ಮಠ ನಿರಂತರ ಅಧ್ಯಯನಶೀಲರ ಸ್ಥಳ

sasve
Published on

ಸಾಸ್ವೇಹಳ್ಳಿ: ಮಠವೆಂದರೆ ಕೇವಲ ಗುರುಗಳ ವಾಸಸ್ಥಳವಲ್ಲ, ಅದು ಸಾವಿರಾರು ಶಿಷ್ಯಂದಿರು ನಿರಂತರ ಅಧ್ಯಯನಶೀಲರಾಗಿರುವ ಪ್ರಮುಖ ಸ್ಥಳ ಎಂದು ಉಜ್ಜಯಿನಿ ಪೀಠದ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಶ್ರೀಗಳು ಅಭಿಪ್ರಾಯಪಟ್ಟರು.

ಹೋಬಳಿ ವ್ಯಾಪ್ತಿಯ ಹೊಟ್ಯಾಪುರ ಗ್ರಾಮದ ಉಜ್ಜಯಿನಿ ಶಾಖಾ ಹಿರೇಮಠದಲ್ಲಿ ಮಂಗಳವಾರ ಆಯೋಜಿಸಿದ್ದ ಲಿಂ. ಗಿರಿಸಿದ್ದೇಶ್ವರ ಶಿವಾಚಾರ್ಯ ಶ್ರೀಗಳ ಪುಣ್ಯಾರಾಧನೆ, ಭಾವಪೂರ್ಣ ಶ್ರದ್ಧಾಂಜಲಿ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಅಮರಸಿಂಹನು ತನ್ನ ಅಮರಕೋಶದಲ್ಲಿ ಮಠ ಎನ್ನುವ ಶಬ್ದದ ಅರ್ಥ ಬರೆಯುವಾಗ ವಿದ್ಯಾರ್ಥಿಗಳ ವಾಸಸ್ಥಾನ ಎಂದಿದ್ದಾನೆ. ಆದ್ದರಿಂದ ಕೇವಲ ಗುರುವಿನ ನಿವಾಸ ಸ್ಥಾನವು ಮಠವೆಂದು ಕರೆಸಿಕೊಳ್ಳುವುದಿಲ್ಲ. ಜತೆಗೆ ಅಲ್ಲಿ ಶಿಷ್ಯರು ವಾಸವಾಗಿ ಗುರುವಿನಿಂದ ಪಾಠ ಪ್ರವಚನ ನಡೆಯುತ್ತಿದ್ದರೆ ಮಾತ್ರ ಅದು ಮಠ ಎಂದು ಕರೆಸಿಕೊಳ್ಳುತ್ತದೆ ಎಂದರು.

ಅಂತಹ ಮಠಗಳಲ್ಲಿ ಒಂದಾದ ಹೊಟ್ಯಾಪುರ ಹಿರೇಮಠದ ಶ್ರೀಗಳು, ರಾಂಪುರ ಮಠದ ಶ್ರೀಗಳು ಅರ್ಧದಲ್ಲೇ ತಮ್ಮ ಪ್ರಯಾಣ ಮುಗಿಸಿದ್ದು ಬೇಸರ ತಂದಿದೆ ಎಂದರು.

ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿ, ವಿಶ್ವದ ಯಾವುದೇ ಆಸ್ಪತ್ರೆಗಳಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿದರೂ ಗುಣವಾಗದ ಕಾಯಿಲೆಗಳು ಪವಿತ್ರ ಮಠಗಳಲ್ಲಿ ಗುಣವಾಗುತ್ತವೆ. ಅಂತಹ ಶಕ್ತಿ ತಾಲೂಕಿನ ರಾಂಪುರ, ಹೊಟ್ಯಾಪುರ ಮತ್ತು ಹೊನ್ನಾಳಿ ಮಠಗಳಲ್ಲಿ ಇದೆ ಎಂದು ಬಣ್ಣಿಸಿದರು.

ಚಿಕ್ಕಮಗಳೂರು ಶಂಕರದೇವರ ಮಠದ ಚಂದ್ರಶೇಖರ ಶ್ರೀ, ಕರ್ಜಗಿ ಗೌರಿಮಠದ ಶಿವಯೋಗಿ ಶ್ರೀ, ಹುಣಸಘಟ್ಟ ಹಾಲಸ್ವಾಮೀಜಿ ಮಠದ ಗುರುಮೂರ್ತಿ ಶ್ರೀ, ಬಿಳಿಕಿ ಹಿರೇಮಠ ರಾಚೋಟೇಶ್ವರ ಶ್ರೀ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಡಾ.ತೇಜಸ್ವಿ, ಕಾಡಾ ಮಾಜಿ ಅಧ್ಯಕ್ಷ ಗಿರೀಶ್ ಪಾಟೀಲ್ ಮಾತನಾಡಿದರು.

ಸಾಲೂರು ಹಿರೇಮಠ ಗುರುಲಿಂಗ ಜಂಗಮ ಶ್ರೀ, ಬಳ್ಳಾರಿ ಕಲ್ಯಾಣ ಮಠದ ಕಲ್ಯಾಣ ಶ್ರೀ, ಹೊನ್ನಾಳಿ ಹಿರೇಕಲ್ಮಠದ ಚನ್ನಮಲ್ಲಿಕಾರ್ಜುನ ಶ್ರೀ, ನಂದಿಪುರ ಡಾ.ಮಹೇಶ್ವರ ಶ್ರೀ, ಚನ್ನಗಿರಿ ಹಿರೇಮಠ ಕೇದಾರಲಿಂಗ ಶಾಂತವೀರ ಶ್ರೀ ಮತ್ತಿತರರಿದ್ದರು.

ಮಠದ ಲಿಂ. ಶ್ರೀಗಳ ಗದ್ದಿಗೆಗೆ ಮಹಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ, ಅಭಿಷೇಕ, ಪುಷ್ಪಾರ್ಚನೆ ಇತರೆ ಧಾರ್ಮಿಕ ವಿಶೇಷ ಜರುಗಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net