

ರಾಣೆಬೆನ್ನೂರ: ತಾಲೂಕಿನ ಕೈಗಾರಿಕೆ ಕ್ಷೇತ್ರವಾಗಿರುವ ಕುಮಾರಪಟ್ಟಣದಲ್ಲಿ ಮಟ್ಕಾ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಇದು ಸ್ಥಳೀಯ ಮಹಿಳೆಯರ ಕೆಂಗಣ್ಣಿಗೆ ಗುರಿಯಾಗಿದೆ.
ಕುಮಾರಪಟ್ಟಣ, ಕೋಡಿಯಾಲ, ಕವಲೆತ್ತು ಗ್ರಾಮಗಳಲ್ಲಿ ಗೂಡಂಗಡಿ, ಚಿಕ್ಕಪುಟ್ಟ ಹೋಟೆಲ್ ಬಳಿ ಮಟ್ಕಾ ದಂಧೆಕೋರರು ರಾಜಾರೋಷವಾಗಿ ಮಟ್ಕಾ ಚೀಟಿ ಬರೆಯುತ್ತಿದ್ದಾರೆ. ದಾವಣಗೆರೆ, ಹರಿಹರ ಸೇರಿ ಸುತ್ತಲಿನ ಜನರು ಸಹ ಕುಮಾರಪಟ್ಟಣಕ್ಕೆ ಬಂದು ಮಟ್ಕಾ ಆಡುತ್ತಿದ್ದಾರೆ ಎಂಬ ಆರೋಪವಿದೆ.
ಮಟ್ಕಾ ದಂಧೆ ಈಗ ಹೈಟೆಕ್ ಸ್ಪರ್ಷ ಪಡೆದುಕೊಂಡಿದ್ದು, ಕೈ ಚೀಟಿ ಬದಲಾಗಿ ವಾಟ್ಸ್ಆಪ್ ಮೂಲಕ ಬರೆದುಕೊಳ್ಳುತ್ತಿದ್ದಾರೆ. ಹೀಗಾಗಿ ಕುಮಾರಪಟ್ಟಣ ಸುತ್ತಲಿನ ಯುವಕರು, ವಿದ್ಯಾರ್ಥಿಗಳು ದಂಧೆಗೆ ಬಲಿಯಾಗುತ್ತಿದ್ದಾರೆ. ಆದರೆ, ಇದನ್ನು ತಡೆಯಬೇಕಾದ ಪೊಲೀಸ್ ಇಲಾಖೆ ಮೌನ ವಹಿಸಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಹೈಟೆಕ್ ದಂಧೆ: ದಂಧೆಕೋರರು ತಮ್ಮ ಆಪ್ತರಿಗೆ ವಾಟ್ಸ್ಆಪ್ ನಂಬರ್ ಮೂಲಕ ಮಟ್ಕಾ ಅಂಕಿ, ಸಂಖ್ಯೆಯನ್ನು ನಮೂದಿಸಿಕೊಳ್ಳುತ್ತಿದ್ದಾರೆ. ಗುರುತು, ಪರಿಚಯವಿಲ್ಲದ ನಂಬರ್ನಿಂದ ಕರೆ ಬಂದರೆ, ಯಾವುದೇ ಕಾರಣಕ್ಕೂ ಫೋನ್ ತೆಗೆದುಕೊಳ್ಳುವುದಿಲ್ಲ. ಬದಲಾಗಿ ಇಂಥ ಸ್ಥಳಕ್ಕೆ ಖುದ್ದಾಗಿ ಬಂದು ಬರೆಯಿಸಿ ಎಂದು ಹೇಳುತ್ತಿದ್ದಾರೆ.
ಬಲಿಯಾಗುತ್ತಿರುವ ಯುವಜನತೆ: ಮಟ್ಕಾ ದಂಧೆಯು ಯುವಜನಾಂಗದವರನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ. ಆಂಡ್ರಾಯ್್ಡ ಮೊಬೈಲ್ ಯುಗದ ಇಂದಿನ ದಿನಗಳಲ್ಲಿ ಪ್ರತಿಯೊಬ್ಬರಲ್ಲಿಯೂ ವಾಟ್ಸ್ಆಪ್ ಇದೆ. ಹೀಗಾಗಿ ಹಿರಿಯರಿಗಿಂತ ಯುವಜನತೆಯೇ ಮಟ್ಕಾ ದಂಧೆಯಲ್ಲಿ ಹೆಚ್ಚಾಗಿ ಪಾಲ್ಗೊಳ್ಳುತ್ತಿದ್ದಾರೆ.
ಕಣ್ಣೀರಿಡುತ್ತಿರುವ ಮಹಿಳೆಯರು: ‘ಕರೊನಾದಿಂದಾಗಿ ಜನತೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ನಿತ್ಯದ ತುತ್ತಿನ ಚೀಲ ತುಂಬಿಸಿಕೊಳ್ಳುವುದು ಕಷ್ಟಕರವಾಗಿದೆ. ಇಂಥ ಸಮಯದಲ್ಲೂ ಮೂರುಹೊತ್ತು ಮಟ್ಕಾ, ಇಸ್ಪೀಟ್ ಎಂದು ಮುಳುಗಿರುತ್ತಾರೆ. ಹೊಟ್ಟೆ ತುಂಬಿಸಿಕೊಳ್ಳಲು ಕಾರ್ಖಾನೆ, ಇಟ್ಟಂಗಿ ಬಟ್ಟಿ, ಭತ್ತದ ಗದ್ದೆಗಳಲ್ಲಿ ಕೆಲಸ ಮಾಡಿ ಹಣ ತಂದರೆ, ಗಂಡ ಅದನ್ನು ಕಿತ್ತುಕೊಂಡು ಹಾಳು ದಂಧೆಗೆ ಸುರಿಯುತ್ತಿದ್ದಾನೆ. ದಿಕ್ಕು ತೋಚದಂತಾಗಿದೆ’ ಎಂಬುದು ಕುಮಾರಪಟ್ಟಣದ ಮಹಿಳೆಯೊಬ್ಬರು ‘ವಿಜಯವಾಣಿ’ ಎದುರು ಅಳಲು ತೋಡಿಕೊಂಡರು.
ಮಟ್ಕಾ ದಂಧೆಯಿಂದಾಗಿ ಬಡಕುಟುಂಬಗಳು ಬೀದಿಗೆ ಬರುವ ಸ್ಥಿತಿ ನಿರ್ವಣವಾಗಿದೆ. ಪೊಲೀಸ್ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ದಂಧೆಗೆ ಬ್ರೇಕ್ ಹಾಕಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಕುಮಾರಪಟ್ಟಣದಲ್ಲಿ ಮಟ್ಕಾ ದಂಧೆ ಮಾತ್ರವಲ್ಲದೆ ಇಸ್ಪೀಟ್ ದಂಧೆಯೂ ಜೋರಾಗಿಯೇ ನಡೆದಿದೆ. ಇದಕ್ಕೆ ಸಾಕ್ಷಿಯೆಂಬಂತೆ ಕಳೆದ ವಾರ ಹಾವೇರಿ ಡಿಸಿಆರ್ಬಿ ತಂಡದವರು ಇಸ್ಪೀಟ್ ಅಡ್ಡೆ ಮೇಲೆ ದಾಳಿ ನಡೆಸಿ 12 ಜನರನ್ನು ಬಂಧಿಸಿ, 3.8 ಲಕ್ಷ ರೂಪಾಯಿ ವಶಪಡಿಸಿಕೊಂಡಿದ್ದರು. ಕುಮಾರಪಟ್ಟಣ ಜಿಲ್ಲೆಯ ಗಡಿ ಭಾಗದಲ್ಲಿರುವ ಕಾರಣ ಹಾಗೂ ಹರಿಹರ, ದಾವಣಗೆರೆಗೆ ಸಮೀಪವಿರುವುದರಿಂದ ಸುತ್ತಲಿನ ಜಿಲ್ಲೆಯ ದಂಧೆಕೋರರು ಕುಮಾರಪಟ್ಟಣವನ್ನು ಮಟ್ಕಾ ಹಾಗೂ ಇಸ್ಪೀಟ್ ದಂಧೆಯ ಹಾಟ್ಸ್ಪಾಟ್ ಮಾಡಿಕೊಂಡಿದ್ದಾರೆ.
ಕುಮಾರಪಟ್ಟಣದಲ್ಲಿ ಮಟ್ಕಾ ಹಾಗೂ ಇಸ್ಪೀಟ್ ದಂಧೆ ಭಾರಿ ಪ್ರಮಾಣದಲ್ಲಿ ನಡೆಯುತ್ತಿದೆ. ಇದರಿಂದ ಬಡ ಕುಟುಂಬಗಳ ಹೆಣ್ಣು ಮಕ್ಕಳು ನಿತ್ಯವೂ ಕಣ್ಣೀರಲ್ಲಿ ಕೈ ತೊಳೆಯುವ ಸ್ಥಿತಿ ಎದುರಾಗಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಂಡು ದಂಧೆಗೆ ಕಡಿವಾಣ ಹಾಕಬೇಕು.| ಹೆಸರು ಹೇಳಲು ಇಚ್ಛಿಸದ ಮಹಿಳೆಕುಮಾರಪಟ್ಟಣದಲ್ಲಿ ಮಟ್ಕಾ ದಂಧೆ ನಡೆಯುತ್ತಿರುವ ಕುರಿತು ಪರಿಶೀಲಿಸುವಂತೆ, ಸಿಬ್ಬಂದಿಗೆ ಸೂಚಿಸುತ್ತೇನೆ. ಸೂಕ್ತ ಕ್ರಮ ಜರುಗಿಸುತ್ತೇನೆ.| ಹನುಮಂತರಾಯ, ಎಸ್ಪಿ ಹಾವೇರಿ