

ಯಳಂದೂರು: ತಾಲೂಕಿನ ಅಗರ ಗ್ರಾಮದಲ್ಲಿ ಜನಿಸಿ ಜಗತ್ತಿನ ಹಲವು ದೇಶಗಳನ್ನು ಸುತ್ತಿ 23 ನಾಟಕಗಳನ್ನು ಕನ್ನಡದಲ್ಲಿ ರಚಿಸಿ ನಾಡಿನಾದ್ಯಂತ ಖ್ಯಾತಿ ಪಡೆದ ಸಂಸ ನಮ್ಮ ನಾಡಿನ ಹೆಮ್ಮೆಯಾಗಿದ್ದು, ಇವರ ಬಗ್ಗೆ ಇನ್ನಷ್ಟು ಬೆಳಕು ಚೆಲ್ಲುವ ಕೆಲಸವಾಗಬೇಕಿದೆ ಎಂದು ತಾಲೂಕು ಕಸಾಪ ಅಧ್ಯಕ್ಷ ಯರಿಯೂರು ನಾಗೇಂದ್ರ ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಸಂಸ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಅಗರ ಗ್ರಾಮದಲ್ಲಿ ಜನಿಸಿದ ಸಂಸ ಅವರ ಮೂಲ ಹೆಸರು ಎ.ಎಂ. ಸ್ವಾಮಿ ವೆಂಕಟಾದ್ರಿ ಅಯ್ಯರ್ ಆಗಿತ್ತು. ಆದರೆ, ತಮ್ಮ ಕಾವ್ಯನಾಮವಾದ ಕಂಸದ ಅಪಭ್ರಂಶ ಶಬ್ಧ ತಮ್ಮ ನಾಟಕದಲ್ಲಿ ತಪ್ಪಾಗಿ ಅಚ್ಚಾಗಿ ಸಂಸ ಎಂದಾಗಿ ಅಂದಿನಿಂದ ಸುಮಾರು 13 ಹೆಸರುಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದ ಇವರು ಕೊನೆಗೆ ಸಂಸರಾಗಿ ಉಳಿದಿರುವುದು ಇತಿಹಾಸ ಎಂದರು.
ನಮ್ಮ ಜಿಲ್ಲೆ ಸಾಹಿತ್ಯ, ಜಾನಪದದಲ್ಲಿ ಶ್ರೀಮಂತಿಕೆಯನ್ನು ಪಡೆದುಕೊಂಡಿದೆ. ಇದು ಜಾಗೃತ ಭೂಮಿಯಾಗಿದ್ದು, ವಿಶ್ವಮಾನವ ಸಂದೇಶ ಸಾರಿದ ಅನೇಕ ಪವಾಡಪುರುಷರ ನೆಲೆ ಬೀಡಾಗಿದೆ. ಇಂತಹ ಭೂಮಿಯಲ್ಲಿ ಸಂಸ ಹುಟ್ಟಿದ್ದು, ನಮ್ಮೆಲ್ಲರ ಪುಣ್ಯವಾಗಿದೆ. ಇವರ ಬಗ್ಗೆ ನಮ್ಮ ಜಿಲ್ಲೆಯ ಅನೇಕರಿಗೆ ಮಾಹಿತಿ ಇಲ್ಲ. ಕನ್ನಡದ ಶ್ರೇಷ್ಠ ನಾಟಕಕಾರರಲ್ಲಿ ಸಂಸರೂ ಒಬ್ಬರಾಗಿದ್ದಾರೆ. ಇವರ ಬಗ್ಗೆ ಇನ್ನಷ್ಟು ಈಗಿನ ಪೀಳಿಗೆಯ ವಿದ್ಯಾರ್ಥಿಗಳಿಗೆ ಪರಿಚಯಿಸುವ ಕೆಲಸವನ್ನು ನಾವು ಮಾಡಬೇಕಿದ್ದು, ಇದಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದರು.
ಕರವೇ ಜಿಲ್ಲಾ ಉಪಾಧ್ಯಕ್ಷ ವೈ.ಕೆ. ಮೋಳೆ ನಾಗರಾಜು ಮಾತನಾಡಿದರು. ಪ.ಪಂ. ನಾಮನಿರ್ದೇಶಿತ ಸದಸ್ಯ ಲಿಂಗರಾಜಮೂರ್ತಿ, ಮಾಜಿ ಉಪಾಧ್ಯಕ್ಷ ಭೀಮಪ್ಪ, ಬಿಳಿಗಿರಿರಂಗನಬೆಟ್ಟದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜೆ.ಶ್ರೀನಿವಾಸ್, ಕೃಷಿಕ ಸಮಾಜದ ಅಧ್ಯಕ್ಷ ಗೌಡಹಳ್ಳಿ ರವಿ, ಮುಖ್ಯ ಶಿಕ್ಷಕಿ ಪುಟ್ಟಸಿದ್ದಮ್ಮ, ವಿಜಯ್, ಗಣಿಗನೂರು ರವಿ, ಮಹೇಶ್, ಪೈರೋಜ್‌ಖಾನ್ ಇತರರು ಇದ್ದರು.