ಆನ್‌ಲೈನ್ ಟ್ರೇಡಿಂಗ್ ಹೆಸರಲ್ಲಿ ವಂಚನೆ

Mul_Fraud
Published on

ಮೂಲ್ಕಿ: ಎಂಆರ್‌ಪಿಎಲ್‌ನಲ್ಲಿ ಸಿವಿಲ್ ಇಂಜಿನಿಯರ್ ಆಗಿರುವ ನರೇಶ್ ಎಂಬುವರಿಗೆ ಅಪರಿಚಿತನೋರ್ವ ವಾಟ್ಸ್ಯಾಪ್ ನಂಬರ್ 8791127997 ಮತ್ತು 8428750729ನಿಂದ ಸಂದೇಶ ಕಳುಹಿಸಿ KuCoin-sethchain ಎಂಬ ಆನ್‌ಲೈನ್ ಟ್ರೇಡಿಂಗ್ ಬಗ್ಗೆ ತಿಳಿಸಿ ನಂತರ ಹಣ ಹೂಡಿಕೆ ಮಾಡಿ KuCoin ಮೂಲಕ (USDT) ಅಮೆರಿಕನ್ ಡಾಲರ್ ಅನ್ನು ಖರೀದಿಸಿ ಪುನಃ ಕಂಪನಿಯವರಿಗೆ ನೀಡಿದರೆ ಕಂಪನಿಯವರು ಲಾಭ ನೀಡುವುದಾಗಿ ತಿಳಿಸಿದ್ದ.

ಇದನ್ನು ನಂಬಿದ ಅವರು ದಿನಾಂಕ 04-06-2024 ರಿಂದ 13-06-2024 ರವರೆಗೆ ಹಂತ ಹಂತವಾಗಿ 6,80,875 ರೂ. ಮತ್ತು 35,000 ರೂ. ಅನ್ನು ಅವರ ಇಂಡಿಯನ್ ಓವರ್ ಸೀಸ್ ಬ್ಯಾಂಕಿನ ಖಾತೆಯಿಂದ ಪಾವತಿಸಿದ್ದರು. ಅಲ್ಲದೇ ತಾಯಿಯ ಕೆನರಾ ಬ್ಯಾಂಕ್ ಖಾತೆ ಸಂಖ್ಯೆಯಿಂದ 1,94,500 ರೂ. ಸೇರಿದಂತೆ ಒಟ್ಟು 9,10,375 ರೂಪಾಯಿಗಳನ್ನು Kucoin wallet Adressನಿಂದ ಪಾವತಿಸಿದ್ದಾರೆ. ನಂತರ ಲಾಭದ ಹಣ ವಾಪಾಸ್ ನೀಡುವಂತೆ ಅಪರಿಚಿತನ ಬಳಿ ಕೇಳಿದಾಗ ಇನ್ನೂ ಹೆಚ್ಚಿನ ಹಣ ನೀಡುವಂತೆ ಒತ್ತಾಯಿಸಿದ್ದಾನೆ.

ಇದರಿಂದ ಅನುಮಾನಗೊಂಡು ವಿಚಾರಿಸಿದಾಗ ಆರೋಪಿ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಮೂಲ್ಕಿ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net