ಪ್ರತಿಯೊಬ್ಬರೂ ಸಾಹಿತ್ಯ ಪ್ರೇಮ ಮೈಗೂಡಿಸಿಕೊಳ್ಳಿ

9 mlv1
Published on

ಮಳವಳ್ಳಿ: ಮನಸ್ಸಿನ ಭಾವನೆಗಳನ್ನು ಅಕ್ಷರ ರೂಪದಲ್ಲಿ ಮೂಡಿಸುವ ಮೂಲಕ ಪ್ರತಿಯೊಬ್ಬರೂ ಸಾಹಿತ್ಯ ಪ್ರೇಮವನ್ನು ಮೈಗೂಡಿಸಿಕೊಳ್ಳಬೇಕು ಎಂದು ಪ್ರೊ.ಚಂದ್ರಶೇಖರ್ ಕರೆ ನೀಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ದಲಿತ ಸಾಹಿತ್ಯ ಪರಿಷತ್ ತಾಲೂಕು ಘಟಕ ಉದ್ಘಾಟಿಸುವುದರ ಜತೆಗೆ ನಾಮಫಲಕ ಅನಾವರಣಗೊಳಿಸಿ ಮಾತನಾಡಿದರು.

ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಶೋಷಣೆಗೆ ಒಳಗಾದವರನ್ನು ದಲಿತರು ಎಂದು ಸಮಾಜದಲ್ಲಿ ಕರೆಯಲಾಗುತ್ತಿದ್ದು, ದಲಿತರ ನೋವು, ನಲಿವುಗಳನ್ನು ಸಾಹಿತ್ಯ ರೂಪದಲ್ಲಿ ಹೊರತರುವ ಉದ್ದೇಶದಿಂದ ದಲಿತ ಸಾಹಿತ್ಯ ಪರಿಷತ್ ಹುಟ್ಟಿಕೊಂಡಿದೆ ಎಂದ ಅವರು, ದಲಿತ ಸಾಹಿತ್ಯದಲ್ಲಿ ದೇವನೂರು ಮಹಾದೇವ, ಸಿದ್ದಲಿಂಗಯ್ಯ, ತೋಟಗಹಳ್ಳಿ ರಾಮಯ್ಯ ಅವರು ತಮ್ಮದೆ ಆದ ಛಾಪು ಮೂಡಿಸಿದ್ದಾರೆ. ದೇವನೂರು ಮಹಾದೇವ ಅವರು ಬರೆದ ಕುಸುಮ ಬಾಲೆ ಸಾಹಿತ್ಯ ಕ್ಷೇತ್ರದಲ್ಲಿ ಸಂಚಲನ ಮೂಡಿಸಿರುವುದನ್ನು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ.

ಮುಂದಿನ ದಿನಗಳಲ್ಲಿ ಸಾಮಾನ್ಯ ಹಾಗೂ ಅಕ್ಷರ ಜ್ಞಾನ ಇರುವವರು ಸಾಹಿತ್ಯ ಲೋಕದಲ್ಲಿ ತಮ್ಮ ಮನದ ಭಾವನೆಗಳನ್ನು ಅಕ್ಷರ ರೂಪದಲ್ಲಿ ದಾಖಲು ಮಾಡಿಕೊಳ್ಳುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಬಹುದಾಗಿದೆ. ಯುವ ಲೇಖಕರು, ಸಾಹಿತಿಗಳು, ಬರಹಗಾರರು ದಲಿತ ಸಾಹಿತ್ಯ ಪರಿಷತ್ ಮೂಲಕ ಹೊರಬರುವಂತಾಗಲಿ ಎಂದರು.

ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹುರುಗಲವಾಡಿ ರಾಮಯ್ಯ ಮಾತನಾಡಿ, ಕಂಬಾಲಪಲ್ಲಿ, ಕೆಸ್ತಾರ, ಜೆರ್ಜಾರ ಸೇರಿದಂತೆ ಹಲವೆಡೆ ನಡೆದಂತಹ ದಲಿತರ ಮೇಲಿನ ದೌರ್ಜನ್ಯಗಳ ಮೂಲಕ ಹುಟ್ಟಿದಂತಹ ಸಾಹಿತ್ಯ ದಲಿತ ಸಾಹಿತ್ಯ ಎಂದ ಅವರು, ಇಂತಹ ಸಾಹಿತ್ಯಗಳನ್ನು ನೋಡಲು ನಮ್ಮ ಮನಸ್ಸುಗಳು ತೆರೆದುಕೊಳ್ಳಬೇಕು. ದಲಿತ ಸಾಹಿತ್ಯ ಎಲ್ಲ ಸಾಹಿತ್ಯದ ಬೇರಾಗಿದೆ ಎಂದರು.

ಕಾರ್ಯಕ್ರಮದಲ್ಲಿ ದಲಿತ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ದೇವರಾಜು ಕೊಪ್ಪ, ತಾಲೂಕು ಅಧ್ಯಕ್ಷ ಬಿ.ಚುಂಚಣ್ಣ, ಪ್ರಧಾನ ಕಾರ್ಯದರ್ಶಿ ಎಸ್.ಬೊರಯ್ಯ, ಕಸಾಪ ತಾಲೂಕು ಅಧ್ಯಕ್ಷ ಚೇತನ್ ಕುಮಾರ್, ಜಿಲ್ಲಾ ಪರಿಷತ್ ಮಾಜಿ ಸದಸ್ಯ ಎಂ.ಎನ್.ಜಯರಾಜು, ಸಮಾಜ ಸೇವಕ ಟಿ.ಎಂ.ಪ್ರಕಾಶ್ ಸೇರಿದಂತೆ ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net