ರಾಜ್ಯೋತ್ಸವಕ್ಕೆ ನಾಡಗೀತೆ ಸಾಮೂಹಿಕ ಗಾಯನ

HUN-OCT-18-5(RAJYOTSAVA PIOORVABHAVI SABHE)
ಹುಣಸೂರು ನಗರದ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಶಿರಸ್ತೇದಾರ್ ಶ್ರೀಪಾದ್ ನಲವತ್ತವಾಡೇಕರ್ ಮಾಹಿತಿ ನೀಡಿದರು. ತಹಸೀಲ್ದಾರ್ ಜೆ.ಮಂಜುನಾಥ್, ಡಾ.ದರ್ಶನ್, ಡಿ.ಕುಮಾರ್ ಇತರರಿದ್ದರು.
Published on

ಹುಣಸೂರು: ಈ ಬಾರಿಯ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ನಗರವ್ಯಾಪ್ತಿಯ 5 ಸಾವಿರಕ್ಕೂ ಹೆಚ್ಚು ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಕುವೆಂಪು ರಚಿತ ನಾಡಗೀತೆಯ ಸಾಮೂಹಿಕ ಗಾಯನ ಕಾರ್ಯಕ್ರಮ ಆಯೋಜಿಸಲು ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ನಗರದ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಆಚರಣೆ ಕುರಿತಾದ ಪೂರ್ವಭಾವಿ ಸಭೆಯಲ್ಲಿ ಈ ಕುರಿತು ಚರ್ಚಿಸಲಾಯಿತು.

ಕನ್ನಡ ಸಾಹಿತ್ಯ ಪರಿಷತ್‌ನ ತಾಲೂಕು ಅಧ್ಯಕ್ಷ ಎಚ್.ಮಹದೇವ ಮಾತನಾಡಿ, ರಾಷ್ಟ್ರಕವಿ ಕುವೆಂಪು ಬರೆದ ಕನ್ನಡ ನಾಡಿನ ನಾಡಗೀತೆಯೆಂದು ಗುರುತಿಸಲ್ಪಟ್ಟಿರುವ ಜಯ ಭಾರತ ಜನನಿಯ ತನುಜಾತೆ ಗೀತೆಗೆ 100 ವರ್ಷಗಳ ಸಂಭ್ರಮದ ಸಮಯ ಇದಾಗಿದ್ದು, ಕುವೆಂಪು ಅವರಿಗೆ ಮತ್ತು ಅವರ ಗೀತೆಗೆ ಗೌರವ ಸಮರ್ಪಿಸುವ ನಿಟ್ಟಿನಲ್ಲಿ ನ.1ರಂದು ಬೆಳಗ್ಗೆ ನಗರದ ಮುನೇಶ್ವರ ಕಾವಲ್ ಮೈದಾನದಲ್ಲಿ ಆಯೋಜನೆಗೊಳ್ಳುವ ಧ್ವಜಾರೋಹಣ ಕಾರ್ಯಕ್ರಮದಲ್ಲಿ 5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ನಾಡಗೀತೆಯ ಸಾಮೂಹಿಕ ಗಾಯನ ಕಾರ್ಯಕ್ರಮ ಆಯೋಜಿಸಲು ಸಭೆ ನಿರ್ಣಯಿಸಬೇಕೆಂದು ಕೋರಿದರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರೂ ಆದ ತಹಸೀಲ್ದಾರ್ ಜೆ.ಮಂಜುನಾಥ್ ಪ್ರತಿಕ್ರಿಯಿಸಿ, ಕನ್ನಡನಾಡಿನ ಹಬ್ಬದ ದಿನದಂದು ನಾಡಗೀತೆಗೆ ಗೌರವ ಸಮರ್ಪಿಸುವುದು ಅತ್ಯಂತ ಸಮಯೋಚಿತವಾಗಿದ್ದು, ಕ್ಷೇತ್ರ ಶಿಕ್ಷಣಧಿಕಾರಿಗಳು ಈ ಕುರಿತು ಗಮನಹರಿಸಿ ವಿದ್ಯಾರ್ಥಿಗಳನ್ನು ಕರೆತರುವ ಜವಾಬ್ದಾರಿ ನಿರ್ವಹಿಸಬೇಕು ಎಂದು ಸೂಚಿಸಿದರು.

ರಂಗನಾಥ ಬಡಾವಣೆಯಿಂದ ಮೆರವಣಿಗೆ: ಸಂಪ್ರದಾಯದಂತೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸುವ ತಾಯಿ ಭುವನೇಶ್ವರಿ ದೇವಿಯ ಮೆರವಣಿಗೆ ನಗರದ ರಂಗನಾಥ ಬಡಾವಣೆಯಿಂದ ಆರಂಭಗೊಳ್ಳಲಿದ್ದು, ಮೆರವಣಿಗೆ ಸೇತುವೆ ಮೂಲಕ ಸಂವಿಧಾನ ವೃತ್ತದ ಮೂಲಕ ಬಜಾರ್ ರಸ್ತೆ, ಜೆಎಲ್‌ಬಿ ರಸ್ತೆ, ಎಸ್‌ಜೆ ರಸ್ತೆಯ ಮೂಲಕ ಮುನೇಶ್ವರ ಕಾವಲ್ ಮೈದಾನ ತಲುಪಲಿದೆ. ಮೆರವಣಿಗೆಯಲ್ಲಿ ಜಾನಪದ ಕಲಾತಂಡಗಳು, ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳು ಪಾಲ್ಗೊಳ್ಳಲಿವೆ ಎಂದು ಜೆ.ಮಂಜುನಾಥ್ ತಿಳಿಸಿದರು.

ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಕೆ.ಹೊಂಗಯ್ಯ, ಶಿರಸ್ತೇದಾರ್ ಶ್ರೀಪಾದ್ ನಲವತ್ತವಾಡೇಕರ್, ಭೂಮಾಪನಾ ಇಲಾಖೆ ಸಹಾಯಕ ನಿರ್ದೇಶಕ ಜಗನ್ನಾಥ್, ಮುಖಂಡರಾದ ರೈತಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಬೆಂಕಿಪುರ ಚಿಕ್ಕಣ್ಣ, ಅಗ್ರಹಾರ ರಾಮೇಗೌಡ, ದಲಿತ ಮುಖಂಡ ಡಿ.ಕುಮಾರ್, ಪ್ರಭಾರ ತಾಲೂಕು ಆರೋಗ್ಯಾಧಿಕಾರಿ ಡಾ.ದರ್ಶನ್, ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸದಸ್ಯರಾದ ಜಯರಾಂ, ಪಿ.ಆರ್.ರಾಚಪ್ಪ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net