

ತುಮಕೂರು : ಕರೊನಾ ಸಮಯದಲ್ಲೂ ಗಟ್ಟಿಮೇಳಗಳಿಗೆ ಕೊರತೆ ಇಲ್ಲ. ಕರೊನಾ ತಗುಲುವ ಭೀತಿ ಹಾಗೂ ಸರ್ಕಾರದ ಲಾಕ್ಡೌನ್ ನಡುವೆ ವಧುವರರು ಮನೆಗಳಲ್ಲೇ ಹಸೆಮಣೆ ಏರುತ್ತಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ನಿನ್ನೆ ಮತ್ತು ಇಂದು, ಎರಡೇ ದಿನಗಳಲ್ಲಿ, 500 ಕ್ಕೂ ಹೆಚ್ಚು ಮದುವೆಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ.
ತುಮಕೂರು ತಾಲೂಕು ಒಂದರಲ್ಲೇ 200 ಕ್ಕೂ ಹೆಚ್ಚು ಮದುವೆಗಳನ್ನು ನಡೆಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಲಾಗಿದೆ. ಚಿಕ್ಕನಾಯಕನಹಳ್ಳಿ, ಪಾವಗಡ ಮತ್ತು ಮಧುಗಿರಿ ತಾಲ್ಲೂಕುಗಳಲ್ಲೂ ಹೆಚ್ಚು ಮದುವೆಗಳು ನಡೆಯುತ್ತಿವೆ.
ತಾಳಿ ಕಟ್ಟಲು ಒಳ್ಳೇ ಮುಹೂರ್ತ ಇರೋ ಕಾರಣಕ್ಕೆ ಹಲವರು ಮದುವೆ ಕಾರ್ಯದಲ್ಲಿ ತೊಡಗುತ್ತಿದ್ದಾರೆ. ಲಾಕ್ಡೌನ್ ವಿಸ್ತರಣೆ ಮತ್ತು ಮೂರನೇ ಅಲೆಯ ಭೀತಿಯ ಕಾರಣದಿಂದ ಪರಿಸ್ಥಿತಿ ಸುಧಾರಿಸಲು ಕಾಯದೆ, ಮನೆಗಳಲ್ಲೇ ಹೆಚ್ಚು ಅಬ್ಬರವಿಲ್ಲದೆ ಮದುವೆ ಮಾಡಲು ಪಾಲಕರು ಮುಂದಾಗುತ್ತಿದ್ದಾರೆ.