

ಹಂದನಕೆರೆ (ಚಿಕ್ಕನಾಯಕನಹಳ್ಳಿ): ಸಬ್ಬೇನಹಳ್ಳಿ ತೋಟದ ಮನೆ ಬಳಿಯ ಚೆಕ್ ಡ್ಯಾಂ ನೀರಿನಲ್ಲಿ ಗೃಹಿಣಿ ಶವ ಪತ್ತೆಯಾಗಿದೆ! ಆಕೆಗೆ ವರದಣೆ ತರುವಂತೆ ಮಾನಸಿಕ, ದೈಹಿಕ ಹಿಂಸೆ ಕೊಟ್ಟು ಸಾಯಿಸಿರುತ್ತಾರೆಂದು ಮೃತಳು ಕುಟುಂಬಸ್ಥರು ದೂರಿದ್ದು ಪತಿ ಸೇರಿ ಆತನ ಸಂಬಂಧಿಕರ ವಿರುದ್ಧ ಹಂದನಕೆರೆ ಠಾಣೆಯಲ್ಲಿ ವರದಣೆ ಕಿರುಕುಳ ಪ್ರಕರಣ ದಾಖಲಾಗಿದೆ.
ಸಬ್ಬೇನಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ವಾಸವಿದ್ದ ಪೂಜಾ (25) ಮೃತ ದುರ್ದೈವಿ. ಕಳೆದ ಸೋಮವಾರ ತವರು ಮನೆಯಿಂದ ಗಂಡನ ಮನೆಗೆ ಮರಳಿದ್ದ ಪೂಜಾ ಶುಕ್ರವಾರ (ಡಿ.20) ಕಾಣೆಯಾಗಿದ್ದಾಗಿ ಆಕೆಯ ಪತಿ ಓಂಕಾರಮೂರ್ತಿ ಠಾಣೆಗೆ ದೂರು ನೀಡಿದ್ದು ಶನಿವಾರ ಬೆಳಗ್ಗೆ ಚೆಕ್ ಡ್ಯಾಂನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ನಾಲ್ಕುವರ್ಷದ ಹಿಂದೆ ಓಂಕಾರಮೂರ್ತಿ ಜತೆ ಪೂಜಾಳ ಮದುವೆಯಾಗಿದ್ದು ದಂಪತಿಗೆ 2 ವರ್ಷದ ಗಂಡು ಹಾಗೂ 9 ತಿಂಗಳ ಹೆಣ್ಣು ಮಗುವಿದೆ.
ಶಿರಾ ತಾಲೂಕು ಎಚ್ ಕಾವಲು ಮೂಲದ ಪೂಜಾ ಮೃತದೇಹವು ಸಬ್ಬೇನಹಳ್ಳಿಯ ಓಂಕಾರಮೂರ್ತಿ ಮನೆ ಸಮೀಪದ ಚೆಕ್ ಡ್ಯಾಂನಲ್ಲಿ ಪತ್ತೆಯಾಗಿರುವುದು ಅನುಮಾನಗಳಿಗೆ ಕಾರಣವಾಗಿದೆ. ಪೂಜಾ ಸಾವಿಗೆ ಆಕೆಯ ಪತಿ, ಓಂಕಾರಮೂರ್ತಿ ಚಿಕ್ಕಪ್ಪ ರಾಜಣ್ಣ, ಚಿಕ್ಕಮ್ಮ ಕಮಲಮ್ಮ, ಸಂಬಂಧಿಕರಾದ ಗೋವಿಂದಪ್ಪ, ಭಾರತಿ, ಚಿನ್ನು (ಭಾಸ್ಕರ್), ದರ್ಶನ್, ರಾಮಜ್ಯ ಕಾರಣ ಎಂದು ಪೂಜಾ ತಾಯಿ ರೇಣುಕಮ್ಮ ಹಂದನಕೆರೆ ಠಾಣೆಗೆ ದೂರು ನೀಡಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀೆ ನಡೆಸಲಾಗಿದೆ.