

ವಿಜಯವಾಣಿ ವಿಶೇಷ ಲಿಂಗಸುಗೂರು
ಕೃಷಿ ಪ್ರಧಾನವಾದ ನಮ್ಮ ರಾಷ್ಟ್ರದಲ್ಲಿ ರೈತಾಪಿ ವರ್ಗ ತಮ್ಮ ಜಮೀನುಗಳಿಗೆ ತಿಪ್ಪೆಗೊಬ್ಬರ ಬಳಸುವುದು ಪುರಾತನ ಪರಂಪರೆ. ಅದರಂತೆ ಪ್ರಸಕ್ತ ಮುಂಗಾರು ಹಂಗಾಮಿನ ಬಿತ್ತನೆಗೆ ರೈತರು ಸಿದ್ಧತೆಯಲ್ಲಿ ತೊಡಗಿದ್ದು, ತಿಪ್ಪೆಗೊಬ್ಬರದ ಬೇಡಿಕೆ ಹೆಚ್ಚಾಗಿರುವುದು ಕಂಡು ಬರುತ್ತಿದೆ.
ಕಳೆದ ಮೂರು ದಶಕಗಳ ಹಿಂದೆ ತಿಪ್ಪೆಗೊಬ್ಬರವಿಲ್ಲದೆ ವ್ಯವಸಾಯವೇ ಇರುತ್ತಿರಲಿಲ್ಲ. ಮಣ್ಣಿನ ರಕ್ಷಣೆ, ಫಲವತ್ತತೆ, ಸಸ್ಯಗಳ ಬೆಳವಣಿಗೆಗೆ ಅಗತ್ಯವಿರುವ ಪೋಷಕಾಂಶಗಳು ತಿಪ್ಪೆಗೊಬ್ಬರದಲ್ಲಿ ಇರುವುದರಿಂದ ಇದು ಭೂಮಿಗೆ ಸಂಜೀವಿನಿ ಎಂದು ಕರೆಯಲಾಗುತ್ತಿತ್ತು.
ಇದನ್ನೂ ಓದಿ: ಭಕ್ತಿಯಿಂದ ಮುಕ್ತಿ ಹೊಂದಲು ಸಾಧ್ಯ: ಶಿವಶಾಂತವೀರ ಶರಣರು
ದನ-ಕರುಗಳು ತಿನ್ನುವ ಆಹಾರದ ಬಹುಪಾಲನ್ನು ಸೆಗಣಿ, ಮೂತ್ರದ ರೂಪದಲ್ಲಿ ಹೊರ ಹಾಕುತ್ತವೆ. ಮೂತ್ರದಲ್ಲಿನ ರಂಜಕವು ಬಹು ಬೇಗನೆ ಬದಲಾವಣೆ ಹೊಂದಿ ವಾಯು ರೂಪದಲ್ಲಿ ಆವಿಯಾಗುವುದರಿಂದ ದಿನನಿತ್ಯ ತಿಪ್ಪೆ ಗುಂಡಿಗೆ ಹಾಕಿ ಸಂಗ್ರಹಿಸುತ್ತಾರೆ. ಬೇಸಿಗೆ ಮುಗಿದು ಮಳೆಗಾಲ ಆರಂಭಕ್ಕೆ ಮುನ್ನ ಹೊಲಗಳಲ್ಲಿ ಚಿಕ್ಕಚಿಕ್ಕ ಗುಂಪುಗಳನ್ನು ಹಾಕಿ ನಂತರ ಸಮವಾಗಿ ಹರಡಿ ಭೂಮಿ ಹದ ಮಾಡಿಕೊಳ್ಳುತ್ತಾರೆ.
ತಾಲೂಕಿನಲ್ಲಿ ನೀರಾವರಿ 15,534 ಹಾಗೂ ಖುಷ್ಕಿ 45,597 ಹೆಕ್ಟೇರ್ ಸೇರಿ ಒಟ್ಟು 61,131 ಹೆಕ್ಟೇರ್ ಪ್ರದೇಶ ಬಿತ್ತನೆಗೆ ಅವಕಾಶವಿದೆ. ಮಳೆಯಾಶ್ರಿತ ಒಣಬೇಸಾಯ ಪದ್ಧತಿ ಅನುಸರಿಸುವ ರೈತರಿಗೆ ಕೊಟ್ಟಿಗೆ ಗೊಬ್ಬರವೇ ಭೂಮಿಗೆ ಸಂಜೀವಿನಿ ಇದ್ದಂತೆ.
ಕೆಲ ವರ್ಷಗಳ ಹಿಂದೆ ನಾರಾಯಣಪುರ ಬಲದಂಡೆ ಕಾಲುವೆ, ರಾಂಪೂರ ಏತನೀರಾವರಿ ಹಾಗೂ ಮಸ್ಕಿ ನಾಲಾ ಯೋಜನೆ ಜಾರಿಯಿಂದ ಅಚ್ಚುಕಟ್ಟು ಪ್ರದೇಶದ ರೈತರು ಬೆಳೆಗಳಿಗೆ ರಸಾಯನಿಕ ಗೊಬ್ಬರ ಬಳಸುತ್ತಿದ್ದಾರೆ. ಒಣಬೇಸಾಯ ರೈತರು ಬಹುತೇಕ ತಿಪ್ಪೆಗೊಬ್ಬರ ಬಳಸುತ್ತಾರೆ.
ರಸಾಯನಿಕ ಗೊಬ್ಬರಗಳ ಬಳಕೆಯಿಂದ ಬೆಳೆದ ಆಹಾರ ಧಾನ್ಯ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದ್ದು, ಭೂಮಿ ಹಂತಹಂತವಾಗಿ ಫಲವತ್ತತೆ ಕಳೆದುಕೊಳ್ಳಲಿದೆ ಎಂಬುದನ್ನರಿತ ಕೆಲ ರೈತಾಪಿ ವರ್ಗ ಸಾವಯವ ಕೃಷಿಯೇ ಶ್ರೇಷ್ಠವೆಂದು ಮೂಲ ಕೃಷಿಗೆ ಮುಖ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.
ಇತ್ತೀಚೆಗೆ ಹೆಚ್ಚಿದ ಯಂತ್ರಗಳ ಬಳಕೆ ಹಾಗೂ ಅತಿವೃಷ್ಟಿ-ಅನಾವೃಷ್ಟಿ, ಬರಗಾಲದಿಂದ ತೀವ್ರ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿರುವ ರೈತರು ಜಾನುವಾರುಗಳನ್ನು ಮಾರಾಟ ಮಾಡುತ್ತಿರುವ ಪ್ರಯುಕ್ತ ಜಾನುವಾರಗಳ ಸಂಖ್ಯೆ ಕ್ಷೀಣಿಸುತ್ತಿದೆ. ಇದರಿಂದ ತಿಪ್ಪೆಗೊಬ್ಬರಕ್ಕೆ ಪ್ರತಿವರ್ಷ ಬೇಡಿಕೆ ಕಂಡು ಬರುತ್ತದ್ದು, ಪ್ರತಿ ಟ್ರ್ಯಾಕ್ಟರ್ ತಿಪ್ಪೆಗೊಬ್ಬರಕ್ಕೆ ಎರಡರಿಂದ ಮೂರು ಸಾವಿರ ರೂ.ವರೆಗೆ ಖರೀದಿಸಿ ಜಮೀನುಗಳಿಗೆ ಹರಗಲಾಗುತ್ತಿದೆ.
ಬಿತ್ತನೆ ಭೂಮಿಗೆ ತಿಪ್ಪೆಗೊಬ್ಬರ ಹಾಕಿದರೆ ಭೂಮಿಯ ಫಲವತ್ತತೆ ಜತೆಗೆ ಸಮೃದ್ಧ ಬೆಳೆ ಪಡೆಯಬಹುದು. ಸಣ್ಣ, ಅತಿ ಸಣ್ಣ ರೈತರು ತಿಪ್ಪೆಗೊಬ್ಬರ ಅಲವಲಂಬನೆಯಿಂದ ಬೇಡಿಕೆ ಹೆಚ್ಚಾಗಿದೆ. ಸರ್ಕಾರ ಬಡವರಿಗೆ ಪ್ರೋತ್ಸಾಹ ಧನ ನೀಡಿ ಹಸುಗಳನ್ನು ಒದಗಿಸಿದರೆ ರೈತರಿಗೆ ಸಾಕಷ್ಟು ಅನುಕೂಲವಾಗುತ್ತದೆ.| ಶಿವಪುತ್ರಗೌಡ ಪೊಲೀಸ್ ಪಾಟೀಲ್, ಅಧ್ಯಕ್ಷ, ಕರ್ನಾಟಕ ರಾಜ್ಯ ರೈತಸಂಘ, ಲಿಂಗಸುಗೂರು.