ಬೈಂದೂರಿನಲ್ಲಿ ರೈತರ ಬೃಹತ್ ಪ್ರತಿಭಟನೆ

byn (1)
Published on

ವಿಜಯವಾಣಿ ಸುದ್ದಿಜಾಲ ಬೈಂದೂರು ಬೈಂದೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಗ್ರಾಮೀಣ ಭಾಗಗಳನ್ನು ಅವೈಜ್ಞಾನಿಕವಾಗಿ ಸೇರಿಸಿರುವುದರಿಂದ ಕೃಷಿಕರು ಪ್ರತಿದಿನ ಪರದಾಡುವಂತಾಗಿದೆ. ಹೀಗಾಗಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಿಂದ ಗ್ರಾಮೀಣ ಭಾಗಗಳನ್ನು ಕೈ ಬಿಡಬೇಕೆಂದು ಆಗ್ರಹಿಸಿ ಬೈಂದೂರು ರೈತ ಸಂಘದ ನೇತೃತ್ವದಲ್ಲಿ ಶುಕ್ರವಾರ ಸಾವಿರಾರು ರೈತರು ಜಾಥಾ ಮೂಲಕ ತಾಲೂಕು ಆಡಳಿತ ಕಚೇರಿಗೆ ಆಗಮಿಸಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಬೈಂದೂರು ರೈತ ಸಂಘ ಅಧ್ಯಕ್ಷ ನೆಲ್ಯಾಡಿ ದೀಪಕ್ ಕುಮಾರ್ ಶೆಟ್ಟಿ, ಬೈಂದೂರು ವ್ಯಾಪ್ತಿಯ ಸುತ್ತ ಮುತ್ತ ಹತ್ತಾರು ಕುಗ್ರಾಮಗಳಿವೆ. ಕೃಷಿಯೇ ಇಲ್ಲಿನ ಜನರ ಜೀವನಾಧಾರ. ಅಭಿವೃದ್ಧಿಯ ಹೆಸರಿನಲ್ಲಿ ಪಪಂ ವ್ಯಾಪ್ತಿಗೆ ಈ ಹಳ್ಳಿಗಳನ್ನು ಸೇರಿಸಿರುವುದರಿಂದ ಅಲ್ಲಿನ ಜನರ ಪರಿಸ್ಥಿತಿ ಬರಡು ಭೂಮಿಯಂತಾಗುತ್ತದೆ. ರೈತರ ಸಮಸ್ಯೆ ಪರಿಹರಿಸಬೇಕೆಂದು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಹಲವು ಬಾರಿ ಮನವಿ ನೀಡಿದರೂ ಸ್ಪಂದಿಸಿಲ್ಲ. ಗ್ರಾಮೀಣ ಭಾಗದ ಜನರಿಗೆ ನ್ಯಾಯ ದೊರೆಯಬೇಕೆಂದು ಸಾಂಕೇತಿಕವಾಗಿ ಪ್ರತಿಭಟನೆ ಮಾಡಲಾಗಿದೆ. ಜಿಲ್ಲಾಡಳಿತ ಈ ಸಮಸ್ಯೆಗೆ ಮುಂದಿನ ಗುರುವಾರದ ಒಳಗೆ ಸ್ಪಷ್ಟ ಮಾಹಿತಿ ನೀಡಿ ಸರಿಪಡಿಸದಿದ್ದರೆ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಸಹಸ್ರಾರು ರೈತರು ವಿಷದ ಬಾಟಲಿ ಹಿಡಿದು ಪ್ರತಿಭಟನೆ ನಡೆಸುತ್ತೇವೆ. ಬೈಂದೂರು ತಾಲೂಕು ಆಡಳಿತ ಕಚೇರಿ ಎದುರು ಆಮರಣಾಂತ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಪಕ್ಷಾತೀತವಾಗಿ ಎಲ್ಲ ನಾಯಕರು ಭಾಗವಹಿಸಿದ್ದರು. ಯಡ್ತರೆ ಗ್ರಾಪಂ ಮಾಜಿ ಸದಸ್ಯ ಗಣೇಶ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ವೀರಭದ್ರ ಗಾಣಿಗ ವಂದಿಸಿದರು.

ಜಿಲ್ಲಾಧಿಕಾರಿ ಬರಬೇಕೆಂದು ಪಟ್ಟು

ಪ್ರತಿಭಟನೆನಿರತ ರೈತರು ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಆಗಮಿಸಬೇಕೆಂದು ಪಟ್ಟು ಹಿಡಿದರು. ಆದರೆ ಜಿಲ್ಲಾಧಿಕಾರಿಗಳು ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿದ್ದು, ಸಹಾಯಕ ಕಮಿಷನರ್ ಕೂಡ ಬೆಂಗಳೂರಿಗೆ ತೆರಳಿದ್ದರು. ಈ ಸಂದರ್ಭ ಪ್ರತಿಭಟನಾಕಾರರು ತಾಲೂಕು ಆಡಳಿತ ಕಚೇರಿಗೆ ಒಳನುಗ್ಗಲು ಮುಂದಾದಾಗ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡೆಯಬೇಕಾಯಿತು. ಜಿಲ್ಲಾಡಳಿತದ ಪರವಾಗಿ ಕುಂದಾಪುರ ತಹಸೀಲ್ದಾರ್ ಪ್ರದೀಪ ಕುರ್ಡೇಕರ್ ಮನವಿ ಸ್ವೀಕರಿಸಿ ಸರ್ಕಾರಕ್ಕೆ ಈ ಕುರಿತು ವರದಿ ನೀಡುವುದಾಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net