

ಸುಳ್ಯ: ರಬ್ಬರ್ ಟ್ಯಾಪಿಂಗ್ ವೃತ್ತಿ ಮಾಡುತ್ತಿದ್ದ ತಮಿಳುನಾಡು ಮೂಲದ ಶಿವಕುಮಾರ ಯಾನೆ ರಾಜನ್(54) ಹಾಗೂ ಮುತ್ತುಲಕ್ಷ್ಮಿ(47) ದಂಪತಿ ಸುಳ್ಯ ತಾಲೂಕಿನ ಎಲಿಮಲೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಮಂಗಳವಾರ ಬೆಳಕಿಗೆ ಬಂದಿವೆ.
ಕಳೆದ ಹಲವು ವರ್ಷಗಳಿಂದ ನೆಲ್ಲೂರು ಕೆಮ್ರಾಜೆ ಗ್ರಾಮದ ಎಲಿಮಲೆಯಲ್ಲಿ ದಂಪತಿ ಸ್ವಂತ ಮನೆ ನಿರ್ಮಿಸಿ ನೆಲೆಸಿದ್ದರು. ಕಳೆದ ಕೆಲವು ವರ್ಷಗಳಿಂದ ದೇವಚಳ್ಳ ಗ್ರಾಮದ ಗುಡ್ಡೆ ಎಂಬಲ್ಲಿ ಜಾಗ ಖರೀದಿಸಿ ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದರು. ದಂಪತಿ ಪುತ್ರ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದು, ಓರ್ವ ಪುತ್ರಿಯನ್ನು ಉಪ್ಪಿನಂಗಡಿ ಸಮೀಪದ ಯುವಕನಿಗೆ, ಮತ್ತೋರ್ವಳನ್ನು ವಳಲಂಬೆಗೆ ಮದುವೆ ಮಾಡಿಕೊಡಲಾಗಿದ್ದು ಪ್ರಸ್ತುತ ಅವರು ಅವರು ಸುಳ್ಯದಲ್ಲಿ ವಾಸವಿದ್ದಾರೆ.
ಸೋಮವಾರ ರಾತ್ರಿ ಗಂಡ ಹೆಂಡತಿ ಮಧ್ಯೆ ಜಗಳ ನಡೆದಿದೆ ಎನ್ನಲಾಗಿದೆ. ಈ ಬಗ್ಗೆ ಮುತ್ತುಲಕ್ಷ್ಮಿ ಸುಳ್ಯದಲ್ಲಿರುವ ಮಗಳೊಂದಿಗೆ ಹೇಳಿಕೊಂಡಿದ್ದಾರೆನ್ನಲಾಗಿದೆ. ಈ ಜಗಳದಿಂದ ಮನನೊಂದ ಪತಿ ರಾಜನ್ ಮೊದಲು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಇದನ್ನು ನೋಡಿದ ಪತ್ನಿಯೂ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.