

ಚಿಂತಾಮಣಿ : ಗೃಹಿಣಿಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಈ ಕೃತ್ಯ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ನಗರದ ನಿವಾಸಿ ಬಿಂದುಶ್ರೀ (22) ಮೃತೆ. ಗಂಡನ ಮನೆಯವರಿಂದ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಪುತ್ರಿ ಶನಿವಾರ ರಾತ್ರಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತಳ ತಂದೆ ನಗರದ ಗಾಂಧಿನಗರದ ನಿವಾಸಿ ಕೆ.ಬಿ. ದೇವರಾಜು ನಗರಠಾಣೆಗೆ ದೂರು ನೀಡಿದ್ದಾರೆ.
ಬಿಂದುಶ್ರೀಯನ್ನು ಅವಲಹಳ್ಳಿ ಬಳಿಯ ಹೀರಂಡಹಳ್ಳಿಯ ನಿವಾಸಿ ಎಚ್.ಎಂ. ರಾಘವೇಂದ್ರ ಜತೆ 2024ರ ಫೆಬ್ರವರಿ 21ರಂದು ಕೈವಾರದಲ್ಲಿ ಮದುವೆ ಮಾಡಿಕೊಡಲಾಗಿತ್ತು. 220 ಗ್ರಾಂ ಚಿನ್ನದ ಒಡವೆ ನೀಡಲಾಗಿತ್ತು. ಮದುವೆಯ ದಿನವೇ ಮಗನಿಗೆ 100 ಗ್ರಾಂ ಒಡವೆಯನ್ನು ವರದಕ್ಷಿಣೆಯಾಗಿ ನೀಡಬೇಕು ಎಂದು ರಾಘವೇಂದ್ರ ತಾಯಿ ಗಲಾಟೆ ಮಾಡಿದ್ದರು. ಕೊನೆಗೆ 60 ಗ್ರಾಂ ತೂಕದ ಬ್ರೇಸ್‌ಲೆಟ್, ಚೈನು ಹಾಗೂ ಒಂದು ಉಂಗುರ ನೀಡಿದ್ದೆವು ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಮಾವನ ಮನೆಯಲ್ಲಿ 2 ತಿಂಗಳು ಚೆನ್ನಾಗಿ ನೋಡಿಕೊಂಡಿದ್ದರು. ನಂತರ ಮಗಳು ಬಿಕಾಂ ಅಂತಿಮ ಸೆಮಿಸ್ಟರ್ ಪರೀಕ್ಷೆ ಬರೆಯಲು ಮನೆಗೆ ಬಂದಳು. ಪರೀಕ್ಷೆ ಮುಗಿಸಿಕೊಂಡು ವಾಪಸ್ ಬರುವಾಗ 20 ಲಕ್ಷ ರೂ. ಹಾಗೂ ಒಂದು ಕಾರನ್ನು ವರದಕ್ಷಿಣೆಯನ್ನಾಗಿ ತರುವಂತೆ ಗಂಡ, ಅತ್ತೆ, ಮಾವ ಹೇಳಿ ಕಳಿಸಿದ್ದರು. ಆದರೆ, ಮಗಳು ಬರಿಗೈಯಲ್ಲಿ ವಾಪಸ್ ಹೋದಾಗ ಅವಾಚ್ಯವಾಗಿ ನಿಂದಿಸಿದ್ದರು. ವರದಕ್ಷಿಣೆ ತರದಿದ್ದರೆ ನೀನು ಮನೆಗೆ ಬರಬೇಡ. ಬಂದರೆ ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿ, ದೈಹಿಕ ಮತ್ತು ಮಾನಸಿಕವಾಗಿ ಹಿಂಸೆ ನೀಡುತ್ತಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಹಣ ತರುವವರೆಗೂ ಮನೆಯಲ್ಲಿ ಇರುವುದು ಬೇಡ ಎಂದು ಆ.10ರಂದು ಲಗೇಜ್ ಸಮೇತ ಮಗಳನ್ನು ವಾಪಸ್ ಕಳುಹಿಸಿದ್ದರು. ಸೆ.11ರಂದು ಮಗಳನ್ನು ಕರೆದುಕೊಂಡು ಹೋದರೂ ಮನೆಗೆ ಸೇರಿಸಲಿಲ್ಲ. ಸೆ.12ರಂದು ಆವಲಹಳ್ಳಿ ಠಾಣೆಗೆ ದೂರು ನೀಡಿದ್ದೆವು. ಠಾಣೆ ಹೊರಗಡೆ ನಮಗೆ ಧಮಕಿ ಹಾಕಿದ್ದರು. ಈ ಎಲ್ಲ ಘಟನೆಗಳಿಂದ ನೊಂದಿದ್ದ ಬಿಂದುಶ್ರೀ ಶನಿವಾರ ಸಂಜೆ ಕೊಠಡಿಯ ್ಯಾನ್‌ಗೆ ನೇಣು ಬಿಗಿದುಕೊಂಡಿದ್ದಾಳೆ ಎಂದು ತಿಳಿಸಿದರು.
ಮಗಳ ಸಾವಿಗೆ ಗಂಡ ರಾಘವೇಂದ್ರ, ಮಾವ ಮುನಿರಾಜು, ಅತ್ತೆ ಲತಾ, ಮೈದುನ ನರಸಿಂಹಯ್ಯ ಅವರ ವರದಕ್ಷಿಣೆ ಕಿರುಕುಳವೇ ಕಾರಣ. ಅವರು ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.
ಚಿಂತಾಮಣಿ ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.