ಕರೊನಾವೈರಸ್​ನಂತೆ ಕಂಡು ಅಚ್ಚರಿ ಮೂಡಿಸುತ್ತದೆ ಈ ಮೇ ಪ್ಲವರ್; ಇದರ ವಿಶೇಷತೆ ಏನು ಗೊತ್ತಾ?

corona flower
Published on

ಧಾರವಾಡ: ಸದ್ಯ ಎಲ್ಲ ಕಡೆಗೂ ಕರೊನಾದ್ದೇ ಸದ್ದು, ಆ ವೈರಸ್ ಚಿತ್ರ ನೋಡಿದ್ರೆ ಜನ ಹೌಹಾರಿ ಹೋಕ್ತಾರೆ. ಆದ್ರೆ ಧಾರವಾಡದಲ್ಲೀಗ ಈ ವೈರಸ್ ರೀತಿಯದ್ದೇ ಇರೋ ಹೂವೊಂದು ಗಮನ ಸೆಳೆದಿದ. ವಿಚಿತ್ರ ಅಂದ್ರೆ ಈ ಹೂವು ಕರೊನಾ ವೈರಸ್ ಥರಾನೇ ಇದೆಯಾದರೂ ಬಣ್ಣ ಮಾತ್ರ ಕೆಂಪು ಕೆಂಪು. ಯಾರಿಗೂ ಕಾಣದೇ ಭೂಮಿಯ ಒಡಲಲ್ಲಿ ಬಚ್ಚಿಕೊಂಡಿದ್ದ ಹೂವು ಈಗ ಒಮ್ಮಿಂದೊಮ್ಮೆಲೇ ನೆಲದಿಂದ ಹೊರ ಬಂದು ಅಂಗಳವನ್ನೆಲ್ಲಾ ಸುಂದರವಾಗಿ ಮಾಡುತ್ತಿದೆ. ಕುರಿತ ಸ್ಟೋರಿ ಇಲ್ಲಿದೆ ನೋಡಿ

ವೈರಸ್ನಂತೆಯೇ ಕಾಣುತ್ತಿರೋ ಇದು ವೈರಸ್ನ ಮಾದರಿ ಚಿತ್ರವಲ್ಲ. ಬದಲಿಗೆ ಧಾರವಾಡದಲ್ಲಿ ಕಂಡು ಬಂದಿರೋ ಒಂದು ಬಗೆಯ ಹೂವು. ಹೌದು, ಧಾರವಾಡ ವಿದ್ಯಾಕಾಶಿಯಷ್ಟೇ ಅಲ್ಲ, ಇದು ಸಸ್ಯ ಕಾಶಿಯೂ ಹೌದು. ಇಲ್ಲಿನ ಬಗೆ ಬಗೆಯ ಸಸ್ಯಗಳು ಪ್ರಕೃತಿಯ ಅಂದವನ್ನು ಹೆಚ್ಚಿಸಿವೆ. ಪ್ರಪಂಚದ ಬೇರೆ ಬೇರೆ ಭಾಗದ ಸಸ್ಯಗಳು ಧಾರವಾಡದಲ್ಲಿ ಇದೇ ನೆಲದ್ದಾಗಿ ನಗರಕ್ಕೆ ಹೆಚ್ಚಿನ ಸೌಂದರ್ಯ ತಂದುಕೊಟ್ಟಿವೆ. ಅಂಥದ್ದರಲ್ಲಿ ಒಂದು ಥಂಡರ್ ಲಿಲ್ಲಿ. ಈ ಹೂವಿಗೆ ಕನ್ನಡದಲ್ಲಿ ಯಾವುದೇ ಹೆಸರಿಲ್ಲದಿದ್ದರೂ ಇದರ ಆಕಾರ ನೋಡಿ ಬೆಂಕಿಯ ಹೂವು, ಬೆಂಕಿ ಚೆಂಡು, ಮೇ ಪ್ಲವರ್ ಹೆಸರುಗಳಿಂದ ಕರೆಯಲಾಗುತ್ತೆ. ಈ ಹೂವು ಧಾರವಾಡದ ಗಲ್ಲಿಗಲ್ಲಿಗಳಲ್ಲೂ ಇದೀಗ ಕಂಡು ಬರುತ್ತಿದೆ. ಆದ್ರೆ ಕರೊನಾದ ವೈರಸ್ ಹೆಚ್ಚಳವಾಗಿರೋ ಟೈಮ್ದಲ್ಲೇ ಹೀಗೆ ಸಾಲು ಸಾಲು ಹೂವುಗಳು ಅರಳಿದ್ದು, ನೋಡಿ ಜನ ಇದ್ದನ್ನು ಕರೊನಾ ವೈರಸ್ ಹೂವೆ ಎನ್ನುತ್ತಿದ್ದಾರೆ.

ಧಾರವಾಡದಲ್ಲಿ ಅನೇಕ ಹಳೇಯ ಕಾಲದ ಮನೆಗಳಿವೆ ಅಂತಹ ಹಳೇ ಕಾಲದ ಮನೆಗಳ ಅಂಗಳದಲ್ಲಿಯೇ ಈ ಹೂವುಗಳು ಹೆಚ್ಚಾಗಿ ಕಂಡು ಬಂದಿದ್ದು, ಧಾರವಾಡದ ಮಾಳಮಡ್ಡಿ ಏರಿಯಾದಲ್ಲಿರೋ ಕುಲಕರ್ಣಿ ಕಂಪೌಂಡ್ವೊಂದರಲ್ಲೇ ಸಾವಿರಾರು ಹೂವುಗಳು ಅರಳಿ ನಿಂತಿವೆ. ಭೂಮಿಯ ಒಳಭಾಗದಲ್ಲಿ ಬಚ್ಚಿಟ್ಟುಕೊಂಡಂತೆ ಇರೋ ಗಡ್ಡೆಗಳು ಮೊದಲ ಮಳೆಯ ಬಳಿಕ ಒಂದೊಂದಾಗಿ ಹೊರಗೆ ಬರುತ್ತವೆ. ಇಲ್ಲಿರೋದು 30-40 ವರ್ಷಗಳಷ್ಟು ಹಳೆಯ ಗಡ್ಡೆಗಳು ಅಂದ್ರೆ ನೀವು ನಂಬಲೆಬೇಕು. ಇನ್ನೊಂದು ವಿಚಿತ್ರ ಅಂದ್ರೆ, ಈ ಹೂವಿನ ಗಡ್ಡೆ ಮೇಲಕ್ಕೆ ಬಂದ ತಕ್ಷಣವೇ ಮೊದಲು ಹೂವು ಬಿಡುತ್ತದೆ ಹೂವು ದೊಡ್ಡದಾದ ಬಳಿಕ ಎಲೆಗಳು ಬರುತ್ತವೆ. ಮೂಲತಃ ದಕ್ಷಿಣ ಆಫ್ರಿಕಾದ ಈ ಸಸ್ಯ ಭಾರತಕ್ಕೆ ಬಂದಿದ್ದೇ ಬಲು ಅಚ್ಚರಿಯ ಸಂಗತಿ. ಬ್ರಿಟಿಷರು ತಮ್ಮ ಮನೆಯ ಮುಂದಿನ ಉದ್ಯಾನವನಗಳಲ್ಲಿ ಬೆಳೆಸಲು ಈ ಅಲಂಕಾರಿಕ ಸಸ್ಯವನ್ನು ತರಿಸಿಕೊಂಡಿದ್ದರು. ಅದು ಹಾಗೆಯೇ ಮನೆಯಿಂದ ಮನೆಗೆ ಸಾಗಿ ಇವತ್ತು ಧಾರವಾಡದ ತುಂಬೆಲ್ಲಾ ತನ್ನ ಬೇರನ್ನು ಬಿಟ್ಟಿದೆ. ಸಾಮಾನ್ಯವಾಗಿ ಮೇ ತಿಂಗಳಲ್ಲಿ ಮಳೆ ಆರಂಭವಾಗೋದ್ರಿಂದಾಗಿ ಇದು ಅವಾಗಲೇ ಹೂವನ್ನು ಬಿಡುತ್ತೆ. ಇದೇ ಕಾರಣಕ್ಕೆ ಇದಕ್ಕೆ ಮೇ ಫ್ಲಾವರ್ ಅಂತಾನೂ ಕರೆಯಲಾಗುತ್ತೆ. ಆದರೆ ವಿಚಿತ್ರವೆಂದರೆ ಮೊದಲ ಮಳೆ ಬಿದ್ದ ಮೇಲೆಯೇ, ಅದೂ ಗುಡುಗಿನ ಶಬ್ದ ಕೇಳುತ್ತಲೇ ಇದು ಹೊರಗೆ ಬರುತ್ತೆ. ಇದಕ್ಕೆ ಕಾರಣ ಈ ಸಸ್ಯ ಗುಡುಗು ಸಂವೇದಿಯಾಗಿರೋದು.

ಸುಮಾರು ಒಂದು ವಾರದವರೆಗೆ ಇರೋ ಹೂವು ಬಳಿಕ ಒಣಗಿ ಹೋಗುತ್ತೆ. ಆದರೆ ವನದ ತುಂಬೆಲ್ಲಾ ಹಸಿರೆಲೆಯನ್ನು ಉಳಿಸಿಕೊಂಡ ಗಡ್ಡೆ ಮಾತ್ರ ನೆಲದೊಳಗೆ ಹಾಗೆಯೇ ವರ್ಷನುಗಟ್ಟಲೆ ಭೂಗತವಾಗಿ ಬದುಕುಳಿಯುತ್ತೆ. ಹೊರಗಡೆ ಮಾತ್ರ ಸಸ್ಯ ಮೇಲ್ನೋಟಕ್ಕೆ ಒಣಗಿ ಹೋದಂತೆ ಕಂಡರೂ ಭೂಮಿಯ ಒಳಗಡೆ ಗಡ್ಡೆಯ ರೂಪದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುತ್ತೆ.ಸದ್ಯಕ್ಕಂತೂ ಈ ಹೂವಿಗೆ ಧಾರವಾಡ ಜನ ಕರೊನಾ ವೈರಸ್ ಹೂವೆ ಎಂದು ಕರೆಯೋಕೆ ಶುರು ಮಾಡಿ ಬಿಟ್ಟಿದ್ದಾರೆ. (ಡಿವಿ ಕಮ್ಮಾರ್, ದಿಗ್ವಿಜಯ್ ನ್ಯೂಸ್ ಧಾರವಾಡ).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net