ಆಟಿ ಅಮಾವಾಸ್ಯೆಗೆ ಮರವಂತೆ ಸಜ್ಜು :4ರಂದು ಮರವಂತೆ ದೇವಳ ಜಾತ್ರಾ ಸಿದ್ಧತೆ

Maravanthe
ಮರವಂತೆಯ ಮಾರಸ್ವಾಮಿ ಮಹಾರಾಜಸ್ವಾಮಿ ವರಾಹ ದೇವಸ್ಥಾನ ಹೊರನೋಟ
Published on

ಗಂಗೊಳ್ಳಿ: ಮರವಂತೆ ಮಾರಸ್ವಾಮಿ ಮಹಾರಾಜಸ್ವಾಮಿ ವರಾಹ ದೇವಸ್ಥಾನ ಕೇಂದ್ರಿತವಾಗಿ ಸಂಪನ್ನವಾಗುವ ಕರ್ಕಾಟಕ ಅಮಾವಾಸ್ಯೆ ಜಾತ್ರೆಗೆ ಎಲ್ಲ ಸಿದ್ಧತೆ ಪೂರ್ಣಗೊಂಡಿವೆ. ಆ.4ರಂದು ನಡೆಯುವ ಈ ಜಾತ್ರೆಗೆ ಈ ಬಾರಿ ಜನಸಾಗರವೇ ಹರಿದು ಬರುವ ನಿರೀಕ್ಷೆಯಿದೆ.

ಅಂದು ಬೆಳಗ್ಗಿನ ಜಾವದಿಂದ ಇಲ್ಲಿ ಜನ ಬರಲು ಆರಂಭಿಸುತ್ತಾರೆ. ಕೆಲವರು ಸಮುದ್ರ ಮತ್ತು ನದಿಗಳಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ. ವರಾಹ ದೇವರಿಗೆ, ಹತ್ತಿರದ ಗಂಗಾಧರೇಶ್ವರ ದೇವರಿಗೆ ಅಭಿಷೇಕ, ಪೂಜೆ, ಅರ್ಪಣೆ ಸಲ್ಲಿಸಿ ತೀರ್ಥ, ಪ್ರಸಾದ ಸ್ವೀಕರಿಸುತ್ತಾರೆ. ದೇವಸ್ಥಾನದ ಹೊರಗೆ ಸಾಲುಗಟ್ಟುವ ತಾತ್ಕಾಲಿಕ ಸರಕಿನ ಮಳಿಗೆಗಳಲ್ಲಿ ತಿಂಡಿ, ಮಕ್ಕಳ ಆಟಿಕೆ, ಮಹಿಳೆಯರ ಕೃತಕ ಶೃಂಗಾರ ಸಾಧನ ಖರೀದಿಸುತ್ತಾರೆ.

ಹಗಲಿಡೀ ಸಾವಿರಗಟ್ಟಲೆಯಲ್ಲಿ ಬಂದು ಹೋಗುವ ಜನರಿಂದ ಭರಾಟೆ ವ್ಯಾಪಾರ ನಡೆಯುತ್ತದೆ. ಹೀಗಾಗಿ ಭಕ್ತರನ್ನು ನಿಯಂತ್ರಿಸುವುದು ಸವಾಲಿನ ಕೆಲಸ. ದೇವಾಲಯದೊಳಗೆ ಆಡಳಿತ ಮಂಡಳಿ ಮತ್ತು ಸೇವಾ ವರ್ಗದ ಸದಸ್ಯರು ಸ್ವಯಂಸೇವಕರ ಜತೆ ಸೇರಿ ಶುಚಿತ್ವ, ಪೂಜೆ, ಭಕ್ತರ ಆಗಮನ-ನಿರ್ಗಮನ, ಪ್ರಸಾದ ವಿತರಣೆ ಸುಗಮವಾಗಿ ನಡೆಯಲು ಅಗತ್ಯ ವ್ಯವಸ್ಥೆ ಕಲ್ಪಿಸಿದ್ದಾರೆ. ದೇವಾಲಯಕ್ಕೆ ಆಕರ್ಷಕ ಪುಷ್ಪಾಲಂಕಾರ ಸಿದ್ಧತೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net