

ಹಾಸನ: ಹಾಸನಾಂಬೆ ದೇವಿಯ ದರ್ಶನ ವ್ಯವಸ್ಥೆ ಸರಳೀಕರಣ ಆಗಬೇಕು. ಹಾಸನಾಂಬೆ ಅಂತ ಕಾರಿಡಾರ್ ಮಾಡಿ ದೇವಾಲಯನ್ನು ಅಭಿವೃದ್ಧಿ ಪಡಿಸುವುದು ಸೂಕ್ತ ಎಂದು ಸ್ಪಟಿಕಪುರಿ ಮಹಾಸಂಸ್ಥಾನ ಮಠದ ನಂಜಾವಧೂತ ಸ್ವಾಮೀಜಿ ಹೇಳಿದರು.
ಮಂಗಳವಾರ ಹಾಸನಾಂಬೆ ದೇವಿ ದರ್ಶನ ವೇಳೆ ಅಸಮಾಧಾನ ಹೊರ ಹಾಕಿದರು. ನಾನು ಬೆಳಗ್ಗೆಯೇ ಬಂದೆ, ಒಂದಷ್ಟು ಗೊಂದಲ ನೋಡಿ ಹಾಸನಾಂಬೆ ಇಲ್ಲೇ ಕಂಡಳು ಎಂದು ಹೊರಟಿದ್ದೆ. ಕೃಷ್ಣ ಬೈರೇಗೌಡ ಅವರು ಕರೆ ಮಾಡಿ ನೀವು ದರ್ಶನ ಮಾಡಿಕೊಂಡು ಹೋಗಬೇಕು ಎಂದು ಹೇಳಿ ಕಳುಹಿಸಿದರು ಎಂದರು.
ಮುಂದಿನ ದಿನಗಳಲ್ಲಿ ಇದು ಸಿಂಗಲ್ ವಿಂಡೋ ಆಗಬೇಕು. ಇಲ್ಲದಿದ್ದರೆ ದೇವರು ಬೀದಿಯಲ್ಲಿ ಕಂಡು ಬಿಡುತ್ತದೆ. ದೇವರು ಎಲ್ಲರಿಗೂ ಒಂದೇ. ಭಗವಂತ ಎಲ್ಲಿ ನೋಡಿದರು ಕಾಣುತ್ತಾನೆ. ಸಿಂಗಲ್ ವಿಂಡೋ ವ್ಯವಸ್ಥೆಯಲ್ಲಿ ದರ್ಶನ ಮಾಡಿದರೆ ಒಳ್ಳೆಯದು ಎಂದರು.
ಯಾವುದೋ ಪೀಠದಿಂದ ಬರುತ್ತಾರೆ. ಅವರನ್ನು ನಡೆಸಿಕೊಳ್ಳುವ ರೀತಿ ಸರಿಯಿಲ್ಲ. ಧರ್ಮಕ್ಕೂ ಬೆಲೆ ಇಲ್ಲ. ದರ್ಶನಕ್ಕೂ ಬೆಲೆ ಇಲ್ಲ ಅನ್ನುವಂತೆ ಆಗಿಬಿಡುತ್ತದೆ, ಅದು ಆಗುವುದು ಬೇಡ. ಈ ಬಾರಿ ಕೃಷ್ಣ ಬೈರೇಗೌಡ ಅವರ ಮುಖಂಡತ್ವದಲ್ಲಿ ವ್ಯವಸ್ಥೆ ಚೆನ್ನಾಗಿ ಆಗಿದೆ. ನಮಗೆ ಇವತ್ತು ತೊಂದರೆ ಆಗಿದೆ. ಆದರೆ ಕಳೆದ 9-10 ದಿನಗಳಿಂದ ಯಾವುದೇ ತೊಂದರೆ ಇಲ್ಲದೆ ಭಕ್ತರಿಗೆ ದರ್ಶನ ಆಗಿದೆ. ಕಳೆದ ಬಾರಿ ಕಾಲ್ತುಳಿತ ಆಗಿತ್ತು. ಈ ಬಾರಿ ಯಾವುದೇ ಗೊಂದಲ ಆಗದ ರೀತಿ ಮಾಡಿದ್ದಾರೆ. ಎಲ್ಲವನ್ನೂ ದುಡ್ಡಿನಿಂದಲೇ ನೋಡಬಾರದು. ಗೋಲ್ಡನ್ ಟಿಕೆಟ್, ಸಾವಿರ ರೂ. ಟಿಕೆಟ್, ಅದಕ್ಕೊಂದು ಗೇಟ್, ಇದಕ್ಕೊಂದು ಗೇಟ್, ಸುಮ್ಮನೆ ನಿಂತುಕೊಂಡರೆ ಆಚೆ ಕಳುಹಿಸುವಂತಹದ್ದು ಸರಿಯಲ್ಲ ಎಂದರು.
ನಾನೇ ಬಂದು ಒಂದೂವರೆ ಗಂಟೆ ಕಾದೆ. ನಿನ್ನೆಯಿಂದ ಸಚಿವರನ್ನು ಕೇಳಿ ಅವರ ಅನುಮತಿ ಪಡೆದು, ಡಿಸಿಯವರ ಬಳಿ 4-5 ಬಾರಿ ಮಾತನಾಡಿ ಅವರ ಅನುಮತಿ ಪಡೆದು, ಆ ಗೇಟ್‌ನಲ್ಲಿ ಒಂದೂವರೆ ಗಂಟೆ ನಿಂತರೂ ಕೊನೆಗೆ ಗೇಟ್ ತೆಗೆಯಲ್ಲ ಅಂದ ಮೇಲೆ ನಾನು ವಾಪಸ್ ಹೋಗಿದ್ದೆ. ಸಚಿವರು ಹೇಳಿದ ಮೇಲೆ ವಾಪಸ್ ಬಂದೆ ಎಂದರು.
ಹಾಸನಾಂಬೆ ದೇವಿ ಒಂದು ಪವಾಡ, ನಮ್ಮ ಪರಂಪರೆ ಯಾವ ರೀತಿ ಗಟ್ಟಿಯಾಗಿ ಉಳಿದಿದೆ ಎಂಬುದಕ್ಕೆ ಇದನ್ನು ನೋಡಿದರೆ ಗೊತ್ತಾಗುತ್ತದೆ. ಕಣಕಣದಲ್ಲೂ ಭಗವಂತನನ್ನು ನೋಡುವ ನೆಲದಲ್ಲಿ ಹುಟ್ಟಿ ಬೆಳೆದಂತವರು, ಎಲ್ಲೆಲ್ಲೂ ದೇವರನ್ನು ಕಾಣುತ್ತೇವೆ. ಇದೆಲ್ಲ ನಮ್ಮ ನೆಲದ ಶಕ್ತಿ, ಆ ಪರಂಪರೆಯನ್ನು ನಾವೆಲ್ಲರೂ ಉಳಿಸಿಕೊಂಡು ಹೋಗಬೇಕು. ಸರ್ಕಾರಗಳು ಆ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಬಹಳ ವ್ಯವಸ್ಥಿತವಾಗಿ ಎಲ್ಲರೂ ಬಂದು ದರ್ಶನ ಮಾಡಿಕೊಂಡು ಹೋಗುವ ವ್ಯವಸ್ಥೆ ಆಗಬೇಕು. ಸರ್ಕಾರ ಹಾಸನಾಂಬೆ ಕಾರಿಡಾರ್ ಅಂತ ಮಾಡಲಿ, ಉಜ್ಜಯಿನಿ, ಕಾಶಿ ಕಾರಿಡಾರ್‌ನ್ನು ಬಹಳ ಚೆನ್ನಾಗಿ ಮಾಡಿದ್ದಾರೆ. ಇದಕ್ಕೆ ನೂರು ಕೋಟಿಯನ್ನು ಸರ್ಕಾರ ಬಿಡುಗಡೆ ಮಾಡಿ ವ್ಯವಸ್ಥಿತವಾಗಿ ಮಾಡಲಿ ಎಂದು ಆಗ್ರಹಿಸಿದರು.
ಶಾಸಕ ಪುಟ್ಟರಂಗಶೆಟ್ಟಿಗೆ ತಡೆ: ಹಾಸನ: ಹಾಸನಾಂಬೆಯ ದರ್ಶನಕ್ಕೆ ಮಂಗಳವಾರ ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ 1000 ರೂ.ಟೆಕೆಟ್ ಪಡೆದು ಮಗ ಹಾಗೂ ಸ್ನೇಹಿತರ ಜತೆ ಬಂದರು. ದೇವಸ್ಥಾನದ ಬಳಿ ಬರುತ್ತಿದ್ದಂತೆ ಬ್ಯಾರಿಕೇಡ್‌ನಿಂದ ಹೊರಗೆ ಬಂದು ಮುಖ್ಯದ್ವಾರದಿಂದ ತೆರಳಲು ಮುಂದಾದಾಗ ಗೇಟ್ ಬಳಿಯೇ ಬೇಲೂರು ತಹಸೀಲ್ದಾರ್ ಶ್ರೀಧರ್ ಶಾಸಕರನ್ನು ತಡೆದರು.
ಗೇಟ್ ಮೂಲಕ ಬಿಡದೆ 1000 ರೂ. ಸರದಿಯಲ್ಲಿ ಹೋಗುವಂತೆ ಮನವಿ ಮಾಡಿದರು. ಅದೇ ವೇಳೆ ದೇವಾಲಯದ ಒಳಗೆ ಇದ್ದ ಸಂಸದ ಶ್ರೇಯಸ್ ಪಟೇಲ್‌ಗೆ ಪುಟ್ಟರಂಗಶೆಟ್ಟಿ ಕರೆ ಮಾಡಿದರು. ಆದರೂ ಮುಖ್ಯದ್ವಾರದಲ್ಲಿ ಅಧಿಕಾರಿಗಳು ಬಿಡಲಿಲ್ಲ. ವಾಪಸ್ 1000 ರೂ. ಸಾಲಿಗೆ ಸೇರಿಕೊಂಡು ಶಾಸಕರು ಒಳ ಬಂದು ದೇವಿ ದರ್ಶನ ಪಡೆದರು.