

ಕೆ.ಆರ್.ನಗರ: ಆರೋಗ್ಯವಂತ ಶಿಶುವಿನಿಂದ ಆರೋಗ್ಯಯುತ ಸಮಾಜ ಕಟ್ಟಬಹುದು. ಪಾಲಕರು ತಮ್ಮ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಬೇಕು ಎಂದು ಹಿರಿಯ ಶ್ರೇಣಿ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷ ಬಿ.ಸಿ.ಅರವಿಂದ ಹೇಳಿದರು.
ಪಟ್ಟಣದ ವಿಶ್ವ ಪೌಷ್ಟಿಕ ದಿನಾಚರಣೆ ಅಂಗವಾಗಿ ಸರ್ಕಾರಿ ನೌಕರರ ಭವನದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ, ನ್ಯಾಯಾಂಗ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಇತ್ತೀಚೆಗೆ ನಡೆದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಾಯಿಯ ಎದೆಹಾಲು ಉತ್ತಮ ಪೌಷ್ಟಿಕ ಆಹಾರ. ಅದು ಅಮೃತಕ್ಕೆ ಸಮಾನ. ಮಗುವಿನ ಬೆಳೆವಣಿಗೆಗೆ ತಾಯಿಯ ಆರೋಗ್ಯ ಮುಖ್ಯ. ತಾಯಿ ಆರೋಗ್ಯವಾಗಿದ್ದರೆ ಇಡೀ ಕುಟುಂಬ ಆರೋಗ್ಯವಾಗಿರುತ್ತದೆ. ತಾಯಿಯ ಗರ್ಭದಲ್ಲಿರುವಾಗಿನಿಂದಲೂ ಮಗು ಹುಟ್ಟುವವರೆಗೂ ಪೌಷ್ಟಿಕ ಆಹಾರ ನೀಡಲು ಅಂಗನವಾಡಿ ಕಾರ್ಯಕರ್ತೆಯರು ಶ್ರಮಿಸಬೇಕು ಎಂದರು.
ಪ್ರಕೃತಿದತ್ತವಾಗಿ ಬೆಳೆದ ಆಹಾರದಲ್ಲಿ ಹೆಚ್ಚಿನ ಪೌಷ್ಟಿಕಾಂಶವಿರುತ್ತದೆ. ಪೌಷ್ಟಿಕ ಆಹಾರದಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಪೂರ್ವಿಕರ ಜೀವನ ಶೈಲಿಯಲ್ಲಿ ಯಾವುದೇ ಕಾಯಿಲೆ ಬರುತ್ತಿರಲಿಲ್ಲ. ಅವರ ಜೀವನಶೈಲಿ ಇಂದಿಗೂ ದಾರಿದೀಪವಾಗಿದೆ ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಎಸ್.ಚಂದನ್ ಮಾತನಾಡಿ, ಫಾಸ್ಟ್‌ಫುಡ್‌ಗೆ ದಾಸರಾಗದೇ ಉತ್ತಮ ಪೌಷ್ಟಿಕ ಆಹಾರ ಸೇವಿಸಬೇಕು. ನಮ್ಮ ಮುಂದಿನ ಪೀಳಿಗೆಗೆ ನಮ್ಮ ಸಾಂಪ್ರದಾಯಿಕ ಆಹಾರ ಪದ್ಧತಿ ಪರಿಚಯಿಸುವ ಕೆಲಸವಾಗಬೇಕು ಎಂದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಅಸ್ರೀನಾ ಮಾತನಾಡಿ, ತಾಯಂದಿರು ಹಾಗೂ ಮಕ್ಕಳಲ್ಲಿ ಕಂಡುಬರುವ ಅಪೌಷ್ಟಿಕತೆ ತೊಡೆದು ಹಾಕಲು ಸರ್ಕಾರ ಜಾರಿಗೊಳಿಸಿದ ಯೋಜನೆಗಳು ಎಲ್ಲರಿಗೂ ತಲುಪಬೇಕು. ಅಪೌಷ್ಟಿಕತೆ ನಿವಾರಣೆಗೆ ಸಿರಿಧಾನ್ಯಗಳು, ಮೊಳಕೆಕಾಳು, ಹಣ್ಣು-ತರಕಾರಿಗಳನ್ನು ದೈನಂದಿನ ಆಹಾರದಲ್ಲಿ ಬಳಸಬೇಕು ಎಂದು ಸಲಹೆ ನೀಡಿದರು.
ಭ್ರೂಣ ಹತ್ಯೆ ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ವಕೀಲೆ ಕೆ.ಪಿ.ಪ್ರಭಾವತಿ ವಿಶೇಷ ಉಪನ್ಯಾಸ ನೀಡಿದರು.
ಸೀಮಂತ ಕಾರ್ಯಕ್ರಮ:
ಸೌಹಾರ್ದತೆ ಮತ್ತು ಸಾಮರಸ್ಯ ಹೆಚ್ಚಿಸುವ ಹಿಂದು ಮತ್ತು ಮುಸ್ಲಿಂ ಸಮುದಾಯಗಳ ನಡುವಿನ ಅಪರೂಪದ ಸೀಮಂತ ಕಾರ್ಯ ನಡೆಯಿತು. ಪಟ್ಟಣದ ಮುಸ್ಲಿಂ ಸಮುದಾಯದ ಮಹಿಳೆ ಮೆಹಕ್ ಹಾಗೂ ಹಿಂದು ಸಮುದಾಯದ ಮಹಿಳೆ ಲಿಖಿತಾ ಅವರಿಗೆ ಪಟ್ಟಣದ ನ್ಯಾಯಾಧೀಶರುಗಳ ಸಮ್ಮುಖದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮಡಿಲು ತುಂಬಿ ಸೀಮಂತ ಶಾಸ್ತ್ರ ಮಾಡಿ ಶುಭ ಹಾರೈಸಿದರು.
ಶಿಶು ಅಭಿವೃದ್ಧಿ ಅಧಿಕಾರಿ ಸಿ.ಎಂ.ಅಣ್ಣಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಕೃಷ್ಣಪ್ಪ, ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿ ಅಕ್ಕಮಹಾದೇವಿ ಮಾತನಾಡಿದರು. ಮೇಲ್ವಿಚಾರಕರಾದ ಶೋಭಾ, ಗಾಯತ್ರಿ, ರತ್ನಮ್ಮ, ಮಂಜುಳಾ, ಮೋಹನಕುಮಾರಿ, ಜಯಮಾಲ, ಪೋಷಣ್ ಅಭಿಯಾನ ಯೋಜನೆಯ ಸಂಯೋಜಕ ಹರೀಶ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಸಿ.ಎಂ.ರೇಖಾ ಇತರರು ಇದ್ದರು.