More

    ಪಪೂ ಇಲಾಖೆಯ ಅಸ್ತಿತ್ವಕ್ಕೆ ಧಕ್ಕೆ ತರಬೇಡಿ

    ಸಿಂದಗಿ: ರಾಜ್ಯ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ, ಉಪನ್ಯಾಸಕರ ಸಂಘ ಮತ್ತು ಬೋಧಕೇತರ ಸಂಘಗಳ ರಾಜ್ಯ ಒಕ್ಕೂಟದ ಸಿಂದಗಿ ತಾಲೂಕು ಘಟಕದ ವಿವಿಧ ಕಾಲೇಜುಗಳ ಪ್ರಾಶುಂಪಾಲರು, ಉಪನ್ಯಾಸಕರು ಹಾಗೂ ಬೋಧಕೇತರರು ಕಪ್ಪುಪಟ್ಟಿ ಧರಿಸಿ, ರಾಜ್ಯದಲ್ಲಿನ ಪದವಿಪೂರ್ವ ಇಲಾಖೆಯ ಅಸ್ಮಿತೆಯನ್ನು ಯಥಾಸ್ಥಿತಿಯಲ್ಲಿರಿಸಿ ದಿನಕ್ಕೊಂದು ಸಮಸ್ಯೆಯನ್ನು ಹುಟ್ಟು ಹಾಕಿ ಸರ್ಕಾರ ಅದರ ಅಸ್ತಿತ್ವಕ್ಕೆ ಧಕ್ಕೆ ತರದಂತೆ ಆಗ್ರಹಿಸಿ ಗುರುವಾರ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

    ವಿವಿಧ ಕಾಲೇಜುಗಳ ಪ್ರಾಚಾರ್ಯರು ಹಾಗೂ ಉಪನ್ಯಾಸಕರು ಮಾತನಾಡಿ, 1971ರಲ್ಲಿ ಆಡಳಿತ ವ್ಯವಸ್ಥೆಗೆ ಬಂದ ಪದವಿ ಪೂರ್ವ ಶಿಕ್ಷಣ ಮಂಡಳಿ ನಂತರದ ಎರಡು ದಶಕಗಳ ನಂತರ ಪದವಿ ಪೂರ್ವ ಶಿಕ್ಷಣ ಇಲಾಖೆಯಾಯಿತು. ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಹಂತಗಳಲ್ಲಿ ಗುಣಾತ್ಮಕ ಹಾಗೂ ಸ್ಪರ್ಧಾತ್ಮಕವಾಗಿಯೂ ಗಟ್ಟಿಯಾದ ಶಿಕ್ಷಣ ನೀಡುತ್ತ ಮಾದರಿ ಇಲಾಖೆ ಎಂಬ ಕೀರ್ತಿ ಪಡೆದಿದೆ. ಇದೀಗ ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ಈ ಇಲಾಖೆಯ ಹೆಸರನ್ನು ಪದವಿ ಪೂರ್ವ ಇಲಾಖೆ ಎಂದು ಬದಲಿಸುವ ಮೂಲಕ ಪಿಯು ಹಂತವನ್ನು ಪ್ರೌಢಶಾಲೆಗಳಲ್ಲಿ ವಿಲೀನಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದನ್ನು ಕೂಡಲೇ ಕೈ ಬಿಡಬೇಕು. ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಲ್ಲಿ ವಿಲೀನಗೊಳಿಸಿರುವ ಪರೀಕ್ಷಾ ವಿಭಾಗವನ್ನು ಪುನಃ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿಯೇ ಉಳಿಸುವ ಮೂಲಕ ಶೈಕ್ಷಣಿಕ ವಿಭಾಗ ಮತ್ತು ಪರೀಕ್ಷಾ ವಿಭಾಗಗಳ ನಡುವೆ ಹಳಿ ತಪ್ಪಿರುವ ಸಮನ್ವಯವನ್ನು ಮರು ಸ್ಥಾಪಿಸಬೇಕು. ಇಲಾಖೆಯ ಮೇಲುಸ್ತುವಾರಿ ನಡೆಸಲು ಹೊರಡಿಸಿರುವ ಸುತ್ತೋಲೆಯನ್ನು ಕೂಡಲೇ ಹಿಂಪಡೆಯಬೇಕು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಾರಕವಾಗುವ ಕೆಲವು ಆದೇಶಗಳನ್ನು ಹಿಂಪಡೆಯಬೇಕು. ಇಲಾಖೆಯನ್ನು ರಜೆರಹಿತ ಇಲಾಖೆಯನ್ನಾಗಿ ಘೋಷಿಸಿ, ಇತರ ಸವಲತ್ತುಗಳನ್ನು ನೀಡಬೇಕು. ನಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದೇ ಇದ್ದಲ್ಲಿ ಡಿ. 1ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

    ಪ್ರಾಚಾರ್ಯ ಎ.ಆರ್. ಹೆಗ್ಗನದೊಡ್ಡಿ, ಎಸ್.ಬಿ. ಜಾಧವ, ಟಿ.ಎಸ್. ಲಮಾಣಿ, ಎ.ಬಿ. ಕೂಚಲ, ಉಪನ್ಯಾಸಕರಾದ ಎಸ್.ಆರ್. ಬೂದಿಹಾಳ, ಪಿ.ಬಿ. ಜೋಗೂರ, ಎನ್.ಬಿ. ಪೂಜಾರಿ, ಎಂ.ಎಂ. ಯಾಳವಾರ, ಎಸ್.ಎಮ್. ಬಿರಾದಾರ, ಎಸ್.ಎನ್. ಇದರಮನಿ, ಎಸ್.ಎ. ಬಸರಕೋಡ, ಆರ್.ಬಿ. ಹೊಸಮನಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts