

ನಾಪೋಕ್ಲು: ಮನೆ, ವ್ಯವಹಾರ, ಬೋಧನೆ ಮತ್ತು ಜೀವನದ ಎಲ್ಲ ಕ್ಷೇತ್ರಗಳಲ್ಲೂ ನಾವು ಸ್ವಚ್ಛ ಕನ್ನಡವನ್ನೇ ಬಳಸಿದರೆ ಮಾತ್ರ ಕನ್ನಡ ಉಳಿಯುತ್ತದೆ ಎಂದು ಮಡಿಕೇರಿ ಆಕಾಶವಾಣಿ ಕೇಂದ್ರದ ನಿವೃತ್ತ ಉದ್ಘೋಷಕ ಸುಬ್ರಾಯ ಸಂಪಾಜೆ ನುಡಿದರು.
ಕೊಡಗಿನ ಸಮರ್ಥ ಕನ್ನಡಿಗರು ಬಳಗದಿಂದ ಮಡಿಕೇರಿ ಲಯನ್ಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಬಾನುಲಿ ಸೇವೆಗಾಗಿ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಮಾತೃಭಾಷೆಯ ಗೌರವ ಉಳಿಸುವಲ್ಲಿ ತಾಯಂದಿರ ಪಾತ್ರ ಮಹತ್ವಪೂರ್ಣವಾದದ್ದು. ಕನ್ನಡ ಇಂದು ಉಳಿದಿರುವುದು ತಾಯಂದಿರಿಂದ. ಇಂಥ ಸಂಘಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಮಹಿಳೆಯರು ತಮ್ಮ ಹಲವು ಬೇಸರಗಳನ್ನು ಮರೆಯಲು ಸಾಧ್ಯ ಎಂದರು. ನಾಡು ನುಡಿಯ ಮಹತ್ವದ ಬಗ್ಗೆ ಎಲ್ಲರೂ ಅರಿವು ಬೆಳೆಸಿಕೊಳ್ಳಬೇಕು. ಮನೆಯ ಮಕ್ಕಳಲ್ಲಿ ಅದನ್ನು ಬೇರೂರಿಸಬೇಕು. ಇದು ಮಹತ್ವದ ಕೆಲಸ ಎಂದು ಸಂಪಾಜೆ ನುಡಿದರು.
ಬೆಳಕು ನೀಡಿದೆ: ಮೂರು ದಶಕಗಳ ರೇಡಿಯೋ ಸೇವೆಗಾಗಿ ಸುಬ್ರಾಯ ಅವರನ್ನು ಪತ್ನಿ ಸಹಿತ ಶಾಲು ಹೊದಿಸಿ ಸನ್ಮಾನಿಸಿದ ಅಂಬೆಕಲ್ಲು ಸುಶೀಲ ಕುಶಾಲಪ್ಪ ಮಾತನಾಡಿ, ಜಿಲ್ಲೆಯ ಮೂಲೆಮೂಲೆಗಳಲ್ಲಿರುವ ಪ್ರತಿಭೆಗಳಿಗೆ ಆಕಾಶವಾಣಿ ಮಾಧ್ಯಮ ಹೊರ ಜಗತ್ತಿನ ಬೆಳಕು ನೀಡಿದೆ. ಈ ಕೆಲಸ ನಿರಂತರ ನಡೆಯುತ್ತಿರಬೇಕು ಎಂದು ಮೆಚ್ಚು ನುಡಿಯಾಡಿದರು. ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಹಾಗೂ ಸಮರ್ಥ ಕನ್ನಡಿಗರು ಬಳಗದ ಸದಸ್ಯೆ ಕಡ್ಲೇರ ತುಳಸಿ ಮೋಹನ, ಚಿತ್ರಾ ಆರ್ಯನ್, ಬಳಗದ ಪ್ರಧಾನ ಸಂಚಾಲಕಿ ಕೆ.ಜಯಲಕ್ಷ್ಮೀ ಇದ್ದರು. ಇದೇ ಸಂದರ್ಭದಲ್ಲಿ ಕೊಡಗು ಜಿಲ್ಲೆಯ ಸಮರ್ಥ ಕನ್ನಡಿಗರು ಬಳಗದಿಂದ ಏರ್ಪಡಿಸಿದ್ದ ಬಹುಭಾಷಾ ಗೀತ ಗಾಯನ ಎಲ್ಲರ ಮನ ಸೆಳೆಯಿತು.