ಮಾತೃಭೋಜನ ಸನಾತನ ಸಂಸ್ಕೃತಿಯ ಪ್ರತೀಕ

10 NMG 01 (5)
ನಾಗಮಂಗಲ ತಾಲೂಕಿನ ಬಿಜಿ ನಗರದ ಬಿಜಿಎಸ್ ಮಾಡೆಲ್ ಪಬ್ಲಿಕ್‌ಸ್ಕೂಲ್ ಹಾಗೂ ಪಿಯು ಕಾಲೇಜು ವತಿಯಿಂದ ಆಯೋಜಿಸಿದ್ದ ಮಾತೃ ಭೋಜನ ಮತ್ತು ಕಾಲೇಜು ವಾರ್ಷಿಕೋತ್ಸವ ಸಮಾರಂಭವನ್ನು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು. ಕೇಂದ್ರ ಸಚಿವರಾದ ಕ್ರಿಶನ್‌ಪಾಲ್ ಗುರ್ಜಾರ್, ಭಗವಂತ ಖೂಭಾ ಇದ್ದರು.
Published on

ನಾಗಮಂಗಲ: ಮಾತೃ ಭೋಜನ ಎಂಬುದು ನೂತನ ಪರಿಭಾಷೆಯಲ್ಲಿ ಮೂಡಿಬಂದ ಸನಾತನ ಸಂಸ್ಕೃತಿಯ ವಿಶಿಷ್ಠ ಕಾರ್ಯಕ್ರಮವಾಗಿದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ತಾಲೂಕಿನ ಬಿಜಿ ನಗರದ ಪಾಂಚಜನ್ಯದಲ್ಲಿ ಬಿಜಿಎಸ್ ಮಾಡೆಲ್ ಪಬ್ಲಿಕ್ ಸ್ಕೂಲ್ ಹಾಗೂ ಪಿಯು ಕಾಲೇಜು ವತಿಯಿಂದ ಬುಧವಾರ ಆಯೋಜಿಸಿದ್ದ ಮಾತೃ ಭೋಜನ ಮತ್ತು ಕಾಲೇಜು ವಾರ್ಷಿಕೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ವಿಜ್ಞಾನ ತಂತ್ರಜ್ಞಾನದ ಆಧುನಿಕ ಜಗತ್ತು ವೇಗವಾಗಿ ಸಾಗುತ್ತಿದ್ದರೂ ನಮ್ಮ ದೇಶವು ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಮೈಗೂಡಿಸಿಕೊಂಡು ಮಾದರಿಯಾಗಿ ಸಾಗುತ್ತಿದೆ. ತಾಯಿಯ ಕೈತುತ್ತು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯ ಸಂಕೇತವಾಗಿದೆ. ಸಾಂಸ್ಕೃತಿಕ ರಾಯಭಾರಿಯ ಧ್ಯೋತಕವಾಗಿ ಮಾತೃ ಭೋಜನ ಕಾರ್ಯಕ್ರಮ ಜರುಗುತ್ತಿದೆ. ಮಹಾಭಾರತ ಕಾಲದಲ್ಲಿ ಕೃಷ್ಣ, ರುಕ್ಮಿಣಿಯರು ಪಾಂಡವರನ್ನು ಭೋಜನಕ್ಕೆ ಕರೆಯುವ ಸಂದರ್ಭವನ್ನು, ತಾಯಿಯ ಒಂದು ಕೈ ತುತ್ತು ಭೀಮನನ್ನು ಹೇಗೆ ಭೋಜನ ಸಂತೃಪ್ತಿಗೊಳಿಸಿತು ಎಂಬುದನ್ನು ಉಲ್ಲೇಖಿಸಿ ಮಾತೃ ಭೋಜನದ ಅರ್ಥವನ್ನು ತಿಳಿಸಿದರು.

ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಇಂಧನ ಸಚಿವ ಕ್ರಿಶನ್‌ಪಾಲ್ ಗುರ್ಜಾರ್ ಮಾತನಾಡಿ, ಸಂಸ್ಕಾರದಿಂದ ಕಲಿಯುವ ಶಿಕ್ಷಣ ದೇಶದ ಪ್ರಗತಿಗೆ ಪೂರಕವಾಗಿದ್ದು, ಮಾತೃ ಭೋಜನದಂತಹ ವಿಶಿಷ್ಟ ಕಾರ್ಯಕ್ರಮದಿಂದ ಅದು ಸಾಬೀತಾಗಿದೆ. ಇಷ್ಟೆಲ್ಲ ಮಹಿಳಾ ಬಳಗವನ್ನು ನೋಡಿದಾಗ ಭೇಟಿ ಬಚಾವೋ ಭೇಟಿ ಪಡಾವೋ ಎಂಬುದು ಸಾರ್ಥಕವಾಗಿದೆ ಎಂಬ ನಂಬಿಕೆ ಇಲ್ಲಿಂದ ವೇದ್ಯವಾಗಿದೆ. ನಿಮ್ಮೆಲ್ಲರ ಭವಿಷ್ಯ ಉಜ್ವಲವಾಗಲಿ ಎಂದು ಹರಸಿದರು.

ಹಿರಿಯ ಚಲನಚಿತ್ರ ನಟಿ ಪದ್ಮಾವಾಸಂತಿ ಮಾತನಾಡಿ, ಶ್ರೀಕೃಷ್ಣ ಪರಮಾತ್ಮನಂತೆ ಇಲ್ಲಿನ ವಿದ್ಯಾರ್ಥಿಗಳಿಗೂ ಹೆತ್ತ ಮಾತೆ ಹಾಗೂ ಕಲಿಸುವ ಗುರುಮಾತೆ ಎಂಬ ಇಬ್ಬರು ತಾಯಂದಿರು. ನನಗೂ ಕೂಡ ಇಲ್ಲಿ ಸೇರಿರುವ ಎಲ್ಲ ಮಾತೆಯರು ನೀಡಿದ ಕೈ ತುತ್ತು ಗುರು ಸಾನ್ನಿಧ್ಯದಲ್ಲಿ ನನ್ನ ಜನ್ಮವನ್ನು ಪಾವನಗೊಳಿಸಿದೆ ಎಂದು ಭಾವಪರವಶರಾದರು.

ಆದಿಚುಂಚನಗಿರಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಂ.ಎ.ಶೇಖರ್, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಆಡಳಿತಾಧಿಕಾರಿ ಡಾ.ಎ.ಟಿ.ಶಿವರಾಮು, ಆಡಳಿತ ಮತ್ತು ಶೈಕ್ಷಣಿಕ ಸಲಹೆಗಾರ ಡಾ.ಈ.ಎಸ್.ಚಕ್ರವರ್ತಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಭಗವಂತ ಖೂಭಾ, ರಾಜ್ಯ ಬಿಜೆಪಿ ಮುಖಂಡರಾದ ಆನಂದ್ ಗುರುಮೂರ್ತಿ, ಡಾ. ಸದಾನಂದ, ವಿಕಾಸ್ ಶುಕ್ಲ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಸಿಇಒ ಡಾ.ಎನ್.ಎಸ್.ರಾಮೇಗೌಡ, ಬಿಜಿಎಸ್ ಮಾಡೆಲ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ವಿ.ಪುಟ್ಟಸ್ವಾಮಿ, ಪಿಯು ಕಾಲೇಜಿನ ಪ್ರಾಂಶುಪಾಲೆ ಟಿ.ಎನ್.ಶಿಲ್ಪಾ, ವಿವಿಧ ಕಾಲೇಜುಗಳ ಪ್ರಾಂಶುಪಾಲರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net