

ಮಸ್ಕಿ: ಕೃಷಿಜ್ಞಾನ ಪ್ರದೀಪಿಕೆಯನ್ನು ನಾಡಿನ ರೈತರಿಗೆ ನೀಡಿದ ಕೃಷಿಖುಷಿ ಘನಮಠದ ಶಿವಯೋಗಿಗಳ ಹೆಸರನ್ನು ರಾಯಚೂರು ಕೃಷಿ ವಿಶ್ವ ವಿದ್ಯಾಲಯಕ್ಕೆ ಇಡಲು ಇದೀಗ ಕಾಲ ಪಕ್ವವಾಗಿದ್ದು, ಇದಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದು ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಬಿ.ವಿ. ಪಾಟೀಲ್ ಹೇಳಿದರು.
ತಾಲೂಕಿನ ಮುಸ್ಲಿಕಾರಲಕುಂಟಿ ಗ್ರಾಮದಲ್ಲಿ ಉಟಕನೂರು ಬಸವಲಿಂಗ ತಾತನವರ 34ನೇ ಜಾತ್ರಾ ಮಹೋತ್ಸವ ನಿಮಿತ್ತ ಗುರುವಾರ ನಡೆದ ಸಮಾರಂಭದಲ್ಲಿ ಮಾತನಾಡಿದರು. ರಾಯಚೂರು ಕೃಷಿ ವಿಶ್ವವಿದ್ಯಾಲಯಕ್ಕೆ ಘನಮಠ ಶಿವಯೋಗಿಗಳ ಹೆಸರು ನಾಮಕರಣ ಮಾಡಬೇಕೆಂಬ ಈ ಭಾಗದ ರೈತರ ಬೇಡಿಕೆ ಬೇಡಿಕೆಯಾಗಿಯೇ ಉಳಿದುಕೊಂಡಿದೆ. ನನ್ನ ಅವಧಿಯಲ್ಲಿ ಘನಮಠ ಶಿವಯೋಗಿಗಳು ರಚಿಸಿದ ಕೃಷಿಜ್ಞಾನ ಪ್ರದೀಪಿಕೆಯ ಗ್ರಂಥವನ್ನು ವಿಶ್ವವಿದ್ಯಾಲಯದ ಲಾಂಛನವನ್ನಾಗಿ ಮಾಡಲು ಸಾಧ್ಯವಾಯಿತು ಎಂದರು.
ಸ್ಥಳೀಯ ಜನಪ್ರತಿನಿಧಿಗಳು, ಭಕ್ತರು ಸಹಕಾರ ನೀಡಿದರೆ ಮುಂಚೂಣಿಯಲ್ಲಿ ನಿಂತು ವಿಶ್ವವಿದ್ಯಾಲಯಕ್ಕೆ ಘನಮಠ ಶಿವಯೋಗಿಗಳ ಹೆಸರು ಇಡಲು ಶ್ರಮಿಸುವೆ ಎಂದರು.
ಸಂತೆಕೆಲ್ಲೂರು ಘನಮಠೇಶ್ವರ ಮಠದ ಗುರುಬಸವ ಸ್ವಾಮೀಜಿ, ಮಸ್ಕಿ ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ, ಊಟಕನೂರಿನ ಮರಿಬಸವದೇಶಿಕೇಂದ್ರ ಸ್ವಾಮೀಜಿ, ಮಹಾಂತಿನ ಮಠದ ಮರಿ ಮಹಾಂತದೇವರು, ಉದ್ಯಮಿ ಸಿದ್ದರಾಮಣ್ಣ ಸಾಹುಕಾರ, ಗ್ರಾಪಂ ಅಧ್ಯಕ್ಷೆ ಗಿರಿಜಾ ಸಾಹುಕಾರ ಇತರರಿದ್ದರು.
ಜಾತ್ರಾ ಮಹೋತ್ಸವ ನಿಮಿತ್ತ ಬೆಳಗ್ಗೆ ಬಸವಲಿಂಗ ತಾತನವರ ಗದ್ದುಗೆಗೆ ಅಭಿಷೇಕ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಂಜೆ ರಥೋತ್ಸವ ಜರುಗಿತು. ನೂರಾರು ಭಕ್ತರು ಪಾಲ್ಗೊಂಡಿದ್ದರು. ಜಾತ್ರೋತ್ಸವಕ್ಕೆ ಸಂತೆಕೆಲ್ಲೂರು ಘನಮಠೇಶ್ವರ ಮಠದ ಗುರುಬಸವ ಸ್ವಾಮೀಜಿ ಚಾಲನೆ ನೀಡಿದರು.