

ಬೆಂಗಳೂರು: ಪ್ರೌಢಶಾಲೆ ಮತ್ತು ಕಾಲೇಜು ಶಿಕ್ಷಣ ಹಂತ ತಲುಪಿರುವ ಮಕ್ಕಳಿಗೆ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ‘ಮನೋಚೈತನ್ಯ’ ಯೋಜನೆ ಜಾರಿಯಲ್ಲಿದ್ದು, ಇದರ ಉಪಯೋಗ ಪಡೆದುಕೊಳ್ಳಬೇಕಾಗಿ ಆರೋಗ್ಯ ಇಲಾಖೆ ತಿಳಿಸಿದೆ.
ಆಯ್ದ ಮಂಗಳವಾರ ಅಥವಾ ಶುಕ್ರವಾರದಂದು ಮಾನಸಿಕ ತೊಂದರೆ ಉಳ್ಳವರಿಗೆ ಈ ಯೋಜನೆಯಡಿ ಮನೋವೈದ್ಯರ ತಂಡ ಆಪ್ತ ಸಮಾಲೋಚನೆ ನಡೆಸಿ ಉಚಿತ ಚಿಕಿತ್ಸೆ ನೀಡುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಇಲ್ಲವೆ ಯಾವುದೇ ಹತ್ತಿರದ ಜಿಲ್ಲಾ ಆಸ್ಪತ್ರೆ. ತಾಲೂಕು ಆಸ್ಪತ್ರೆ, ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯದ ಮನೋವೈದ್ಯಕೀಯ ತಂಡದ ಮೂಲಕ ಉಚಿತ ಆಪ್ತ ಸಮಾಲೋಚನೆ ಹಾಗೂ ಚಿಕಿತ್ಸೆ ಪಡೆಯಬಹುದಾಗಿದೆ.
ಕಳೆದ ವರ್ಷ ನಡೆದ ರಾಜ್ಯಮಟ್ಟದ ಮಕ್ಕಳ ಹಕ್ಕು ಸಂಸತ್ - 2023 ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಕ್ಕಳು ಪ್ರೌಢಶಾಲೆ ಮತ್ತು ಕಾಲೇಜು ಶಿಕ್ಷಣ ಹಂತ ತಲುಪಿದ ಮಕ್ಕಳಿಗೆ ಕಲಿಕೆಯಲ್ಲಿ ಹಿಂದುಳಿಯುವುದನ್ನು ತಡೆಗಟ್ಟಲು ಸೂಕ್ತ ಸಂಖ್ಯೆಯಲ್ಲಿ ತರಬೇತಿ ಹೊಂದಿರುವ ಶಿಕ್ಷಣ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಆಪ್ತ ಸಮಾಲೋಚಕರನ್ನು ನೇಮಿಸುವಂತೆ ಬೇಡಿಕೆ ಇರಿಸಿದ್ದರು. ಅದರಂತೆ ಈಗಾಗಲೇ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿ ರಾಜ್ಯಾದ್ಯಂತ 31 ಜಿಲ್ಲೆಗಳಲ್ಲಿ ಹಾಗೂ ಬಿಬಿಎಂಪಿಯಲ್ಲಿ ‘ಮನೋಚೈತನ್ಯ’ ಯೋಜನೆ ಜಾರಿಯಲ್ಲಿದ್ದು, ಎಲ್ಲಾ ಜಿಲ್ಲಾ ಆಸ್ಪತ್ರೆಗಳ ಮನೋವೈದ್ಯಕೀಯ ತಂಡಗಳ ಮೂಲಕ ಮನೋರೋಗಿಗಳಿಗೆ ಉಚಿತ ಆಪ್ತ ಸಮಾಲೋಚನೆ ಹಾಗೂ ಚಿಕಿತ್ಸೆ ನೀಡಲಾಗುತ್ತಿದೆ. ಅಗತ್ಯ ಇರುವವರು ಯೋಜನೆಯ ಲಾಭ ಪಡೆದುಕೊಳ್ಳಬೇಕಾಗಿ ಇಲಾಖೆ ಆಯುಕ್ತ ಡಿ. ರಂದೀಪ್ ತಿಳಿಸಿದ್ದಾರೆ.