

ನಾಪೋಕ್ಲು: ಶಿಬಿರಾರ್ಥಿಗಳು ಹಾಕಿ ಕ್ರೀಡೆಯಲ್ಲಿ ಪರಿಣತಿಯನ್ನು ಹೊಂದಿ ಉತ್ತಮ ಕ್ರೀಡಾಪಟುಗಳಾಗಬೇಕು ಎಂದು ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ಸಿ.ನಾಣಯ್ಯ ಹೇಳಿದರು.
ಇಲ್ಲಿನ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕ್ರೀಡಾ ಅಕಾಡೆಮಿ ವತಿಯಿಂದ ಕೆಪಿಎಸ್ ಶಾಲೆಯ ಆಟದ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಬೇಸಿಗೆ ಶಿಬಿರದ ಸಮಾರೋಪದಲ್ಲಿ ಶಿಬಿರಾರ್ಥಿಗಳಿಂದ ಧ್ವಜ ವಂದನೆ ಸ್ವೀಕರಿಸಿ ಮಾತನಾಡಿದರು.
ದೇಶದಲ್ಲಿ ಹಾಕಿ ಕ್ರೀಡೆ ಪ್ರಸಿದ್ಧಿ ಹೊಂದಿದೆ. ಜಿಲ್ಲೆಯಲ್ಲೂ ಇರುವ ಉತ್ತಮ ಹಾಕಿಪಟುಗಳಿಂದಾಗಿ ಕೌಟುಂಬಿಕ ಹಾಕಿ ಉತ್ಸವ ಗಿನ್ನೆಸ್ ಬುಕ್‌ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆಯುವಂತಾಗಿದೆ. ಹಾಕಿ ಕ್ರೀಡೆಗೆ ಉತ್ತಮ ಅವಕಾಶಗಳು ಇರುವುದರಿಂದ ಶಿಬಿರಾರ್ಥಿಗಳು ಅದರ ಪ್ರಯೋಜನವನ್ನು ಪಡೆದುಕೊಳ್ಳಬೇಕು. ರಜಾ ಅವಧಿಯಲ್ಲಿ ಉತ್ತಮ ತರಬೇತಿ ನೀಡುವಂತಹ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕ್ರೀಡಾ ಅಕಾಡೆಮಿ ಜಿಲ್ಲೆಯಲ್ಲಿ ಮಕ್ಕಳಿಗೆ ಉತ್ತಮ ತರಬೇತಿ ನೀಡುವುದರ ಮೂಲಕ ಪ್ರಸಿದ್ಧಿಯನ್ನು ಹೊಂದಲಿ ಎಂದರು.
ಉತ್ತಮವಾಗಿ ತರಬೇತಿ ಆಯೋಜಿಸುತ್ತಿರುವ ಅಕಾಡೆಮಿಯ ಮುಂದಿನ ವರ್ಷದ ತರಬೇತಿ ಶಿಬಿರಕ್ಕೆ 50 ಸಾವಿರ ರೂ. ಕೊಡುಗೆ ನೀಡುವುದಾಗಿ ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ದಾನಿಗಳಾದ ಪಾಂಡಂಡ ಲೀಲಾ ಕುಟ್ಟಪ್ಪ ಮಾತನಾಡಿ, ವಿದ್ಯಾರ್ಥಿಗಳು ಪಾಲಕರಿಗೆ ಗೌರವ ನೀಡಬೇಕು. ಕ್ರೀಡೆ ಜತೆಗೆ ಶಿಕ್ಷಣಕ್ಕೂ ಮಹತ್ವ ನೀಡಬೇಕೆಂದರು.
ಕಾರ್ಯಕ್ರಮದ ಅಧ್ಯ್ಯಕ್ಷತೆ ವಹಿಸಿದ್ದ ಅಕಾಡೆಮಿ ಅಧ್ಯಕ್ಷ ಕಾಂಡಂಡ ಜೋಯಪ್ಪ ಮಾತನಾಡಿ, ಮಾದಕ ದ್ರವ್ಯ ಸೇವನೆಯಿಂದ ದೂರವಿರಬೇಕು. ಅಪ್ರಾಪ್ತ ವಯಸ್ಕರು ವಾಹನ ಚಾಲನೆ ಮಾಡಬಾರದು. ಅಗತ್ಯಕ್ಕೆ ಬೇಕಾದಷ್ಟು ಮಾತ್ರ ಮೊಬೈಲ್ ಬಳಕೆ ಮಾಡಬೇಕೆಂದರು.
ನಿವೃತ ಸೈನಿಕ ಕೊಂಡಿರ ನಾಣಯ್ಯ, ಕುಲ್ಲೇಟಿರ ಅರುಣ್ ಬೇಬಾ, ಬಿದ್ದಾಟಂಡ ಸುಮನ್ ಮಾತನಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್, ಲಯನ್ಸ್ ಕ್ಲಬ್ ಅಧ್ಯಕ್ಷ ಬಿದ್ದಾಟಂಡ ಮೇರಿ ಚಿಟ್ಟಿಯಪ್ಪ, ಮಹಿಳಾ ಸಮಾಜದ ಅಧ್ಯಕ್ಷ ಕುಂಚೇಟ್ಟಿರ ರೇಷ್ಮಾ ಉತ್ತಪ್ಪ, ಸುಧಿ ಉತ್ತಪ್ಪ , ಕೆಪಿಎಸ್ ಶಾಲೆಯ ಪ್ರಾಂಶುಪಾಲ ಮೇದುರ ವಿಶಾಲ್, ಕನ್ನಂಬೀರ ಸುಧಿ ತಿಮ್ಮಯ್ಯ, ಶಿವಚಳಿಯಂಡ ಅಂಬಿ ಕಾರ್ಯಪ್ಪ, ಮುಂಡಂಡ ಕವಿತಾ ಅಯ್ಯಣ್ಣ, ಕಲಿಯಂಡ ಆಶಿಕ್, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕ್ರೀಡಾ ಅಕಾಡೆಮಿಯ ಖಜಾಂಚಿ ಕೇಟೋಳಿರ ಡಾಲಿ ಅಚ್ಚಪ್ಪ, ಕಾರ್ಯದರ್ಶಿ ಮಾಚೆಟ್ಟಿರ ಕುಸು ಕುಶಾಲಪ್ಪ, ನಿರ್ದೆಶಕ ಮುಕ್ಕಾಟಿರ ವಿನಯ್, ದುಗ್ಗಳ ಸದಾನಂದ, ಅರೆಯಡ ಗಣೇಶ್, ಕುಂಡ್ಯೋಳಂಡ ಕವಿತಾ ಮುತ್ತಣ್ಣ, ಬಿದ್ದಾಟಂಡ ಮಮತಾ ಚಿಣ್ಣಪ್ಪ, ಕುಂಡಿಯೋಳಂಡ ಕವಿತಾ ಮುತ್ತಣ್ಣ ಇತರರಿದ್ದರು.