

ಚನ್ನಗಿರಿ: ವಿವಾಹಿತೆಗೆ ಯುವಕ ನೊಬ್ಬ ಚಾಕುವಿನಿಂದ ಇರಿದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತಾಲೂಕಿನ ತ್ಯಾವಣಗಿ ಗ್ರಾಮದಲ್ಲಿ ಶನಿವಾರ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಸಿದ್ದೇಶ ಪ್ರೇಯಸಿ ಹತ್ಯೆಗೆ ಯತ್ನಿಸಿದ ವ್ಯಕ್ತಿ. ಹಲ್ಲೆಗೊಳಗಾದ ತ್ಯಾವಣಗಿ ಗ್ರಾಮದ ಯುವತಿಯನ್ನು ದಾವಣಗೆರೆ ಆಸ್ಪತ್ರೆಗೆ ದಾಖಲಿಸಿದೆ.
ಈ ಇಬ್ಬರು ಬೆಂಗಳೂರಿನ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್‌ಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಕಳೆದ ಐದು ವರ್ಷಗಳಿಂದ ಪ್ರೀತಿಸುತ್ತಿದ್ದರು.
ಆದರೆ, ಜಾತಿ ಕಾರಣದಿಂದ ಎರಡೂ ಮನೆಯವರು ಒಪ್ಪಿರಲಿಲ್ಲ. ಹೀಗಾಗಿ, ಕಳೆದ ಮೂರು ತಿಂಗಳ ಹಿಂದೆ ಯುವತಿ ಕುಟುಂಬದವರು ಬೇರೊಬ್ಬರೊಂದಿಗೆ ಮದುವೆ ಮಾಡಿದ್ದರು.
ಇದರಿಂದ ನೊಂದ ಸಿದ್ದೇಶ್ ಪದೇಪದೆ ಕರೆಮಾಡಿ ಪತಿಯನ್ನು ತೊರೆದು ತನ್ನ ಜತೆ ಬರುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ. ಇದಕ್ಕೆ ಆಕೆ ನಿರಾಕರಿಸಿದ್ದಾಳೆ.
ಆದರೆ, ಶನಿವಾರ ಆಕೆಯ ಮನೆಗೆ ಬಂದು ವಿಷದ ಬಾಟಲಿ ತೋರಿಸಿ ತನ್ನ ಜತೆ ಬರುವಂತೆ ಬಲವಂತ ಮಾಡಿ, ಒಪ್ಪದಿದ್ದಾಗ ಚಾಕುವಿನಿಂದ ಆಕೆಯ ಕುತ್ತಿಗೆ, ಕೈ ಕೊಯ್ದಿದ್ದಾನೆ.
ನಂತರ ತಾನೂ ಕುತ್ತಿಗೆ ಹಾಗೂ ಕೈ ನರ ಕೊಯ್ದುಕೊಂಡಿದ್ದಾನೆ. ತಕ್ಷಣ ಸ್ಥಳೀಯರು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಬ್ಬರ ಜೀವಕ್ಕೆ ತೊಂದರೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಈ ಕುರಿತು ಬಸವಾಪಟ್ಟಣದಲ್ಲಿ ಪ್ರಕರಣ ದಾಖಲಾಗಿದೆ.