

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಗುರುವಾಯನಕೆರೆ ನಮ್ಮ ಮನೆ ಹವ್ಯಕ ಭವನದಲ್ಲಿ ಎಸ್.ಪಿ.ವೈ.ಎಸ್.ಎಸ್. ಹವ್ಯಕ ಭವನ ಶಾಖೆಯಲ್ಲಿ ಮಾತೃ ಪೂಜನ, ಮಾತೃ ವಂದನ, ಮಾತೃ ಭೋಜನ ಎಂಬ ವಿಶಿಷ್ಟ ಭಾವಪೂರ್ಣ ಕಾರ್ಯಕ್ರಮ ನಡೆಯಿತು.
ಎಸ್.ಪಿ.ವೈ.ಎಸ್.ಎಸ್. ನೇತ್ರಾವತಿ ವಲಯ ಸಂಯೋಜಕ ಜಯರಾಮ ಸಂಸ್ಕಾರ, ಸಂಘಟನೆ, ಸೇವೆ ಎಂಬ ಧ್ಯೇಯದೊಂದಿಗೆ ಕರುಣಾಮಯಿ, ತ್ಯಾಗಮೂರ್ತಿ ಅಮ್ಮನ ಮಹತ್ವದ ಕುರಿತು ಮಾತನಾಡಿದರು.
ಹೊಸನಗರ ಶ್ರೀ ರಾಮಚಂದ್ರಾಪುರ ಮಠ ಮಾತೃ ಮಂಡಳಿ, ಹವ್ಯಕ ಭವನ ಮಾತೃ ಮಂಡಳಿ ಅಧ್ಯಕ್ಷೆ ದೇವಿಕಾ ಶಾಸ್ತ್ರಿ ಮಾತನಾಡಿ, ಮಕ್ಕಳಿಗೆ ತಾಯಂದಿರು ಬಾಲ್ಯದಿಂದಲೇ ಸಂಸ್ಕಾರದ ಪಾಠ ಕಲಿಸಬೇಕು ಎಂದರು.
ಗಾಣಿಗರ ಸಮುದಾಯ ಭವನ ಶಾಖೆಯ ಯೋಗ ಶಿಕ್ಷಕಿ ಆಶಾ ಅಧ್ಯಕ್ಷತೆ ವಹಿಸಿದರು. ಯೋಗ ತರಗತಿಯ ಬಂಧುಗಳು ಮನೆಯಲ್ಲಿ ಪ್ರಸಾದ ರೂಪದಲ್ಲಿ ತಯಾರಿಸಿ ತಂದ ವಿವಿಧ ತಿನಿಸುಗಳನ್ನು ಕೈತುತ್ತು ನೀಡುವ ಮೂಲಕ ಮಾತೃಭೋಜನ ಕಾರ್ಯಕ್ರಮ ನಡೆಸಿಕೊಟ್ಟರು.
ಯೋಗ ಬಂಧುಗಳು ತರಗತಿಯ ಅನುಭವ ಹಂಚಿಕೊಂಡರು.ಉಪ್ಪಿನಂಗಡಿ ತಾಲೂಕು ಸಂಚಾಲಕ ಸಂತೋಷ್, ವಿವಿಧ ಶಾಖೆಗಳ ಶಿಕ್ಷಕರು, 190 ಮಂದಿ ಯೋಗ, ಯೋಗೇತರ ಬಂಧುಗಳು ಭಾಗವಹಿಸಿದ್ದರು.
ಯೋಗ ಶಿಕ್ಷಕರಾದ ಪ್ರದೀಪ್, ಆನಂದ್, ಪ್ರೇಮಲತಾ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಸಂಯೋಜಿಸಲಾಗಿತ್ತು. ದಯಾನಂದ ವಂದೇಮಾತರಂ ಹಾಡಿದರು. ಬ್ರಾಹ್ಮೀ ವೈಯುಕ್ತಿಕ ಗೀತೆ ಹಾಡಿದರು. ದಮಯಂತಿ ಸ್ವಾಗತಿಸಿದರು. ಪೂರ್ಣಿಮಾ ವರದಿ ವಾಚಿಸಿದರು. ಜಯಂತಿ ಏಕನಾಥ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಸುಮಲತಾ ವಂದಿಸಿದರು.