ಮೌರ್ಯರ ಕಾಲದಿಂದಲೇ ಅಸ್ತಿತ್ವದಲ್ಲಿದೆ ಕನ್ನಡ

20-SanduruP3
ಸಂಡೂರು ತಾಲೂಕಿನ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದಲ್ಲಿ ಆಯೋಜಿಸಿದ್ದ ಕನ್ನಡ ಲಿಪಿ ವಿಕಾಸ, ಮೌರ್ಯರಿಂದ ಮೈಸೂರಿನ ಒಡೆಯರವರೆಗೆ ಉಪನ್ಯಾಸ ಕಾರ್ಯಕ್ರಮವನ್ನು ಪ್ರಾಧ್ಯಾಪಕಿ ಡಾ.ಬಿ.ಜಿ.ಸಿದ್ದಲಿಂಗಮ್ಮ ಉದ್ಘಾಟಿಸಿದರು. ಕೇಂದ್ರದ ನಿರ್ದೇಶಕ ಡಾ.ಬಿ.ರವಿ, ಖನಿಜ ಸಂಸ್ಕರಣ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಎಸ್.ಎಂ.ಶಶಿಧರ್ ಇದ್ದರು.
Published on

ಸಂಡೂರು: ಕನ್ನಡ ಲಿಪಿಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ ಎಂದು ದಾವಣಗೆರೆ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದ ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಬಿ.ಜಿ.ಸಿದ್ದಲಿಂಗಮ್ಮ ಹೇಳಿದರು.

ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗ, ನಂದಿಹಳ್ಳಿ ಅಲ್ಯುಮ್ನಿ ಅಸೋಸಿಯೇಷನ್ ಸಹಯೋಗದಲ್ಲಿ ಆಯೋಜಿಸಿದ್ದ ಕನ್ನಡ ಲಿಪಿ ವಿಕಾಸ, ಮೌರ್ಯರಿಂದ ಮೈಸೂರಿನ ಒಡೆಯರವರೆಗೆ ವಿಷಯ ಕುರಿತು ಗುರುವಾರ ಉಪನ್ಯಾಸ ನೀಡಿದರು.

ಕನ್ನಡ ಬ್ರಾಹ್ಮಿ ಲಿಪಿಯಿಂದ ವಿಕಾಸಗೊಂಡರೂ, ಕಾಲಕ್ರಮೇಣ ತನ್ನದೇ ಆದ ಸ್ವತಂತ್ರ ಶೈಲಿ, ಅಕ್ಷರ ರೂಪ ಹಾಗೂ ವ್ಯಾಕರಣ ಗುಣಲಕ್ಷಣಗಳನ್ನು ಅಳವಡಿಸಿಕೊಂಡು ಲಿಪಿಯಾಗಿ ರೂಪುಗೊಂಡಿದೆ. ಮೌರ್ಯರ ಕಾಲದಿಂದಲೇ ಕನ್ನಡ ಭಾಷೆಯ ಅಸ್ತಿತ್ವ ಕಂಡುಬರುತ್ತದೆ.

ಆದರೆ, ಲಿಪಿಯ ರೂಪದಲ್ಲಿನ ಪ್ರಥಮ ದಾಖಲೆಗಳು ಐದನೇ ಶತಮಾನದಿಂದಲೇ ಲಭ್ಯವಿವೆ. ಕದಂಬರು, ಗಂಗರು, ಚಾಲುಕ್ಯರು ಮೊದಲಾದ ರಾಜ್ಯ ವ್ಯವಸ್ಥೆಗಳು ಕನ್ನಡ ಲಿಪಿಯನ್ನು ಆಡಳಿತ ಭಾಷೆಯಾಗಿ ಬಳಸಿದ್ದು, ಇದರಿಂದ ಲಿಪಿ ಬಳಕೆ ಮತ್ತಷ್ಟು ವ್ಯವಸ್ಥಿತವಾಗಿ ವೃದ್ಧಿಯಾಯಿತು. ಲಿಪಿ ಬರವಣಿಗೆ ಸಾಧನವಷ್ಟೇ ಅಲ್ಲ, ಇದು ನಾಡಿನ ಸಂಸ್ಕೃತಿ, ಪರಂಪರೆ, ಧಾರ್ಮಿಕತೆ ಹಾಗೂ ಆಡಳಿತದ ಜೀವಂತ ಸಾಕ್ಷಿಯಾಗಿದೆ ಎಂದರು.

ಖನಿಜ ಸಂಸ್ಕರಣ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಎಸ್.ಎಂ.ಶಶಿಧರ್ ಮಾತನಾಡಿ, ಕುಮುದೇಂದು ಮುನಿಯ ಸಿರಿಭೂವಲಯ ಕೃತಿಯಲ್ಲಿ ಅಕ್ಷರಗಳನ್ನು ಅಂಕಿಗಳ ರೂಪದಲ್ಲಿ ಬರೆಯುವ ಕೋಡಿಂಗ್-ಡೀಕೋಡಿಂಗ್ ಪದ್ಧತಿ ಬಳಸಲಾಗಿದೆ. ಇದು ಕನ್ನಡ ಭಾಷೆಯ ಹೆಗ್ಗಳಿಕೆ. ಭಾಷೆಯ ಇತಿಹಾಸವೆಂದರೆ ಜನರ ಜಾನಪದವೂ, ಸಂಸ್ಕೃತಿಯ ಸಾರವೂ ಆಗಿದೆ ಎಂದರು.

ವಿದ್ಯಾರ್ಥಿಗಳು ಡಾ.ಬಿ.ಜಿ.ಸಿದ್ದಲಿಂಗಮ್ಮ ಅವರೊಂದಿಗೆ ಸಂವಾದ ನಡೆಸಿದರು. ಕೇಂದ್ರದ ನಿರ್ದೇಶಕ ಡಾ.ಬಿ.ರವಿ, ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಸಂಯೋಜಕ ಡಾ.ನಾಯಕರ ಹೊನ್ನೂರ್‌ಸ್ವಾಮಿ, ಕ್ರೀಡಾ ನಿರ್ದೇಶಕ ಶಿವರಾಮ ರಾಗಿ, ಇತಿಹಾಸ ವಿಭಾಗದ ಉಪನ್ಯಾಸಕ ಡಾ.ಟಿ.ಎನ್.ನರಸಿಂಹಮೂರ್ತಿ, ಪ್ರಮುಖರಾದ ಡಾ.ಎಂ.ವಿರೂಪಾಕ್ಷಪ್ಪ, ರಮೇಶ ರಾಯಚೂರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net