

ಬೇಲೂರು: ಬಿಜೆಪಿಯವರು ಚುನಾವಣಾ ಅಕ್ರಮದ ಮೂಲಕ ಅಧಿಕಾರ ಹಿಡಿಯಲು ಮುಂದಾಗಿದ್ದಾರೆ. ಬಿಜೆಪಿಯವರ ಅಕ್ರಮವನ್ನು ಜನರಿಗೆ ತಿಳಿಸಲು ಬೆಂಗಳೂರಿಗೆ ರಾಹುಲ್ ಗಾಂಧಿ ಬರುತ್ತಿದ್ದಾರೆ. ಅವರನ್ನು ಬೆಂಬಲಿಸಲು ಆಗಸ್ಟ್ 5 ರಂದು ಬೆಂಗಳೂರಿನಲ್ಲಿ ಬೃಹತ್ ಹೋರಾಟ ನಡೆಯಲಿದ್ದು, ಪಕ್ಷದ ಮುಖಂಡರು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮಾಜಿ ಸಚಿವ ಬಿ.ಶಿವರಾಮ್ ಹೇಳಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಪರ ಚುನಾವಣಾ ಆಯೋಗ ಆಕ್ರಮ ನಡೆಸಿದ್ದರಿಂದಾಗಿ ಮಹಾರಾಷ್ಟ್ರ ಹಾಗೂ ಕರ್ನಾಟಕದ ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆ ಕಾಂಗ್ರೆಸ್ ಪರ ಮತಗಳಲ್ಲಿ ಸಾಕಷ್ಟು ವ್ಯತ್ಯಾಸವಾಗಿದ್ದರಿಂದ ಕಾಂಗ್ರೆಸ್ ಸೋಲಿಗೆ ಕಾರಣವಾಯಿತು. ಮಹದೇವಪುರದಲ್ಲಿ ಹೆಚ್ಚು ಮತಗಳು ಒಂದೇ ಪಕ್ಷಕ್ಕೆ ಬಿದ್ದಿರುವುದು ಚುನಾವಣಾ ಆಯೋಗದ ಅಕ್ರಮ ಬಯಲಿಗೆ ಬಂದಿದೆ. ಈಗ ಬಿಹಾರ ಚುನಾವಣೆಯಲ್ಲೂ ಅಕ್ರಮದ ವಾಸನೆ ಇದ್ದು, ಚುನಾವಣಾ ಆಯೋಗ ಆಡಳಿತ ಪಕ್ಷದ ಪರ ಕೆಲಸ ಮಾಡುತ್ತಿರುವುದು ಸಾಬೀತಾಗಿದೆ. ಮುಂದೆ ಗ್ರಾಪಂ, ತಾಪಂ, ಜಿಪಂ ಚುನಾವಣೆಗಳಿವೆ. ನಮ್ಮ ಪಕ್ಷದ ಕಾರ್ಯಕರ್ತರು ಈಗಿನಿಂದಲೇ ಬೂತ್ ಮಟ್ಟದಲ್ಲಿ ಕೆಲಸ ಮಾಡಬೇಕು. ರಾಜ್ಯದಲ್ಲಿ ನಮ್ಮ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನು ಬೇರೆ ರಾಜ್ಯದವರು ಕಾಪಿ ಮಾಡುತ್ತಿದ್ದಾರೆ. ನಮ್ಮ ಯೋಜನೆಗಳ ಬಗ್ಗೆ ಜನರಿಗೆ ತಿಳಿಸಿ ಅವರ ಕಷ್ಟಕ್ಕೆ ಸ್ಪಂದಿಸಿದರೆ ಅವರು ನಮಗೆ ಮತ ಹಾಕುವುದರಿಂದ ಗೆಲುವು ಸಾಧ್ಯ. ಎಲ್ಲರೂ ಈಗಿನಿಂದಲೇ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಕೈಜೋಡಿಸಬೇಕು. ಬೆಂಗಳೂರಿನ ಬೃಹತ್ ಹೋರಾಟಕ್ಕೆ ಹೋಗೋಣ ಎಂದರು.
ಬೇಲೂರು ಕ್ಷೇತ್ರದ ವೀಕ್ಷಕ ಡಾ.ವಿಜಯ್ ಕುಮಾರ್ ಮಾತನಾಡಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಪರ ಚುನಾವಣಾ ಆಯೋಗ ಅಕ್ರಮ ನಡೆಸಿದ್ದು ಬಯಲಾಗಿದೆ. ಮುಂದಿನ ಚುನಾವಣೆಗಳಲ್ಲಿ ಅಕ್ರಮವಾಗದಂತೆ ಎಚ್ಚರ ವಹಿಸಬೇಕಿದೆ. ಬೂತ್ ಮಟ್ಟದಿಂದ ಕೆಲಸ ಮಾಡಿದರೆ ನಮ್ಮ ಪಕ್ಷದ ಅಭ್ಯರ್ಥಿಯ ಗೆಲುವು ಸಾಧ್ಯ. ಆದರೆ ನಾವು ಚುನಾವಣೆಯಲ್ಲಿ ನಮ್ಮ ನಾಯಕರಿಗೆ ಟಿಕೆಟ್ ಕೊಡಿಸಲು ಹೋರಾಟ ಮಾಡಿ ಸುಮ್ಮನಾದರೆ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ನಾವು ಮೊದಲು ಕಾರ್ಯಕರ್ತರನ್ನು ಸಂಘಟಿಸಿ ದಿನನಿತ್ಯ ಸಂಪರ್ಕದಲ್ಲಿರಬೇಕು. ಚುನಾವಣೆ ಸಂದರ್ಭ ಜನ ಸೇರಿಸಿದರೆ ಜಯ ಸಿಗುತ್ತೆ ಎಂದುಕೊಳ್ಳುವುದು ಸುಳ್ಳು. ನಾವು ಮತದಾರರ ಸಮಸ್ಯೆಗೆ ಸ್ಪಂದಿಸಿ ಕೆಲಸ ಮಾಡಲು ಮುಂದಾಗಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಶಾಂತ್, ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ಎಂ.ಆರ್.ವೆಂಕಟೇಶ್, ಬೇಲೂರು-ಹಳೇಬೀಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಯ್ಯದ್ ತೌಫಿಕ್, ಪುರಸಭೆ ಅಧ್ಯಕ್ಷೆ ಉಷಾ, ಸದಸ್ಯ ಭರತ್, ಅಕ್ರಂ ಷರೀಫ್, ಮುಖಂಡರಾದ ಹಿರೇಮಗಳೂರು ರಾಮಚಂದ್ರ, ತುಳಸಿದಾಸ್, ಮಲ್ಲಿಕಾರ್ಜುನ್ ಇತರರಿದ್ದರು.