

ಹನುಮಸಾಗರ: ನವದಂಪತಿಗಳು ಹಿರಿಯರ ಮಾರ್ಗದರ್ಶನದಲ್ಲಿ ಸುಂದರ ಬದುಕು ಕಟ್ಟಿಕೊಳ್ಳಬೇಕು ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.
ಸಮೀಪದ ಬಾದಿಮನಾಳ ಗ್ರಾಮದ ಕನಕ ಗುರು ಪೀಠದಲ್ಲಿ ಬುಧವಾರ ಹಮ್ಮಿಕೊಂಡ 25ನೇ ವರ್ಷದ ಜಾತ್ರಾ ರಜತ ಮಹೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾಡಿನಾದ್ಯಂತ ಮಠಗಳು ಸಮಾಜ ತಿದ್ದುವ ಹಾಗೂ ಶಿಕ್ಷಣ ನೀಡುವ ಕೆಲಸ ಮಾಡುತ್ತಿವೆ. ಸಮುದಾಯ ಒಗ್ಗಟ್ಟಿನಿಂದ ಧಾರ್ಮಿಕ ಕಾರ್ಯಕ್ರಮಗಳು ಯಶಸ್ವಿಯಾಗಲು ಸಾಧ್ಯ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ. ನವ ದಂಪತಿಗಳು ಮನೆಯ ಹಿರಿಯರನ್ನು ಗೌರವದಿಂದ ಕಾಣಬೇಕು. ಒಬ್ಬರನೊಬ್ಬರು ಅರಿತುಕೊಂಡು ಸುಖವಾಗಿ ಸಂಸಾರ ನಡೆಸಿ.
ಇಂದಿನ ದುಬಾರಿ ದುನಿಯಾದಲ್ಲಿ ಬಡವರು ಸಾಲಮಾಡಿ ಮದುವೆ ಮಾಡಿಕೊಂಡು ಅದನ್ನು ತೀರಿಸಲು ಜೀವನ ಪರ್ಯಾಂತ ದುಡಿಯಬೇಕಾಗಿದೆ. ಸಾಮೂಹಿಕ ವಿವಾಹಗಳು ಬಡವರ ಪಾಲಿಗೆ ವರದಾನವಾಗಿದ್ದು, ಪ್ರತಿ ವರ್ಷ ಸಾಮೂಹಿಕ ಮದುವೆ ಮಾಡುತ್ತಿರುವ ಬಾದಿಮನಾಳ ಕನಕ ಗುರು ಪೀಠದ ಕಾರ್ಯ ಶ್ಲಾಘನೀಯ ಎಂದರು.
ಬಾದಿಮನಾಳ ಕನಕ ಗುರು ಪೀಠದ ಶಿವಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಜನರಲ್ಲಿ ಸಂಸ್ಕಾರ ಇದ್ದರೆ ಮಾತ್ರ ಮಠ, ಸ್ವಾಮೀಜಿಗಳು ಉಳಿಯುತ್ತಾರೆ. ಕನಕದಾಸರ ವಿಚಾರಧಾರೆ ಹಾಗೂ ಕೀರ್ತನೆಗಳು ಸರ್ವಕಾಲಕ್ಕೂ ಪ್ರಸ್ತುತ. ಹುಟ್ಟಿದ ಮೇಲೆ ಸಮಾಜಕ್ಕೆ ಒಂದಿಷ್ಟು ಸೇವೆ ಸಲ್ಲಿಸಿ, ಒಳ್ಳೆಯದು ಮಾಡಬೇಕು ಎಂದರು.
5 ಜೊಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟವು. ತಿಂಥಣಿ ಬ್ರಿಡ್ಜ್ ಕನಕ ಗುರು ಪೀಠದ ಸಿದ್ದರಾಮನಂದಪುರಿ ಸ್ವಾಮೀಜಿ, ವಿಧಾನ ಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಎಚ್.ಪಾಟೀಲ್, ಚಿದಾನಂದಯ್ಯ ಗುರುವಿನ, ಹಗರಿಬೊಮ್ಮನಹಳ್ಳಿ ಪುರಸಭೆ ಅಧ್ಯಕ್ಷ ಎಂ.ಮರಿರಾಮಪ್ಪ, ಗ್ರಾಪಂ ಅಧ್ಯಕ್ಷೆ ರೇಖಾ ಲಂಡೂರಿ, ಹಾಲುಮತ ಸಮುದಾಯದ ತಾಲೂಕು ಅಧ್ಯಕ್ಷ ಮಲ್ಲಣ್ಣ ಪಲ್ಲೆದ, ಪ್ರಮುಖರಾದ ಪ್ರಭಾಕರ ಚಿಣಿ, ಉಮೇಶ ಮಂಗಳೂರು, ಲಕ್ಷ್ಮಮ್ಮ ಟಕ್ಕಳಕಿ, ಮಹಾಂತೇಶ ಗಣವರಿ, ಹೋಳಿಯಪ್ಪ ಕುರಿ ಇತರರಿದ್ದರು.