

ಗೊಳಸಂಗಿ : ಹಸೆಮಣೆ ಏರಿದ ಹೊಸ ಜೋಡಿಗಳು, ಮದುವೆ ಎಂಬುವುದೊಂದು ವಿಧಿಯಾಟ ಇದ್ದಂತೆ. ಇಲ್ಲಿ ಯಾರಿಗೆ ಯಾರು ಸಂಗಾತಿ ಎಂಬುವುದನ್ನು ಆ ಬ್ರಹ್ಮ ಹುಟ್ಟುತ್ತಲೇ ಬಾಳ ನಂಟಿನ ಗಂಟನ್ನು ಹಾಕಿರುತ್ತಾನೆ.
ಆತನ ಆಜ್ಞಾನುಸಾರ ಸತಿ-ಪತಿಗಳಾದ ನಿಮ್ಮ ಬಾಳು ಬೆಳಕಾಗಲಿ ಎಂದು ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯರು ಹೇಳಿದರು.
ಗ್ರಾಮದ ಬಸವೇಶ್ವರ ಮಂಗಲ ಕಾರ್ಯಾಲಯದಲ್ಲಿ ಶಿಕ್ಷಕ ಬಿ.ಐ. ಚಲ್ಮಿ ಅವರು ಏರ್ಪಡಿಸಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು.
ಬಸವನಬಾಗೇವಾಡಿ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯರು ಮಾತನಾಡಿ, ದಾಂಪತ್ಯ ಬದುಕಿನ ಪಯಣದಲ್ಲಿ ಸಿರಿತನ, ಬಡತನ ಆಗಾಗ ಬಂದು ಹೋಗುವ ನಿಲ್ದಾಣಗಳಿದ್ದಂತೆ. ಸಿರಿತನಕ್ಕೆ ಹಿಗ್ಗದೆ, ಬಡತನಕ್ಕೆ ಕುಗ್ಗದೆ ಸಾಮರಸ್ಯದಿಂದ ಬಾಳಿದಾಗ ಮಾತ್ರ ದಾಂಪತ್ಯ ಬದುಕು ಸಾರ್ಥಕಗೊಳ್ಳಲಿದೆ ಎಂದರು.
ಇದನ್ನೂ ಓದಿ: ಪಪೂ ಇಲಾಖೆಯ ಅಸ್ತಿತ್ವಕ್ಕೆ ಧಕ್ಕೆ ತರಬೇಡಿ
ಮುತ್ತಗಿ ಸಂಸ್ಥಾನ ಹಿರೇಮಠದ ವೀರ ರುದ್ರಮುನಿ ಶಿವಾಚಾರ್ಯರು, ಗೊಳಸಂಗಿ ದೇವಾಂಗಮಠದ ಹುಚ್ಚಯ್ಯಸ್ವಾಮಿ, ಜೈನಾಪುರ ಪವಾಡ ಬಸವೇಶ್ವರ ಮಠದ ಸಿದ್ಧಲಿಂಗಯ್ಯ ಶ್ರೀ, ಅಖಂಡೇಶ್ವರ ಶಾಖಾಮಠದ ಅಜ್ಜನವರು ಸಾನ್ನಿಧ್ಯ ವಹಿಸಿದ್ದರು.ಗ್ರಾಪಂ ಅಧ್ಯಕ್ಷ ಕೇಶವ ಪವಾರ ಅಧ್ಯಕ್ಷತೆ ವಹಿಸಿದ್ದರು.
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ, ನಿವೃತ್ತ ಬಿಇಒ ವಿ.ಎಸ್. ಸಕ್ರಿ, ನಿವೃತ್ತ ಅರಣ್ಯಾಧಿಕಾರಿ ಆರ್.ಎಸ್. ಪ್ಯಾಟಿಗೌಡ್ರ, ತಜಮುಲಖಾದ್ರಿಸಾಹೇಬ ಜಾಗೀರದಾರ, ಸುರೇಶ ದಳವಾಯಿ, ಎಂ.ಆರ್. ಹೆಬ್ಬಾಳ, ಗಂಗಾರಾಮ ಪವಾರ, ಸಂಗಪ್ಪ ಕೋಲಾರ, ಮಲ್ಲಪ್ಪ ಮೇತ್ರಿ, ವಾಲು ಲಮಾಣಿ, ಯಮನಪ್ಪ ಹಡಪದ, ಭೀಮಶಿ ಬುದ್ನಿ ಮತ್ತಿತರರು ಇದ್ದರು.
ಕೆಜಿಎಂಪಿಎಸ್ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಸಾಮೂಹಿಕ ವಿವಾಹ ಆಯೋಜಕ ಬಿ.ಐ. ಚಲ್ಮಿ ಸ್ವಾಗತಿಸಿದರು. ಪತ್ರಕರ್ತ ಡಿ.ಬಿ. ಕುಪ್ಪಸ್ತ ನಿರೂಪಿಸಿ, ವಂದಿಸಿದರು.