ನಿತರ ಕಾಯಕ ಚಟುವಟಿಕೆಗಳು ಸಮರ್ಪಕವಾಗಿ ನಡೆದರೆ ಅಭಿವೃದ್ಧಿ ಆಗುತ್ತದೆ. ಇದರಿಂದ ದೇಶವೂ ಅಭಿವೃದ್ಧಿ ಕಾಣುತ್ತದೆ. ಹಳ್ಳಿಯ ಜನರು ಪಟ್ಟಣ ಪ್ರದೇಶಗಳಿಗೆ ವಲಸೆ ಹೋಗುವುದನ್ನು ಬಿಟ್ಟು, ಅಲ್ಲಿನ ಜನರೇ ಬದುಕಲು ಬೇಕಾದ ವಾತಾವರಣ ಈಗಲೂ ಇದೆ. ಆದ್ದರಿಂದ ಪಟ್ಟಣಕ್ಕೆ ವಲಸೆ ಹೋಗಿರುವವರು ಗ್ರಾಮಗಳಿಗೆ ಮರಳುವಂತೆ ಮಾಡಬೇಕು. ಸರ್ಕಾರಗಳು ನೀಡುವ ಸೌಲಭ್ಯಗಳನ್ನು ಬಳಸಿಕೊಂಡು ಬೆಳವಣಿಗೆ ಹೊಂದಬೇಕು ಎಂದು ಹೇಳಿದರು.
ವಿಜ್ಞಾನ ತಂತ್ರಜ್ಞಾನವನ್ನು ಬಳಸಿಕೊಂಡು ಅನೇಕ ವಸ್ತುಗಳನ್ನು ತಯಾರಿಸಿರಬಹುದು. ಆದರೆ, ಅವುಗಳನ್ನು ಆಹಾರವಾಗಿ ಸೇವಿಸಲು ಸಾಧ್ಯವಿಲ್ಲ. ರೈತ ಭೂಮಿಯಲ್ಲಿ ಉತ್ತು ಬಿತ್ತು ಬೆಳೆದ ಪದಾರ್ಥಗಳನ್ನೇ ಆಹಾರವಾಗಿ ಬಳಸಬೇಕು. ಆದ್ದರಿಂದ ಎಲ್ಲರೂ ರೈತರ ಪರವಾಗಿ ಇರಬೇಕು. ಹಳ್ಳಿಗಳಲ್ಲಿ ಧರ್ಮ ಜಾಗೃತಿ ಮೂಡಬೇಕು. ಲೌಕಿಕ, ಪಾರಮಾರ್ಥಿಕ ವಿಷಯಗಳು ಅರಿತುಕೊಳ್ಳಬೇಕು ಎಂದರು.
ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ಮಾತನಾಡಿ, ಜಗತ್ತಿನಲ್ಲಿ ಪ್ರಸ್ತುತ ಹವಾಮಾನ ವೈಪರೀತ್ಯಗಳಿಂದ ತಾಪಮಾನ ಏರಿಕೆಯಾಗಿ ಮನುಷ್ಯನ ಜೀವನದ ಮೇಲೆ ಪ್ರಭಾವ ಬೀರುತ್ತಿದೆ. ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಆಕ್ಸಿಜನ್ ಬ್ಯಾಂಕುಗಳನ್ನು ಸ್ಥಾಪನೆ ಮಾಡಿದ್ದಾರೆ. ಇಂತಹ ಪರಿಸ್ಥಿತಿ ಹಳ್ಳಿಗಳಿಗೂ ಬಾರದೆ ಇರಲು ಜಾಗವಿರುವ ಕಡೆಯಲ್ಲಿ ಗಿಡ ನೆಡುವುದೊಂದೆ ಪರಿಹಾರ. ತಾಲೂಕಿನ ಮೂಡುಗೂರು ಮಠದ ಇಮ್ಮಡಿ ಉದ್ದಾನ ಸ್ವಾಮೀಜಿ ಅವರು ಹಸಿರೀಕರಣ ಮಾಡಲು ಅಭಿಯಾನ ನಡೆಸುತ್ತಿದ್ದಾರೆ. ತಾವೇ ಗಿಡಗಳನ್ನು ಬೆಳೆಸಿ ವಿತರಣೆ ಮಾಡುತ್ತಿದ್ದಾರೆ. ಈ ಕಾರ್ಯಕ್ಕೆ ತಮ್ಮ ಬೆಂಬಲವೂ ಇದ್ದು, ತಾಲೂಕಿನ ಪರಿಸರ ಸಂರಕ್ಷಣೆಗೆ ಕಟಿಬದ್ಧರಾಗಿರುವುದಾಗಿ ತಿಳಿಸಿದರು.
ಸಭೆಯಲ್ಲಿ ಸೋಮಹಳ್ಳಿ ಮಠದ ಸಿದ್ದಮಲ್ಲಪ್ಪ ಸ್ವಾಮೀಜಿ, ಪಡುಗೂರು ಮಠದ ಶ್ರೀಶಿವಲಿಂಗೇದ್ರ ಸ್ವಾಮೀಜಿ, ಶ್ರೀಇಮ್ಮಡಿ ಉದ್ದಾನ ಸ್ವಾಮೀಜಿ, ಸಿದ್ಧಗಂಗಾ ಮಠದ ಕಿರಿಯ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ, ಕನಕಪುರ ದೇಗುಲ ಮಠದ ಕಿರಿಯ ಶ್ರೀ ಚನ್ನಬಸವ ಸ್ವಾಮೀಜಿ, ಮರಿಯಾಲ ಮಠದ ಶ್ರೀಮುರುಘಾ ರಾಜೇಂದ್ರ ಸ್ವಾಮೀಜಿ, ಹರವೆ ಮಠದ ಶ್ರೀಸರ್ಪಭೂಷಣ ಸ್ವಾಮೀಜಿ, ರಾಮಾಪುರ ಮಠದ ಶ್ರೀಬಸವಣ್ಣ ಸ್ವಾಮೀಜಿ, ನಿವೃತ್ತ ಪ್ರಾಧ್ಯಾಪಕ ಡಿ.ಎಸ್.ಸದಾಶಿವಮೂರ್ತಿ, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಚಾಮುಲ್ ನಿರ್ದೇಶಕ ಎಂ.ಪಿ.ಸುನಿಲ್ ಇತರರಿದ್ದರು.