

ಬೆಂಗಳೂರು: ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ 4ನೇ ಮಹಡಿಯಿಂದ ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದ ನಿರ್ಮಾಣ ಕೆಲಸಗಾರ 32 ವರ್ಷದ ಪವನ್ ಪ್ರತಾಪ್ ಅವರಿಗೆ ಹೆಬ್ಬಾಳದ ಮಣಿಪಾಲ ಆಸ್ಪತ್ರೆಯ ವೈದ್ಯರ ತಂಡ ಯಶಸ್ವಿ ಚಿಕಿತ್ಸೆ ನೀಡುವ ಮೂಲಕ ರೋಗಿಯನ್ನು ಪ್ರಾಣಾಪಾಯದಿಂದ ಪಾರು ಮಾಡಿದೆ.
ಘಟನೆ ವೇಳೆ ಪವನ್ ನಾಲ್ಕನೇ ಮಹಡಿಯಿಂದ ನೇರವಾಗಿ ತೆರೆದ ಕಬ್ಬಿಣದ ಸಲಾಕೆಯ ಮೇಲೆ ಬಿದ್ದಿದ್ದರು. ಈ ವೇಳೆ ಒಂದು ಸಲಾಕೆ ಅವರ ಎದೆಯ ಎಡ ಭಾಗದಿಂದ ಹೊಕ್ಕಿ ಹೊಟ್ಟೆಯ ಬಲಭಾಗದಿಂದ ಹೊರಬಂದಿತ್ತು. ಇನ್ನೆರಡು ಸಲಾಕೆಗಳು ಬಲ ತೊಡೆಯನ್ನು ಸೀಳಿದ್ದವು. ಇಂತಹ ಅಪಾಯದ ಸ್ಥಿತಿಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಬ್ಬಾಳದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಯಿತು.
ಆಸ್ಪತ್ರೆಗೆ ದಾಖಲಾದ ವೇಳೆ ಪವನ್ ಪ್ರಜ್ಞಾಹೀನಸ್ಥಿತಿಯಲ್ಲಿದ್ದರು. ಘಟನೆಯಿಂದ ತೀವ್ರ ರಕ್ತಸ್ರಾವ ಆಗಿತ್ತು. ಪರಿಸ್ಥಿತಿ ಗಮನಿಸಿದ ತುರ್ತು ಚಿಕಿತ್ಸಾ ತಜ್ಞರ ತಂಡವು ಕಾರ್ಯಪ್ರವೃತ್ತವಾಯಿತು. ಕೂಡಲೇ ಹೃದಯವನ್ನು ಬೆಂಬಲಿಸಲು ದ್ರವಗಳು, ರಕ್ತ ವರ್ಗಾವಣೆ ಮತ್ತು ಔಷಧಿಗಳನ್ನು ಪ್ರಾರಂಭಿಸುವ ಮೂಲಕ ರೋಗಿಯ ಆರೋಗ್ಯ ಸ್ಥಿತಿಯನ್ನು ಸ್ಥಿರಗೊಳಿಸಲಾಯಿತು ಎಂದು ಆಸ್ಪತ್ರೆಯ ಕ್ರಿಟಿಕಲ್ ಕೇರ್ ಸಲಹೆಗಾರ ಡಾ. ರಾಜೇಂದ್ರ ಕುಮಾರ್ ವಿವರಿಸಿದರು.
ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ತಜ್ಞರ ತಂಡ ಬಹಳ ತುರ್ತಾಗಿ ಕಾರ್ಯಪ್ರವೃತ್ತವಾಯಿತು. ಪವನ್ ಎದೆ ಹೊಕ್ಕಿದ್ದ ಸಲಾಕೆ ಹೃದಯಕ್ಕೆ ಕೇವಲ ಅರ್ಧ ಸೆಂಟಿಮೀಟರ್ ದೂರವಿತ್ತು. ಹಾಗಾಗಿ ಚಿಕಿತ್ಸೆ ವೇಳೆ ಹೃದಯವನ್ನು ಜರುಗಿಸಿ ಚಿಕಿತ್ಸೆ ನಡೆಸಲಾಯಿತು. ಈ ವೇಳೆ ಚಲನೆಯಲ್ಲಿ ಒಂದಿಷ್ಟು ವ್ಯತ್ಯಾಸವಾಗಿದ್ದರೂ ರೋಗಿಯ ಪ್ರಾಣಕ್ಕೆ ಅಪಾಯ ಎದುರಾಗುತ್ತಿತ್ತು. ಅಷ್ಟೂ ಸೂಕ್ಷ್ಮ ಹಾಗೂ ಸಂಕೀರ್ಣ ಚಿಕಿತ್ಸೆಯಾಗಿತ್ತು. ಈ ವೇಳೆ ಜತೆಯಲ್ಲಿದ್ದ ಮೂಳೆ ಶಸಚಿಕಿತ್ಸಕರು ರಾಡ್ ಅನ್ನು ದೇಹದಿಂದ ಸುರಕ್ಷಿತವಾಗಿ ಬೇರ್ಪಡಿಸಿದರು. ಈ ಘಟನೆಯಲ್ಲಿ ಅವರ ಬಲ ಮೂತ್ರಪಿಂಡಕ್ಕೆ ಹಾನಿಯಾಗಿತ್ತು. ಅನೇಕ ಆಂತರಿಕ ಗಾಯಗಳನ್ನು ತಂಡ ಪತ್ತೆ ಹಚ್ಚಿ ಅವುಗಳ ನಿರ್ವಹಣೆ ಮಾಡುತ್ತದೆ ಶಸಚಿಕಿತ್ಸೆ ನಡೆಯಲಾಯಿತು ಎಂದು ಡಾ. ಭಾರತಿ ಭಟ್ ಶಸಚಿಕಿತ್ಸೆಯ ಮಾಹಿತಿ ನೀಡಿದರು.