

ಸರಗೂರು: ತಾಲೂಕಿನ ಹಲಸೂರು ಗ್ರಾಮದಲ್ಲಿ ಹೊಸದಾಗಿ ನಿರ್ಮಿಸಿರುವ ಗ್ರಾಮ ದೇವತೆ ಮಾರಮ್ಮ ದೇವಾಲಯದ ಉದ್ಘಾಟನೆ ಮತ್ತು ದೇವರ ಪ್ರತಿಷ್ಠಾಪನೆ ಕಾರ್ಯಕ್ರಮ ಇತ್ತೀಚೆಗೆ ಸಾಂಗವಾಗಿ ನೆರವೇರಿತು.
100 ವರ್ಷಗಳಷ್ಟು ಹಳೆಯದಾದ ಮಾರಮ್ಮ ದೇವಿಯ ದೇವಾಲಯವು ಶಿಥಿಲವಾಗಿತ್ತು. ಗ್ರಾಮಸ್ಥರ ಕೋರಿಕೆ ಮೇರೆಗೆ ಶಾಸಕ ಅನಿಲ್ ಚಿಕ್ಕಮಾದು, ದಾನಿಗಳ ನೆರವು ಮತ್ತು ಗ್ರಾಮಸ್ಥರ ಸಹಕಾರದಿಂದ ದೇವಸ್ಥಾನ ನಿರ್ಮಾಣವಾಗಿದೆ.
ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ಗ್ರಾಮಸ್ಥರ ಕೋರಿಕೆಯಂತೆ ದೇವಾಲಯ ನಿರ್ಮಿಸಲಾಗಿದ್ದು, ಎಲ್ಲರೂ ಸಹಬಾಳ್ವೆ, ಒಗ್ಗಟ್ಟಿನಿಂದ ಜಾತ್ರೆ ಮತ್ತು ಧಾರ್ಮಿಕ ಆಚರಣೆಗಳನ್ನು ನಡೆಸಿಕೊಂಡು ಹೋಗುವಂತೆ ಸಲಹೆ ನೀಡಿದರು.
ಪಡುವಲು ವೀರಕ್ತ ಮಠದ ಶ್ರೀ ಮಹದೇವ ಸ್ವಾಮೀಜಿ, ಜೆಡಿಎಸ್ ಮುಖಂಡ ಕೆ.ಎಂ.ಕೃಷ್ಣನಾಯಕ, ಜಯಪ್ರಕಾಶ್ ದೇವರ ದರ್ಶನ ಪಡೆದರು. ಗ್ರಾಮದ ಎಲ್ಲ ಸಮುದಾಯದ ಮುಖಂಡರ ನೇತೃತ್ವದಲ್ಲಿ ಗ್ರಾಮಸ್ಥರು ಧಾರ್ಮಿಕ ಆಚರಣೆ ಮತ್ತು ಪೂಜೆ ಪುನಸ್ಕಾರಗಳನ್ನು ನೆರವೇರಿಸಿದರು. ಮೂರು ದಿನಗಳ ಕಾಲ ಅನ್ನದಾಸೋಹ ನಡೆಯಿತು. ಗ್ರಾಮಸ್ಥರು ಹಾಗೂ ಸುತ್ತ ಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಾಯಿಯ ದರ್ಶನ ಪಡೆದರು.