

ಪುತ್ತೂರು ಗ್ರಾಮಾಂತರ: ಒಳಮೊಗ್ರು ಗ್ರಾಮದ ಕುಂಬ್ರ ಸೇತುವೆಯ ಸಮೀಪ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿದ್ದ ಎರಡು ಮರಗಳನ್ನು ಅರಣ್ಯ ಇಲಾಖೆಯವರು ಒಳಮೊಗ್ರು ಗ್ರಾಮ ಪಂಚಾಯಿತಿ ಮತ್ತು ಮೆಸ್ಕಾಂ ಇಲಾಖೆಯ ಸಹಕಾರದೊಂದಿಗೆ ತೆರವುಗೊಳಿಸಿದ್ದಾರೆ.
ಒಳಮೊಗ್ರು ಗ್ರಾಮ ಪಂಚಾಯಿತಿ ಅಧ್ಯಕ್ಷ ತ್ರಿವೇಣಿ ಪಲ್ಲತ್ತಾರು, ಸದಸ್ಯ ವಿನೋದ್ ಶೆಟ್ಟಿ ಮುಡಾಲ, ಕಾರ್ಯದರ್ಶಿ ಜಯಂತಿ, ಪಾಣಾಜೆ ಉಪವಲಯದ ಅರಣ್ಯಾಧಿಕಾರಿ ಮದನ್ ಬಿ.ಕೆ, ಕುಂಬ್ರ ಮೆಸ್ಕಾಂ ಇಲಾಖೆಯ ಜೂನಿಯರ್ ಇಂಜಿನಿಯರ್ ರವೀಂದ್ರ ಅವರ ಉಪಸ್ಥಿತಿಯಲ್ಲಿ ಅಪಾಯಕಾರಿ ಮರಗಳ ತೆರವು ಕಾರ್ಯಾಚರಣೆ ನಡೆಯಿತು. ಪಂಚಾಯಿತಿ ವತಿಯಿಂದ ಜೆಸಿಬಿ ಮೂಲಕ ಮರದ ಗೆಲ್ಲುಗಳನ್ನು ರಸ್ತೆ ಬದಿಗೆ ಸರಿಸಿ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಡಲಾಯಿತು.
ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರಗಳ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಅದರಂತೆ ಅರಣ್ಯ ಇಲಾಖೆಯವರು ಮೆಸ್ಕಾಂ ಇಲಾಖೆ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಮರಗಳ ತೆರವು ಮಾಡಿದ್ದಾರೆ ಎಂದು ತಿಳಿಸಿರುವ ಒಳಮೊಗ್ರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಗ್ರಾಮದಲ್ಲಿ ಯಾವುದೇ ಅಪಾಯಕಾರಿ ಮರ ಅಥವಾ ಜಾಗ, ನದಿ ಇತ್ಯಾದಿಗಳಿದ್ದರೆ ಪಂಚಾಯಿತಿಗೆ ಮಾಹಿತಿ ನೀಡುವಂತೆ ವಿನಂತಿಕೊಂಡಿದ್ದಾರೆ.