

ಹೆಚ್ಚಿನ ಪರಿಹಾರಕ್ಕೆ ಜಿಲ್ಲಾಢಳಿತದಿಂದ ವರದಿ
* ಹವಾಮಾನ ವೈಪರೀತ್ಯದಿಂದ ಕಹಿಯಾದ ಮಾವು
ಗಂಗಾಧರ್ ಬೈರಾಪಟ್ಟಣ ರಾಮನಗರ
ಕಳೆದ ಹಲವು ವರ್ಷಗಳ ಹಿಂದೆ ರೈತರ ಬದುಕಿಗೆ ಸಿಹಿಯಾಗಿದ್ದ ಮಾವು ಬೆಳೆ ಈಗ ಕೆಲವು ವರ್ಷಗಳಿಂದ ಹವಾಮಾನ ವೈಪರೀತ್ಯದಿಂದಾಗಿ ಕಹಿಯಾಗುತ್ತಿದೆ. ಈ ಬಾರಿ ಉಂಟಾಗಿರುವ ನಷ್ಟಕ್ಕೆ ಜಿಲ್ಲಾಡಳಿತದಿಂದಲೇ ಹೆಚ್ಚಿನ ಪರಿಹಾರ ಕೊಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ರಾಜ್ಯದಲ್ಲಿ ಪ್ರಥಮವಾಗಿ ಮಾರುಕಟ್ಟೆ ಪ್ರವೇಶ ಮಾಡುವ ಹೆಗ್ಗಳಿಕೆ ರಾಮನಗರ ಮಾವಿಗೆ ಇದೆ. ಆದರೆ, ಕಳೆದ ವರ್ಷ ಬಿಸಿಲ ಬೇಗೆಗೆ ಇಳುವರಿ ಕುಂಠಿತಗೊಂಡು ನಷ್ಟ ಅನು‘ವಿಸಿದ್ದ ಜಿಲ್ಲೆಯ ರೈತರಿಗೆ ಈ ಬಾರಿ ಹವಾಮಾನ ವೈಪರೀತ್ಯದಿಂದಾಗಿ ಸಲು ವಿಳಂಬ ಹಾಗು ರೋಗಗಳು ಕಾಡಿದ ಪರಿಣಾಮ ತೀವ್ರ ನಷ್ಟ ಉಂಟಾಗಿದೆ.
ಜಿಲ್ಲೆಯಲ್ಲಿ ಸುಮಾರು 70 ಸಾವಿರ ಎಕರೆ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಪ್ರಮುಖವಾಗಿ ಬಾದಾಮಿ, ಸೆಂಧೂರಾ, ತೋತಾಪುರಿ ಮತ್ತು ರಸಪೂರಿ ಮಾವಿನ ಹಣ್ಣುಗಳು ಬಹುತೇಕ ಮಾರ್ಚ್ ಮೊದಲ ವಾರದಲ್ಲಿ ಮಾರುಕಟ್ಟೆ ಪ್ರವೇಶಿಸುತ್ತವೆ. ಹೆಚ್ಚಿನ ಪ್ರಮಾಣದ ಮಾವು ಪಲ್ಪ್ ಉತ್ಪಾದನೆಗೆ ಬಳಕೆಯಾದರೆ ಉಳಿದ ಭಾಗ ಮಾರುಕಟ್ಟೆಗೆ ಪ್ರವೇಶ ಮಾಡಿ ಗ್ರಾಹಕರ ಬಾಯಿಯನ್ನು ಸಿಹಿಗೊಳಿಸುತ್ತದೆ. ಜಿಲ್ಲೆಯಲ್ಲಿ ಪ್ರತಿವರ್ಷ ಸರಾಸರಿ 2.5 ಲಕ್ಷ ಟನ್ ಮಾವು ಉತ್ಪಾದನೆ ಅಂದಾಜಿಸಲಾಗುತ್ತದೆ.
ಆದರೂ ಈ ಬಾರಿ ವಾತಾವರಣದ ಕಣ್ಣಾಮುಚ್ಚಾಲೆಯಿಂದಾಗಿ ಎರಡು ಬಾರಿ ಫಲ ಬಿಟ್ಟಿರುವುದು ಹಾಗೂ ಜೋನಿ ಕಾಟ ಸೇರಿ ಇತರ ಕಾರಣಗಳಿಗೆ ತೀವ್ರ ಕಷ್ಟ ಉಂಟಾಗಿದೆ. ಈ ಬಾರಿ ಲಭ್ಯ ಮಾಹಿತಿ ಪ್ರಕಾರ ರಾಮನಗರ - ಚನ್ನಪಟ್ಟಣ ಮಾವು ಮಾರುಕಟ್ಟೆಗೆ ವಿವಿಧ ತಳಿಯ 125-130 ಟನ್ ಮಾತ್ರ ಬಂದಿದೆ ಎನ್ನಲಾಗಿದೆ.
ರಾಮನಗರ ಜಿಲ್ಲೆಯಲ್ಲಿ ವಿವಿಧ ತಳಿಗಳ ಮಾವು ಬೆಳೆಯಲಾಗುತ್ತದೆಯಾದರೂ ಬಾದಾಮಿ ತಳಿ ಹೆಚ್ಚಿನ ಪ್ರದೇಶವನ್ನು ವ್ಯಾಪಿಸಿದೆ. ಈ ಹಣ್ಣಿನ ತಿರುಳು ಹೆಚ್ಚಿರುವ ಕಾರಣ ಹೊರ ರಾಜ್ಯದ ಪಲ್ಪ್ ತಯಾರಿಕೆ ಕಂಪನಿಗಳು ಮುಗಿಬಿದ್ದು, ಇಲ್ಲಿ ಮಾವು ಖರೀದಿ ಮಾಡುತ್ತವೆ. ಸಾಮಾನ್ಯವಾಗಿ ಪ್ರತಿವರ್ಷ ಉತ್ಪಾದನೆಯಾಗುವ ಮಾವಿನ ಹೆಚ್ಚಿನ ಪ್ರಮಾಣವನ್ನು ಕೇರಳ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ ಹಾಗೂ ಉತ್ತರ ಭಾರತದಿಂದಲೂ ವ್ಯಾಪಾರಿಗಳು ರಾಮನಗರದಿಂದಲೇ ಖರೀದಿ ಮಾಡುತ್ತಿದ್ದರು. ಆದರೆ, ಈ ಬಾರಿ ಇದರ ಪ್ರಮಾಣ ತೀವ್ರವಾಗಿ ಕುಸಿದಿದೆ.
ಇದಕ್ಕೆ ಕಳೆದ ವರ್ಷದ ಪಲ್ಪ್ ಇನ್ನೂ ಕಂಪನಿಗಳ ಬಳಿಯೇ ಉಳಿದಿವೆ ಎನ್ನುವ ಉತ್ತರ ಬರುತ್ತಿದೆ. ಆದರೂ, ಈ ಬಾರಿಯ ಮಾವಿಗೆ ಜೋನಿ ಕಾಟ ಹೆಚ್ಚಾಗಿ ಗುಣಮಟ್ಟ ಕಳೆದುಕೊಂಡ ಹಿನ್ನೆಲೆಯಲ್ಲಿ ಖರೀದಿಗೆ ವ್ಯಾಪಾರಿಗಳು ಆಸಕ್ತಿ ತೋರಲಿಲ್ಲ ಎನ್ನಲಾಗಿದೆ.
ಮತ್ತೊಂದೆಡೆ ಆಂಧ್ರದ ಚಿತ್ತೂರು ಜಿಲ್ಲೆಯಲ್ಲಿರುವ ಮಾವು ಸಂಸ್ಕರಣಾ ಘಟಕಕ್ಕೆ ರಾಜ್ಯದ ಮಾವನ್ನು ನಿಷೇಧ ಮಾಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯಿಂದಲೂ ರವಾನೆ ಆಗಬೇಕಿದ್ದ ತೋತಾಪುರಿ ಮಾವು ಮರದಲ್ಲೇ ಕೊಳೆಯುವಂತಾಗಿದೆ. ಜತೆಗೆ ಸೆಂಧೂರವನ್ನೂ ಮಾರುಕಟ್ಟೆಗೆ ತರಲೇಬೇಡಿ ಎನ್ನುವ ವ್ಯಾಪಾರಿಗಳ ನಿರ್ದೇಶನದಿಂದ ರೈತರು ಹಣ್ಣುಗಳನ್ನು ಮರದಲ್ಲಿಯೇ ಬಿಟ್ಟಿದ್ದಾರೆ. ಕೀಳಲು ಮುಂದಾದರೆ ಕೈಸುಟ್ಟುಕೊಳ್ಳಬೇಕು ಎನ್ನುವ ಆತಂಕದಿಂದ ಹಣ್ಣುಗಳು ಮರದಲ್ಲಿಯೇ ಕೊಳೆಯುತ್ತಿವೆ.
ರಾಮನಗರ ಮಾತ್ರವಲ್ಲದೇ ರಾಜ್ಯದ ಬಹುತೇಕ ಮಾವು ಬೆಳೆಯುವ ಜಿಲ್ಲೆಗಳ ರೈತರ ಪರಿಸ್ಥಿತಿಯೂ ಒಂದೇ ಆಗಿರುವ ಕಾರಣ ಸರ್ಕಾರ ಬೆಂಬಲ ಬೆಲೆ ನೀಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಿಂದಲೂ ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ಅಂದಾಜು ಪಟ್ಟಿಯನ್ನು ಮಾರುಕಟ್ಟೆಗೆ ಬಂದ ಆವಕದ ಮೇಲೆ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಿದೆ. ಜಿಲ್ಲೆಯ ರಾಮನಗರ, ಚನ್ನಪಟ್ಟಣ ಮತ್ತು ಕನಕಪುರ ಹಾಗೂ ಖಾಸಗಿಯಾಗಿ ಮಾರುಕಟ್ಟೆಗೆ ಬಂದ ಒಟ್ಟು 25 ಸಾವಿರ ಟನ್ ಮಾವಿಗೆ ಪ್ರತಿಟನ್‌ಗೆ 2500 ರೂ.ನಂತೆ ಒಟ್ಟು 6.03 ಕೋಟಿ ರೂ. ನೀಡುವಂತೆ ಕೋರಿದೆ.
ಜಿಲ್ಲಾಡಳಿತ ಮಾರುಕಟ್ಟೆಗೆ ಆವಕವಾಗಿರುವ ಮಾವಿನ ಪ್ರಮಾಣದ ಮೇಲೆ ಪ್ರತಿಟನ್‌ಗೆ 2500 ರೂ. ಬೆಂಬಲ ಬೆಲೆ ನೀಡಲು ವರದಿ ನೀಡಿದ್ದರೆ. ರೈತರ ಆಗ್ರಹವೇ ಬೇರೆ ಇದೆ. ಕೇವಲ ಮಾರುಕಟ್ಟೆಗೆ ಬಂದ ಮಾವಿಗೆ ಪರಿಹಾರ ನೀಡಿದರೆ ಎಲ್ಲ ರೈತರ ನಷ್ಟ ಭರಿಸಿದಂತೆ ಆಗುವುದಿಲ್ಲ. ಬದಲಿಗೆ ಪ್ರತಿ ಹೆಕ್ಟೇರ್‌ಗೆ 45 ಸಾವಿರ ರೂ. ಪರಿಹಾರ ನೀಡಬೇಕು. ಇದರಿಂದ ನಷ್ಟದ ಕನಿಷ್ಠ ಪ್ರಮಾಣವನ್ನು ಭರಿಸಿದಂತೆ ಆಗುತ್ತದೆ ಎನ್ನುವ ವಾದವನ್ನು ಬೆಳೆಗಾರರು ಸರ್ಕಾರದ ಮುಂದೆ ಇಟ್ಟಿದ್ದಾರೆ.
ಈ ಬಾರಿ ಹವಾಮಾನ ವೈಪರೀತ್ಯದಿಂದ ಮಾವು ಇಳುವರಿಯಲ್ಲಿ ಕುಂಠಿತವಾಗಿದೆ. ಲಭ್ಯವಿರುವ ಎಲ್ಲ ಮಾರ್ಗಗಳ ಮೂಲಕವೂ ರೈತರ ನೆರವಿಗೆ ಧಾವಿಸುವ ಕೆಲಸವನ್ನು ತೋಟಗಾರಿಕೆ ಇಲಾಖೆ ಮಾಡುತ್ತಿದ್ದು, ಬೆಂಬಲ ನೀಡುವ ಸಂಬಂ‘ ವರದಿ ನೀಡಲಾಗಿದೆ. ರಾಜು, ಉಪನಿರ್ದೇಶಕ, ತೋಟಗಾರಿಕೆ ಇಲಾಖೆಸಾಮಾನ್ಯವಾಗಿ ಹೊರ ರಾಜ್ಯದ ಖರೀದಿದಾರರು ರಾಮನಗರದ ಮಾವನ್ನು ಹೆಚ್ಚು ಖರೀದಿಸುತ್ತಿದ್ದರು. ಆದರೆ, ಈ ಬಾರಿ ಖರೀದಿಗೆ ಆಸಕ್ತಿ ತೋರಲಿಲ್ಲ. ಆವಕವೂ ತೀವ್ರ ಪ್ರಮಾಣದಲ್ಲಿ ಕುಸಿದಿದೆ. ಜೋನಿ ರೋಗವೂ ಇದಕ್ಕೆ ಕಾರಣ ಎನ್ನಲಾಗುತ್ತಿದೆ.ಸುನಿಲ್ ಕುಮಾರ್, ಕಾರ್ಯದರ್ಶಿ, ಎಪಿಎಂಸಿ, ರಾಮನಗರಪ್ರತಿ ಟನ್‌ಗೆ 2500 ರೂ. ನೀಡುವುದು ಕೇವಲ ಮಾರುಕಟ್ಟೆಗೆ ಬಂದ ಬೆಳೆಗಾರರಿಗೆ ಲಭ್ಯವಾಗುತ್ತದೆ. ಆದರೆ, ಎಷ್ಟೋ ರೈತರು ತಮ್ಮದೇ ಪ್ರತ್ಯೇಕ ಮಾರುಕಟ್ಟೆ ಸೃಷ್ಟಿ ಮಾಡಿಕೊಂಡಿದ್ದಾರೆ. ಆದರೆ, ರೋಗ, ಹವಾಮಾನ ವೈಪರೀತ್ಯ ಕಾರಣಕ್ಕೆ ಇಳುವರಿ ಪ್ರಮಾಣ ಶೇ.95 ಕುಸಿದಿರುವ ಕಾರಣ ಪ್ರತಿ ಹೆಕ್ಟೇರ್‌ಗೆ 45 ಸಾವಿರ ರೂ. ಪರಿಹಾರ ನೀಡಲೇಬೇಕು.ಧರಣೇಶ್ ರಾಂಪುರ, ಅಧ್ಯಕ್ಷ, ಮಾವು ಮತ್ತು ತೋಟದ ಬೆಳೆಗಾರರ ಸಂಘ ==
ಬೆಂಬಲ ಬೆಲೆಗೆ ಸಿದ್ಧಗೊಂಡ ಅಂಕಿ ಅಂಶ
ಎಪಿಎಂಸಿ ಆವಕ(ಟನ್) ಬೆಂಬಲ ಬೆಲೆ ಒಟ್ಟು ಮೊತ್ತ (ಲಕ್ಷಗಳಲ್ಲಿ)
ರಾಮನಗರ 4961.40 2500 124.04
ಚನ್ನಪಟ್ಟಣ 9097.10 2500 227.42
ಕನಕಪುರ 36.20 2500 0.96
ಇತರ 10000.00 2500 250.00
ಒಟ್ಟು 24094.70 2500 602.36