

ನ್ಯಾಮತಿ: ಅಸ್ಪೃಶ್ಯತೆ ವಿರುದ್ಧ ಹೋರಾಡಿದ ಅಂಬೇಡ್ಕರ್ ಅವರು ಗ್ರಂಥಗಳನ್ನು ಪ್ರೀತಿಸುತ್ತಿದ್ದರು. ವಿದ್ಯಾರ್ಥಿಗಳು ಅವರನ್ನು ಆದರ್ಶವಾಗಿಟ್ಟುಕೊಂಡು ಪುಸ್ತಕ ಓದುವುದನ್ನು ರೂಢಿಸಿಕೊಳ್ಳಬೇಕು ಎಂದು ಕೆಪಿಎಸ್ ಕಾಲೇಜಿನ ಇತಿಹಾಸ ಉಪನ್ಯಾಸಕ ಸಿ. ನಾಗರಾಜ್ ಹೇಳಿದರು.
ಕನ್ನಡ ಸಂಸ್ಕೃತಿ ಇಲಾಖೆಯಿಂದ ಪಟ್ಟಣದ ಕರ್ನಾಟಕ ಪಬ್ಲಿಕ್ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್ ಓದು ಹಾಗೂ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳು ಡಾಕ್ಟರ್, ಇಂಜಿನಿಯರ್ ಆಗಬೇಕೆಂದು ಹಂಬಲಿಸುವ ದಿನಗಳಲ್ಲಿ ಅಂಬೇಡ್ಕರ್ ಅವರ ತಂದೆ ತಮ್ಮ ಮಗ ಒಬ್ಬ ಮಹಾನ್ ಜ್ಞಾನಿಯಾಗಬೇಕು ಎಂಬ ಆಸೆ ಹೊಂದಿದ್ದರು. ಅದರಂತೆ ಅಂಬೇಡ್ಕರ್ ಅವರು ಬೆಳೆದರು ಎಂದರು.
ಪ್ರಾಚಾರ್ಯ ವಿ.ಪಿ. ಪೂರ್ಣಾನಂದ ಮಾತನಾಡಿ, ದೇಶದಲ್ಲಿ ಅಸ್ಪೃಶ್ಯತೆ ಪಿಡುಗಾಗಿದೆ. ಇದನ್ನು ಹೋಗಲಾಡಿಸಲು ಅಂಬೇಡ್ಕರ್ ಹೋರಾಟ ನಡೆಸಿದ್ದರು. ಎಲ್ಲರೂ ಒಂದೇ ಎನ್ನುವ ಭಾವನೆ ಎಲ್ಲರಲ್ಲೂ ಬರಬೇಕಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಮಾತನಾಡಿ, ಅಂಬೇಡ್ಕರ್ ಅವರು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಿಸಿದ್ದಾರೆ. ಡಾ.ಬಿ.ಆರ್. ಅಂಬೇಡ್ಕರ್ ಓದು ಕಾರ್ಯಕ್ರಮದಡಿ ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ ಏರ್ಪಡಿಸಿ ಅವರ ಕೃತಿಗಳನ್ನು ಬಹುಮಾನವಾಗಿ ನೀಡಲಾಗಿದೆ. ಎಲ್ಲರೂ ಕೃತಿಗಳನ್ನು ತಪ್ಪದೇ ಓದಬೇಕು ಎಂದು ಸಲಹೆ ನೀಡಿದರು.
ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಕರಿಬಸಪ್ಪ, ಉಪಾಧ್ಯಕ್ಷೆ ಲಲಿತಾ, ಸದಸ್ಯೆ ಪಾರ್ವತಮ್ಮ, ಸವಳಂಗ ಕಾಲೇಜು ಪ್ರಾಚಾರ್ಯ ಕೋದಂಡರಾವ್, ನಿವೃತ್ತ ಪ್ರಾಚಾರ್ಯ ಶ್ರೀನಿವಾಸ್, ಉಪನ್ಯಾಸಕರಾದ ಗಂಗಾಧರ ನವುಲೆ, ಕೋಮಲ, ವಿಜಯಮಣಿ, ರೂಪಾ, ಮಾನಸಾ, ರಮ್ಯಾ ಇದ್ದರು.