

ಭಟ್ಕಳ: ತಾಲೂಕಿನ ಸುಪ್ರಸಿದ್ಧ ಮಾರಿಯಮ್ಮನ ಜಾತ್ರೆ ಪಟ್ಟಣದ ಮಾರಿಗುಡಿಯಲ್ಲಿ ಜು. 27 ಹಾಗೂ 28ರಂದು ನಡೆಯಲಿದೆ.
ಕಳೆದ ವಾರ ಮಾರಿಯಮ್ಮನ ಮೂರ್ತಿ ತಯಾರಿಗಾಗಿ ವಿಧಿ-ವಿಧಾನಗಳ ಪ್ರಕಾರ ಚಾಲನೆ ನೀಡಲಾಗಿತ್ತು. ಮಾರಿಗುಡಿ ಸಮಿತಿ ಅಧ್ಯಕ್ಷ ಪರಮೇಶ್ವರ ಎಚ್. ನಾಯ್ಕ ಕೋಣೆಮನೆ, ಶ್ರೀಪಾದ ಕಂಚುಗಾರ, ರಘುವೀರ ಬಾಳಗಿ, ನರೇಂದ್ರ ನಾಯಕ, ಶ್ರೀಧರ ನಾಯ್ಕ ಮುಂದಾಳತ್ವದಲ್ಲಿ ಮಾರುತಿ ಅನಂತ ಆಚಾರ್ಯ ನೇತೃತ್ವದ ತಂಡ ಸುಂದರ ಮೂರ್ತಿಯ ನಿರ್ಮಾಣ ಮಾಡಿದೆ. ಮಂಗಳವಾರ ಮಾರಿಯಮ್ಮನ ಆಕಾರಗಳನ್ನು ಹೋಲುವ ಮೂರ್ತಿಗೆ ಬಣ್ಣ ಬಳಿದು ರಾತ್ರಿ ಅಲ್ಲಿಯೇ ಪ್ರಥಮ ಪೂಜೆ ನೆರವೇರಿಸಲಾಗುವುದು. ಬುಧವಾರ ಬೆಳಗಿನ ಜಾವ 4 ಗಂಟೆಗೆ ಮಾರಿಕಟ್ಟೆಯಲ್ಲಿರುವ ಮಾರಿಯಮ್ಮನ ಗದ್ದುಗೆಯಲ್ಲಿ ಪ್ರತಿಷ್ಠಾಪಿಸಲಾಗುವುದು.
ಹಿನ್ನೆಲೆ: ಭಟ್ಕಳದಲ್ಲಿ ಹಿಂದಿನಿಂದ ಮಾರಿ ಜಾತ್ರೆಯು ಮಾರಿಕಟ್ಟೆಯಲ್ಲಿದ್ದ ಆಲದ ಮರದ ಬುಡದಲ್ಲಿ ಆಚರಿಸುತ್ತ ಬರಲಾಗುತ್ತಿತ್ತು. ಕಾಲ ಕ್ರಮೇಣ ಬದಲಾವಣೆ ಹೊಂದಿದರೂ ಮೂಲ ಉದ್ದೇಶಕ್ಕೆ ಧಕ್ಕೆ ಬಾರದಂತೆ ಮಾರಿ ಜಾತ್ರೆಯನ್ನು ನೂತನ ಮಾರಿಗುಡಿಯಲ್ಲಿ ನಡೆಸಿಕೊಂಡು ಬರಲಾಗುತ್ತಿದೆ. ಮಾರಿ ಜಾತ್ರೆಗೆ ಮಾರಿಕಾಂಬಾ ದೇವಸ್ಥಾನದಲ್ಲಿ ಇರುವ ಮಾರಿ ಪ್ರತಿಮೆಯ ಎದುರು ಹಿಂದಿನ ಸಂಪ್ರದಾಯದಂತೆ ನೂತನ ಜಾತ್ರಾ ಮೂರ್ತಿ ಪ್ರತಿಷ್ಠಾಪಿಸಿ ಎರಡು ದಿನಗಳ ಕಾಲ ಪೂಜೆ ಸಲ್ಲಿಸಲಾಗುತ್ತದೆ. ಹಿಂದೆ ಪ್ರತಿ ಕೆಲಸವನ್ನೂ ಒಂದೊಂದು ಸಮಾಜಕ್ಕೆ ಮೀಸಲಿಡಲಾಗಿತ್ತು. ಆದರೆ, ಇಂದು ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ನಿರ್ವಹಿಸಲಾಗುತ್ತಿದೆ.