ನಾಗಾರಾಧನೆಗೆ ಸ್ಪೀಕರ್ ಯು.ಟಿಖಾದರ್ ಅವರಿಂದ ಭೂಮಿ;  10 ಸೆಂಟ್ಸ್ ಖರೀದಿಸಲು ಮುಂದಾದ ಕುಟುಂಬಕ್ಕೆ 20 ಸೆಂಟ್ಸ್ ಉಚಿತ ಜಮೀನು

IMG-20230822-WA0126
Published on

ವಿಜಯವಾಣಿ ಸುದ್ದಿಜಾಲ ಮಂಗಳೂರು
ತಲೆಮಾರುಗಳಿಂದ ನಡೆಯುತ್ತಿರುವ ನಾಗಾರಾಧನೆಗೆ ಅಗತ್ಯ ಜಮೀನನ್ನು ಒದಗಿಸುವ ಮೂಲಕ ನಾಗರ ಪಂಚಮಿ ಸಂದರ್ಭ ಕರ್ನಾಟಕ ವಿಧಾನಸಭೆಯ ಸ್ಪೀಕರ್, ಕರಾವಳಿಯ ಶಾಸಕ ಯು.ಟಿ.ಖಾದರ್ ಅವರು ಗಮನ ಸೆಳೆದಿದ್ದಾರೆ.


ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ವಿಟ್ಲದ ಪರಿಯಾಲತ್ತಡ್ಕ ಗ್ರಾಮದಲ್ಲಿ ನೆಲೆಸಿರುವ ಹಿಂದು ಕುಟುಂಬವೊಂದು ನಡೆಸುತ್ತಿದ್ದ ನಾಗಾರಾಧನೆ ವ್ಯವಸ್ಥೆಯು ಖಾದರ್ ಅವರ ಉದಾರತೆಯಿಂದ ಪುನರುಜ್ಜೀವನಗೊಂಡಿದೆ.


ತಲೆಮಾರುಗಳಿಂದ ವಿಟ್ಲದ ದಳವಾಯಿ ಕುಟುಂಬವು ಐತಿಹಾಸಿಕ ಮಹತ್ವವನ್ನು ಹೊಂದಿರುವ ಪರಿಯಾಲತ್ತಡ್ಕ ಗ್ರಾಮದ ಒಂದು ತುಂಡು ಭೂಮಿಯಲ್ಲಿ ನಾಗಾರಾಧನೆ ದೇವಾಲಯವನ್ನು ಹೊಂದಿತ್ತು. ಇಂದಿರಾ ಗಾಂಧಿಯವರ ಅಧಿಕಾರಾವಧಿಯಲ್ಲಿ ಪ್ರಾರಂಭವಾದ ಭೂಸುಧಾರಣೆ ಸಮಯದಲ್ಲಿ ಈ ಭೂಮಿ ಮಾಲೀಕತ್ವ ಯು.ಟಿ. ಖಾದರ್ ಅವರ ಅಜ್ಜ ಮಹಮ್ಮದ್ ಹಾಜಿ ಅವರಿಗೆ ವರ್ಗಾವಣೆಗೊಂಡಿತ್ತು. ಅವರು ಈ ಜಮೀನಿನಲ್ಲಿ ಅಡಕೆ, ತೆಂಗಿನ ತೋಟ ಮಾಡಿದ್ದಾರೆ. ಆ ಜಮೀನಿನ ಒಂದು ಭಾಗದಲ್ಲಿ ಇಂದಿಗೂ ನಾಗಾರಾಧನೆ ನಡೆಸಲಾಗುತ್ತದೆ. ಮಹಮ್ಮದ್ ಹಾಜಿ ಅವರ ಬಳಿಕ ಬಳಿಕ ಖಾದರ್ ಅವರು ತನ್ನ ತಂದೆ ದಿವಂಗತ ಯು.ಟಿ.ಫರೀದ್ ಅವರಿಂದ ಈ ಪಿತ್ರಾರ್ಜಿತ ಆಸ್ತಿಯನ್ನು ಪಡೆದಿದ್ದಾರೆ.  ದಳವಾಯಿ ಕುಟುಂಬದ ನಾಗಾರಾಧನೆ ಮಾಡುವ ಕಟ್ಟೆ ಅದೇ ಜಮೀನಿನಲ್ಲಿ ಇತ್ತು.

ನಾಗರಾಧನೆ ನಡೆಯುತ್ತಿದ್ದ ಸ್ಥಳ ಮುಸ್ಲಿಮರ ಒಡೆತನದ ಜಮೀನಿನಲ್ಲಿ ಇದ್ದ ಕಾರಣ ದಳವಾಯಿ ಕುಟುಂಬ ಹೊಸ  ಸ್ಥಳದಲ್ಲಿ ನಾಗಾರಾಧನೆ ನಡೆಸುತ್ತಿತ್ತು. ಮೂಲ ಸ್ಥಾನದಲ್ಲಿ ನಡೆಯುತ್ತಿದ್ದ ಪೂಜೆ ನಿಂತುಹೋಗಿತ್ತು, ಇದರಿಂದ ದಳವಾಯಿ ಕುಟುಂಬದಲ್ಲಿ ಸಮಸ್ಯೆ ಕಾಡುತ್ತಿತ್ತು. ದಳವಾಯಿ ಕುಟುಂಬದವರು ಈ ಬಗ್ಗೆ ಅಷ್ಟಮಂಗಲ ಪ್ರಶ್ನೆ ಇಟ್ಟಾಗ ಮೂಲ ಜಾಗದಲ್ಲಿ ನಾಗಾರಾಧನೆ ಮುಂದುವರಿಯುವುದು ಸಮಸ್ಯೆ ಬಗೆಹರಿಯಲು ಪರಿಹಾರ ಎನ್ನುವ ಅಭಿಪ್ರಾಯ ಬಂದಿದೆ. ಆದರೆ ಮೂಲ ಜಮೀನು ಖಾದರ್ ಅವರ ಒಡೆತನದಲ್ಲಿತ್ತು.


ಅನ್ಯ ದಾರಿ ಇಲ್ಲದ ಕಾರಣ ದಳವಾಯಿ ಕುಟುಂಬ ನಾಗನಕಟ್ಟೆ ಪ್ರದೇಶ ಒಳಗೊಂಡು 10 ಸೆಂಟ್ಸ್ ಸ್ಥಳವನ್ನು ಖರೀದಿ ಮಾಡಲು ಮುಂದಾಗಿದೆ. ಯು.ಟಿ. ಖಾದರ್ ಅವರಿಗೆ ವಿಷಯ ತಿಳಿಸಿದ ಕುಟುಂಬ 10 ಸೆಂಟ್ಸ್ ಜಮೀನನ್ನು ಖರೀದಿಸುವ ಅಭಿಪ್ರಾಯವನ್ನು ಮುಂದಿಟ್ಟಿದೆ. ವಿಷಯ ತಿಳಿದ ಖಾದರ್ ಅವರು 10 ಸೆಂಟ್ಸ್ ಬದಲು 20 ಸೆಂಟ್ಸ್ ಜಮೀನನ್ನು ದಳವಾಯಿ ಕುಟುಂಬಕ್ಕೆ ಉಚಿತವಾಗಿ ಬಿಟ್ಟುಕೊಡುವ ಮೂಲಕ ದಳವಾಯಿ ಕುಟುಂಬ ಮತ್ತು ಈ ನಾಗನ ಸಾನ್ನಿಧ್ಯದ ಭಕ್ತರ ಪ್ರೀತಿಗೆ ಪಾತ್ರರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net