ಮಾತೃವಂದನಾ ₹ 2.82 ಕೋಟಿ ಪಾವತಿ

FotoJet (1)
Published on

5369 ಲಾನುಭವಿಗಳಿಗೆ ಸೌಲಭ್ಯ ಹೆಣ್ಣು ಭ್ರೂಣಹತ್ಯೆ ತಡೆಯಲು ಅರಿವು

ಚಿಕ್ಕಬಳ್ಳಾಪುರ: ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಡಿ ಜಿಲ್ಲೆಯಲ್ಲಿ ಮೊದಲನೇ ಮಗುವಿಗೆ 1,98,90,000 ರೂ. ಮತ್ತು ಎರಡನೇ ಮಗುವಿಗೆ 83,46,000 ರೂ. (ಪ್ರಸಕ್ತ ಸಾಲಿನ ಏಪ್ರಿಲ್ನಿಂದ ನವೆಂಬರ್‌ವರೆಗೆ) ಪಾವತಿಯಾಗಿದೆ. ಅಂಗನವಾಡಿ ಕೇಂದ್ರಗಳಲ್ಲಿ ಯೋಜನೆಯಡಿ ನೋಂದಾಯಿತ ಗರ್ಭಿಣಿ, ಬಾಣಂತಿಯರಿಗೆ ವಿವಿಧ ಹಂತಗಳಲ್ಲಿ ನೆರವು ನೀಡಲಾಗುತ್ತದೆ. ಮೊದಲನೇ ಮಗುವಿಗೆ ಪ್ರಸವಪೂರ್ವ 3 ಸಾವಿರ ರೂ. ಮತ್ತು ಮಗು ಜನನ ನೋಂದಣಿ ಇಲ್ಲವೇ ನಿರ್ದಿಷ್ಟ ಲಸಿಕೆ ಹಾಕಿಸುವ ವೇಳೆ 3 ಸಾವಿರ ರೂ., ಎರಡನೇ ಹೆಣ್ಣು ಮಗು ಜನನಕ್ಕೆ ಒಂದೇ ಕಂತಿನಲ್ಲಿ 6 ಸಾವಿರ ರೂ. ಸಿಗುತ್ತದೆ. ಅದರಂತೆ ಜಿಲ್ಲೆಯಲ್ಲಿ ಮೊದಲನೇ ಮಗುವಿನ 3896 ಅರ್ಜಿ ಸ್ವೀಕೃತವಾಗಿದೆ. ಆದರೆ, ಅರ್ಜಿ ಸಲ್ಲಿಸಿದ ಎಲ್ಲ ಅರ್ಹ 3978 ಫಲಾನುಭವಿಗಳಿಗೆ ನೆರವು ನೀಡುವುದರೊಂದಿಗೆ ಶೇ.102, ಎರಡನೇ ಹೆಣ್ಣು ಮಗುವಿನ ನೋಂದಾಯಿತ 1480 ಅರ್ಜಿಗಳ ಪೈಕಿ 1391 ಫಲಾನುಭವಿಗಳಿಗೆ ನೆರವು ನೀಡುವುದರೊಂದಿಗೆ ಶೇ.94 ಸಾಧನೆ ತೋರಲಾಗಿದೆ.

ಯೋಜನೆ ಪ್ರಮುಖ ಉದ್ದೇಶ

ಹೆಣ್ಣು ಭ್ರೂಣ ಹತ್ಯೆ ತಡೆಯುವುದು, ಮೊದಲ ಪ್ರಸವ ಮತ್ತು ಎರಡನೇ ಹೆಣ್ಣು ಮಗುವಿನ ಜನನದ ವೇಳೆ ಬಾಣಂತಿಯರ ವಿಶ್ರಾಂತಿ, ಆರೈಕೆ, ಲಿಂಗಾನುಪಾತ ಸುಧಾರಣೆ ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯ ಪ್ರಮುಖ ಉದ್ದೇಶವಾಗಿದೆ.

ಕಡೆಗಣನೆ, ಸಾಮಾಜಿಕ ಪಿಡುಗು ಸಲ್ಲ

ಕೂಲಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಕೂಲಿ ಕಾರ್ಮಿಕ ಮಹಿಳೆಯರು ಗರ್ಭಿಣಿಯಾದ ಸಂದರ್ಭದಲ್ಲಿ ಆರೋಗ್ಯದ ಕಡೆಗೆ ಗಮನಹರಿಸುವುದಿಲ್ಲ. ಒತ್ತಡದಲ್ಲಿ ಸಮರ್ಪಕವಾಗಿ ಪೌಷ್ಟಿಕ ಆಹಾರ ಸೇವಿಸದಿರುವುದು, ವಿಶ್ರಾಂತಿ ಇಲ್ಲದೆ ಕೆಲಸ, ಸೌಕರ್ಯಗಳಿಂದ ವಂಚಿತರಾಗಿರುವುದು, ಸಕಾಲಕ್ಕೆ ಆರೋಗ್ಯ ಸೇವೆ ಪಡೆಯದಿರುವುದು ಸೇರಿ ನಾನಾ ಅಸಡ್ಡೆ ಧೋರಣೆ ಕಂಡು ಬರುತ್ತಿವೆ. ಇದರಿಂದ ರಕ್ತದ ಕೊರತೆ, ಅಪಾಯಕಾರಿ ಹೆರಿಗೆ, ಮಗುವಿನ ಬೆಳವಣಿಗೆ ಕುಂಠಿತ, ತಾಯಿ ಮತ್ತು ಮಗು ಸಾವಿನ ಪ್ರಕರಣ ವರದಿಯಾಗುತ್ತಿವೆ. ಮತ್ತೊಂದೆಡೆ ಕೆಲ ಕುಟುಂಬಗಳಲ್ಲಿ ಹೆಣ್ಣು ಮಗುವಿನ ಜನನದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಬೇಸರ ವ್ಯಕ್ತಪಡಿಸುವ, ಹೆಣ್ಣು ಶಿಶುವನ್ನು ಬಿಸಾಡುವ, ಬಾಣಂತಿಯರು ಹಾಗೂ ಅವರ ಕುಟುಂಬವನ್ನು ನಿಂದಿಸಿ ಕಿರುಕುಳ ನೀಡುವ ಪ್ರಕರಣ ನಡೆಯುತ್ತಿವೆ. ಕಳೆದ ಎರಡು ವರ್ಷದ ಹಿಂದೆ ಮಂಡಿಕಲ್ ವ್ಯಾಪ್ತಿಯಲ್ಲಿ ಮೂವರು ಹೆಣ್ಣು ಮಕ್ಕಳು ಹುಟ್ಟಿ, ಗಂಡು ಮಕ್ಕಳಿಲ್ಲ ಎಂಬ ನಿಂದನೆಯಿಂದ ನೊಂದು ಮಹಿಳೆಯೊಬ್ಬರು ಮೂವರು ಮಕ್ಕಳ ಸಮೇತ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇನ್ನು ಹೆಣ್ಣು ಭ್ರೂಣಹತ್ಯೆಗೆ ನಾಟಿ ವೈದ್ಯರ ಬಳಿಗೆ ಹೋಗಿ ಚಿಕಿತ್ಸೆ ಪಡೆದಿದ್ದ ಗರ್ಭಿಣಿ ಮೃತಪಟ್ಟಿದ್ದಳು. ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಲು ಗರ್ಭಿಣಿಯರ ಆರೈಕೆ, ತಾಯ್ತನ, ಲಿಂಗಾನುಪಾತ, ಹೆಣ್ಣು ಮತ್ತು ಗಂಡು ಸಮಾನರೆಂಬ ದೃಷ್ಟಿಯಲ್ಲಿ ಕಾಣುವುದು ಸೇರಿ ವಿವಿಧ ಜಾಗೃತಿ ಕಾರ್ಯಕ್ರಮ ಕೈಗೊಳ್ಳಲಾಗುತ್ತಿದೆ. ಜತೆಗೆ ಸರ್ಕಾರವೂ ಫಲಾನುಭವಿಗಳಿಗೆ ಆರ್ಥಿಕ ನೆರವು, ವಿವಿಧ ಸವಲತ್ತು ಒದಗಿಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net