

ಹಿರೀಸಾವೆ: ಮಳೆಯಿಂದ ಹಾನಿಯಾಗಿರುವ ಮನೆಗಳ ಮಾಲೀಕರಿಗೆ ಶೀಘ್ರವಾಗಿ ಪರಿಹಾರ ಒದಗಿಸಲು ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ ಗಮನಹರಿಸಬೇಕು ಎಂದು ಶಾಸಕ ಬಾಲಕೃಷ್ಣ ಹೇಳಿದರು.
ಸೋಮವಾರ ಮಳೆಯಿಂದ ಮನೆಯ ಗೋಡೆ ಕುಸಿದಿದ್ದ ಇಲ್ಲಿನ ಎಂ.ಜಿ.ರಸ್ತೆಯ ರಫೀಕ್ ಅವರ ಮನೆಗೆ ಭೇಟಿ ನೀಡಿದ ನಂತರ ಮಾತನಾಡಿದರು. ಸ್ಥಳೀಯ ಅಧಿಕಾರಿಗಳ ಮೂಲಕ ಮಾಹಿತಿ ಪಡೆದು ತಹಸೀಲ್ದಾರ್ ಅವರು ಆನ್‌ಲೈನ್ ಮೂಲಕ ಸರ್ಕಾರಕ್ಕೆ ಮಾಹಿತಿ ತಲುಪಿಸಬೇಕು. ಈ ಬಗ್ಗೆ ಜಿಲ್ಲೆಯ ಎಲ್ಲ ತಹಸೀಲ್ದಾರ್ ಮತ್ತು ಆರ್‌ಐಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಬೇಕು ಎಂದರು.
ಮಳೆ ಬರುವ ಸಮಯದಲ್ಲಿ ಜನರು ಹೆಚ್ಚು ಜಾಗೃತರಾಗಿ ಇರಬೇಕು. ತೇವಾಂಶದಿಂದ ಅಲ್ಲಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗುವ ಸಂಭವ ಇದೆ. ರೈತರು ಜಾನುವಾರುಗಳನ್ನು ವಿದ್ಯುತ್ ಕಂಬ ಹಾಗೂ ಮಾರ್ಗದಿಂದ ದೂರದಲ್ಲಿ ಕಟ್ಟುವಂತೆ ತಿಳಿಸಿದರು.
ಹಿರೀಸಾವೆ, ಜಿನ್ನೇನಹಳ್ಳಿ ಸೇರಿದಂತೆ ಮಳೆಯಿಂದ ಹಾನಿಯಾಗಿರುವ ಮನೆಗಳಿಗೆ ಶಾಸಕರು ಭೇಟಿ ನೀಡಿದರು. ಪಿಎಸಿಸಿಬಿ ಅಧ್ಯಕ್ಷ ಮಹೇಶ್, ಗ್ರಾಮ ಪಂಚಾಯಿತಿ ಸದಸ್ಯ ಸಂತೋಷ್, ರವಿಕುಮಾರ್, ರಾಮೇಗೌಡ, ವೆಂಕಟೇಶ್ ಇತರರು ಇದ್ದರು.