ಪ್ರತಿಭೆ ಅನಾವರಣಕ್ಕೆ ಕಲೋತ್ಸವ ಉತ್ತಮ ವೇದಿಕೆ : ಶಾಸಕ ಎ.ಕೆ.ಎಂ.ಅಶ್ರಫ್ ಹೇಳಿಕೆ

New Project (4)
Published on

ವಿಜಯವಾಣಿ ಸುದ್ದಿಜಾಲ ಉಪ್ಪಳ

ವಿದ್ಯಾರ್ಥಿಗಳ ಸುಪ್ತ ಪ್ರತಿಭೆ ಅನಾವರಣಗೊಳಿಸುವ ಶಾಲಾ ಕಲೋತ್ಸವ ಶಿಕ್ಷಣದ ಜತೆಗೆ ವೈಯಕ್ತಿಕ ಸಾಮರ್ಥ್ಯ ಪ್ರದರ್ಶನಕ್ಕೆ ಅತ್ಯುತ್ತಮ ವೇದಿಕೆಯಾಗಿದೆ. ಬಹುಭಾಷೆಗಳ ಸಂಗಮ ಭೂಮಿಯಾದ ಮಂಜೇಶ್ವರ ಉಪಜಿಲ್ಲಾ ವ್ಯಾಪ್ತಿಯ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಪೂರಕವಾಗಿ ಇಲ್ಲಿನ ಶಾಲೆ, ವಿದ್ಯಾಭಿಮಾನಿಗಳು ನೀಡುತ್ತಿರುವ ಬೆಂಬಲ ಸ್ತುತ್ಯರ್ಹ ಎಂದು ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಹೇಳಿದರು.

ಪೈವಳಿಕೆ ನಗರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮಂಗಳವಾರ ಮಂಜೇಶ್ವರ ಉಪಜಿಲ್ಲಾಮಟ್ಟದ 64ನೇ ಶಾಲಾ ಕಲೋತ್ಸವದ ಲಾಂಛನ ಬಿಡುಗಡೆಗೊಳಿಸಿ, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪೈವಳಿಕೆ ಗ್ರಾಪಂ ಅಧ್ಯಕ್ಷೆ ಜಯಂತಿ ಕೆ. ಅಧ್ಯಕ್ಷತೆ ವಹಿಸಿದ್ದರು. ಜಿಪಂ ಉಪಾಧ್ಯಕ್ಷ ಶಾನವಾಸ್ ಪಾದೂರು ಮುಖ್ಯ ಅತಿಥಿಯಾಗಿದ್ದರು. ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಜೋರ್ಜ್ ಕ್ರಾಸ್ತಾ ಮಾತನಾಡಿದರು.

ಜಿಪಂ ಸದಸ್ಯೆ ಕಮಲಾಕ್ಷಿ, ಗೋಲ್ಡನ್ ಅಬ್ದುಲ್ ರಹಮಾನ್, ನಾರಾಯಣ ನಾಯ್ಕ, ಗ್ರಾಪಂ ಉಪಾಧ್ಯಕ್ಷೆ ಪುಷ್ಪಲಕ್ಷ್ಮೀ ಎನ್., ಕಣ್ಣೂರು ವಿಭಾಗ ವಿದ್ಯಾಭ್ಯಾಸ ನಿರ್ದೇಶಕ ವಿನೋದ್ ಕುಮಾರ್ ಎ.ಕೆ., ಸಹಾಯಕ ನಿರ್ದೇಶಕಿ ಉದಯಕುಮಾರಿ ಇ.ಆರ್., ಕಾಸರಗೋಡು ಜಿಲ್ಲಾ ವಿದ್ಯಾಭ್ಯಾಸ ನಿರ್ದೇಶಕಿ ಸವಿತಾ, ಶಾಲಾ ಪ್ರಾಂಶುಪಾಲ ರಘುರಾಮ ಆಳ್ವ ಕೆ.ಬಿ. ಮತ್ತಿತರರು ಉಪಸ್ಥಿತರಿದ್ದರು. ಕಲೋತ್ಸವ ಸಮಿತಿ ಸಂಚಾಲಕ ವಿಶ್ವನಾಥ ಕೆ. ಸ್ವಾಗತಿಸಿದರು. ಅನೀಶ್ ಕೆ. ವಂದಿಸಿದರು.

ಬೆಳಗ್ಗೆ ಉಪಜಿಲ್ಲಾ ವಿದ್ಯಾಧಿಕಾರಿ ಜೋರ್ಜ್ ಕ್ರಾಸ್ತಾ ಧ್ವಜಾರೋಹಣಗೈದರು. ಅ.30ರವರೆಗೆ ನಡೆಯುವ ಉಪಜಿಲ್ಲಾ ಶಾಲಾ ಕಲೋತ್ಸವದಲ್ಲಿ ಉಪಜಿಲ್ಲೆಯ 118 ಶಾಲೆಗಳ 4,700ಕ್ಕೂ ಮಿಕ್ಕಿದ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದು, ವಿಜೇತರು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಲಿದ್ದಾರೆ.

ಸಕಲ ವ್ಯವಸ್ಥೆ

ಕಲೋತ್ಸವದ ಎಲ್ಲ ದಿನ ಭಾಗವಹಿಸುವ ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರಿಗೆ ಬೆಳಗ್ಗಿನ ಉಪಾಹಾರ, ಮಧ್ಯಾಹ್ನ ಭೋಜನ, ಸಂಜೆಯ ಲಘು ಉಪಾಹಾರ ವ್ಯವಸ್ಥೆಗೊಳಿಸಲಾಗಿದೆ. ಕುಡಿಯುವ ನೀರು, ಆಹಾರ, ಶಿಸ್ತು, ನೈರ್ಮಲ್ಯ, ಆರೋಗ್ಯ, ವೇದಿಕೆ, ಧ್ವನಿ ಮತ್ತು ಬೆಳಕು ಮೊದಲಾದ ವಿಭಾಗಗಳಲ್ಲಿ ಪೈವಳಿಕೆ ನಗರ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರ ಸ್ವಯಂಸೇವಕ ತಂಡ ನಿರಂತರ ಕಾರ್ಯನಿರ್ವಹಿಸುತ್ತಿದೆ. ಸ್ಥಳೀಯರೂ ಕೈಜೋಡಿಸಿದ್ದಾರೆ.

ಉತ್ಸವ ನಗರಿ

ಪೈವಳಿಕೆ ನಗರ ಅಚ್ಚ ಕನ್ನಡಿಗರೇ ಅತಿ ಹೆಚ್ಚಿರುವ ಪ್ರದೇಶವಾಗಿದ್ದು, ಕಲೆ, ಸಾಹಿತ್ಯಕ್ಕೆ ಆಡುಂಬೋಲದಂತಿದೆ. ಕಲೋತ್ಸವ ಹಿನ್ನೆಲೆಯಲ್ಲಿ ಪೈವಳಿಕೆ ನಗರ ವಿಶೇಷ ಅಲಂಕೃತ ಪೇಟೆಯಾಗಿದ್ದು, ಅಕ್ಷರಶಃ ಉತ್ಸವ ನಗರಿಯಾಗಿ ಮಾರ್ಪಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net