

ಬೆಂಗಳೂರು: ಸ್ವಾತಂತ್ರ್ಯೋತ್ಸವ ದಿನಾಚರಣೆಗೆ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪೆರೇಡ್ ಮೈದಾನ ಸನ್ನದ್ಧವಾಗಿದೆ.
ಮಂಗಳವಾರ (ಆ.15) ಬೆಳಗ್ಗೆ 9 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಧ್ವಜಾರೋಹಣ ನೆರವೇರಿಸಲಿದ್ದಾರೆ. ಕೆಎಸ್‌ಆರ್‌ಪಿ, ಸಿಎಆರ್, ಟ್ರಾಫಿಕ್ ಪೊಲೀಸ್, ಮಹಿಳಾ ಪೊಲೀಸ್, ಹೋಂ ಗಾರ್ಡ್ಸ್, ಟ್ರಾಫಿಕ್ ವಾರ್ಡನ್, ಅಗ್ನಿಶಾಮಕ ದಳ ಸಿಬ್ಬಂದಿ, ಡಾಗ್ ಸ್ಕ್ವಾಡ್ ಮತ್ತು ಬ್ಯಾಂಡ್‌ನ ಒಟ್ಟು 38 ತುಕಡಿಗಳಿಂದ ಅಂದಾಜು 1,350 ಮಂದಿ ಭಾಗಿಯಾಗಲಿದ್ದಾರೆ.
ಮೈದಾನದಲ್ಲಿ ಶಾಮಿಯಾನ, ವೇದಿಕೆ ನಿರ್ಮಾಣ, ಬ್ಯಾರಿಕೇಡ್ ಸೇರಿ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಧ್ವಜಾರೋಹಣಕ್ಕಾಗಿ ಧ್ವಜಸ್ಥಂಭ ನಿರ್ಮಿಸಲಾಗಿದೆ. ಭಾರತೀಯ ರಕ್ಷಣಾಸೇನೆಯ ಮೂವರು ಹಿರಿಯ ಅಧಿಕಾರಿಗಳನ್ನು ಸಿಎಂಗೆ ಪರಿಚಯಿಸುವ ಪ್ರಕ್ರಿಯೆ ನಡೆಯಲಿದೆ. ಧ್ವಜಾರೋಹಣ ನಂತರ ಸಿದ್ದರಾಮಯ್ಯ ತೆರೆದ ಜೀಪಿನಲ್ಲಿ ಪರೇಡ್ ಪರಿವೀಕ್ಷಣೆ ಮತ್ತು ಗೌರವ ರಕ್ಷೆ ಸ್ವೀಕಾರ ಮಾಡಲಿದ್ದಾರೆ. ನಂತರ ನಾಡಿನ ಜನತೆಗೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು .
ಸ್ವಾತಂತ್ರ್ಯ ದಿನ ಕಾರ್ಯಕ್ರಮ ವೀಕ್ಷಿಸಲು ಆಗಮಿಸುವ ಅತಿಗಣ್ಯ, ಗಣ್ಯ, ಆಹ್ವಾನಿತರಿಗೆ, ಸಾರ್ವಜನಿಕರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿದೆ. ಸಮಾರಂಭಕ್ಕೆ ಆಗಮಿಸುವವರು ಬೆಳಗ್ಗೆ 8.30ರೊಳಗೆ ಆಸನಗಳಲ್ಲಿ ಕುಳಿತುಕೊಳ್ಳಬೇಕು. ಮಣಿಪಾಲ್ ಸೆಂಟರ್ ಕಡೆಯಿಂದ ಕಬ್ಬನ್ ರಸ್ತೆ ಮೂಲಕ ಗೇಟ್ ನಂ.4ರ ದ್ವಾರದ ಮೂಲಕ ಸಾರ್ವಜನಿಕರು ಪ್ರವೇಶಿಸಬೇಕು ಎಂದು ಮುಖ್ಯ ಆಯುಕ್ತರು ವಿವರಿಸಿದರು. ನಗರ ಜಿಲ್ಲಾಧಿಕಾರಿ ದಯಾನಂದ ಸೇರಿ ಮತ್ತಿತರರಿದ್ದರು.
ಮೈದಾನಕ್ಕೆ ಬಿಗಿ ಬಂದೋಬಸ್ತ್: ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಮೈದಾನ ಸುತ್ತಮುತ್ತ ಬಿಗಿಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ನಗರ ಪೋಲಿಸ್ ಆಯುಕ್ತ ಬಿ. ದಯಾನಂದ ತಿಳಿಸಿದರು. 9 ಡಿಸಿಪಿ, 15 ಎಸಿಪಿ, 43 ಪೊಲೀಸ್ ಇನ್‌ಸ್ಪೆಕ್ಟರ್, 180 ಪಿಎಸ್‌ಐ, 554 ಪೇದೆ, 77 ಮಹಿಳಾ ಪೊಲೀಸ್, 157 ಸಾದಾ ಉಡುಪು ತೊಟ್ಟಿರುವ ಅಧಿಕಾರಿ ಮತ್ತು ಸಿಬ್ಬಂದಿ, 56 ಕ್ಯಾಮರಾ ಸಿಬ್ಬಂದಿ ನಿಯೋಜಿಸಲಾಗಿದೆ ಎಂದರು. ಸಂಚಾರ ನಿರ್ವಹಣೆಕ್ಕಾಗಿ ಮೂವರು ಡಿಸಿಪಿ, ಆರು ಎಸಿಪಿ, 22 ಪೊಲೀಸ್ ಇನ್‌ಸ್ಪೆಕ್ಟರ್, 31 ಪಿಎಸ್‌ಐ, 124 ಎಎಸ್‌ಐ, 507 ಕಾನ್‌ಸ್ಟೆಬಲ್ ಸೇರಿ ಒಟ್ಟು 1,786 ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಮೈದಾನದ ಬಂದೋಬಸ್ತ್‌ಗೆ 10 ಕೆಎಸ್‌ಆರ್‌ಪಿ/ಸಿಎಆರ್ ತುಕಡಿ, ಎರಡು ಅಗ್ನಿಶಾಮಕ ವಾಹನಗಳು, ಆಂಬುಲೆನ್ಸ್, ಕ್ಷಿಪ್ರ ಕಾರ್ಯಾಚರಣೆ, ಗರುಡ ಪೋರ್ಸ್‌ಗಳಿವೆ. ಮೈದಾನ ಸುತ್ತಮುತ್ತ ಎಲ್ಲ ಘಟನೆಗಳನ್ನು ಸೂಕ್ಷ್ಮವಾಗಿ ನಿಗಾವಹಿಸಲು 100 ಸಿಸಿ ಕ್ಯಾಮರಾ, 3 ಬ್ಯಾಗೇಜ್ ಸ್ಕಾೃನರ್, 20 ಡಿಎ್ಎಂಡಿ, 40 ಎಚ್‌ಎಚ್‌ಎಂಡಿಗಳನ್ನು ಅಳವಡಿಸಲಾಗಿದೆ ಎಂದು ವಿವರಿಸಿದರು.
ವಾಹನ ನಿಲುಗಡೆ ವಿವರ: ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ವೀಕ್ಷಿಸಲು ಆಗಮಿಸುವವರಿಗೆ ನಿಗದಿತ ಸ್ಥಳಗಳಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಕಾರು ಪಾಸ್ ಹೊಂದಿರುವ ಎಲ್ಲ ಆಹ್ವಾನಿತರು ಪಾಸ್‌ಗಳಲ್ಲಿ ನಿಗದಪಡಿಸಿದ ಗೇಟ್‌ಗಳಲ್ಲಿ ಇಳಿದುಕೊಳ್ಳಬೇಕು. ಪಾಸ್‌ನಲ್ಲಿ ನಮೂದಿಸಿರುವ ಸ್ಥಳಗಳಲ್ಲಿ ವಾಹನಗಳ ನಿಲುಗಡೆ ಮಾಡಬೇಕು. ತುರ್ತು ಸೇವಾ ವಾಹನಗಳಾದ ಆಂಬುಲೆನ್ಸ್, ಅಗ್ನಿಶಾಮಕ ದಳ ವಾಹನಗಳು, ನೀರಿನ ಟ್ಯಾಂಕರ್, ಕೆಎಸ್‌ಆರ್‌ಪಿ, ಕ್ಯೂಆರ್‌ಟಿ, ಬಿಬಿಎಂಪಿ, ಹಾಗೂ ಲೋಕೋಪಯೋಗಿ ವಾಹನಗಳು ಪ್ರವೇಶ ದ್ವಾರ-2 ಮುಖೇನಾ ಪರೇಟ್ ಮೈದಾನದ ಒಳಗೆ ಪ್ರವೇಶಿಸಿದ ನಂತರ, ಪೋರ್ಟ್ ವಾಲ್ ಹಿಂಭಾಗದಲ್ಲಿ ವಾಹನಗಳನ್ನು ನಿಲ್ಲಿಸಬೇಕು. ಮಾಧ್ಯಮದವರ ವಾಹನಗಳು ಪ್ರವೇಶ ದ್ವಾರ-3ರ ಮೂಲಕ ಒಳಪ್ರವೇಶಿಸಿ ಮೈದಾನದ ಪೂರ್ವ ಭಾಗದಲ್ಲಿ ನಿಗದಿಪಡಿಸಿದ ಸ್ಥಳಗಳನ್ನು ನಿಲ್ಲಿಸಬೇಕು.
ಕೆಲ ವಸ್ತುಗಳಿಗೆ ನಿಷೇಧ:
* ಭದ್ರತಾ ದೃಷ್ಟಿಯಿಂದ ಕಾರ್ಯಕ್ರಮಕ್ಕೆ ಬರುವ ಆಹ್ವಾನಿತರು, ಸಾರ್ವಜನಿಕರು ಮೊಬೈಲ್, ಹೆಲ್ಮೆಟ್, ಕ್ಯಾಮರಾ, ರೇಡಿಯೋ, ಛತ್ರಿ ತೆಗೆದುಕೊಂಡು ಹೋಗುವಂತಿಲ್ಲ
* ಬೆಳಗ್ಗೆ 8 ಗಂಟೆಯೊಳಗೆ ಮೈದಾನದಲ್ಲಿ ಆಸೀನರಾಗಬೇಕು
* ಕವಾಯತು ವೀಕ್ಷಣೆಗೆ ಆಗಮಿಸುವವರು ಸೆಲ್ಫಿ ಸೇರಿ ಮುಂತಾದ ಮೊಬೈಲ್ ಬಳಕೆಗೆ ನಿರ್ಬಂಧ
* ಸಿಗರೇಟ್, ಬೆಂಕಿ ಪೊಟ್ಟಣ, ಬಣ್ಣದ ದ್ರಾವಣಗಳು, ವಿಡಿಯೋ ಮತ್ತು ಸ್ಟಿಲ್ ಕ್ಯಾಮರಾಗಳು, ನೀರಿನ ಬಾಟಲ್, ಕ್ಯಾನ್, ಶಸಾಸ್ತಗಳು, ಹರಿತವಾದ ವಸ್ತು, ಚಾಕು, ಚೂರಿ, ಕಪ್ಪು ಕರವಸ, ತಿಂಡಿ, ತಿನಿಸು, ಮದ್ಯದ ಬಾಟಲ್, ಮಾದಕ ವಸ್ತು, ಪಟಾಕಿ, ಸ್ಫೋಟಕ ವಸ್ತುಗಳು.
* ಪೋಲಿಸರ ಸಹಾಯಕ್ಕಾಗಿ ಸಾರ್ವಜನಿಕರು 112ಕ್ಕೆ ಕರೆ ಮಾಡಬಹುದು
ಎಲ್ಲೆಲ್ಲಿ ವಾಹನ ನಿಲುಗಡೆ ನಿಷೇಧ?
* ಸೆಂಟ್ರಲ್ ಸ್ಟ್ರೀಟ್, ಅನಿಲ್ ಕುಂಬ್ಳೆ ವೃತ್ತದಿಂದ ಶಿವಾಜಿನಗರ ಬಸ್ ನಿಲ್ದಾಣದವರೆಗೆ
* ಕಬ್ಬನ್ ರಸ್ತೆ ಸಿಟಿಒ ವೃತ್ತದಿಂದ ಕೆ.ಆರ್. ರಸ್ತೆ ಮತ್ತು ಕಬ್ಬನ್ ರಸ್ತೆ ಜಂಕ್ಷನ್‌ವರೆಗೆ
* ಎಂ.ಜಿ. ರಸ್ತೆ, ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತ