

ಚಿಂತಾಮಣಿ :ತಾಲೂಕಿನ ಮಾವು ಮತ್ತು ನೇರಳೆ ಬೆಳೆಗಳಿಗೆ ಕಾಂಡ ಕೊರಕ ಸಮಸ್ಯೆ ಉಲ್ಬಣಗೊಂಡಿರುವುದು ರೈತರನ್ನು ಸಂಕಷ್ಟಕ್ಕೆ ದೂಡಿದೆ.
ಈ ಬೆನ್ನೆಲ್ಲೆ ಎಚ್ಚೆತ್ತಿರುವ ಚಿಂತಾಮಣಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ವಿವಿಧ ತಾಕುಗಳಿಗೆ ಭೇಟಿ ನೀಡಿ, ಸಮಸ್ಯೆ ನಿವಾರಣೆಗೆ ಪರಿಹಾರ ಕ್ರಮಕ್ಕೆ ಮುಂದಾಗಿದ್ದಾರೆ.
ಕಾಂಡ ಕೊರಕದ ಲಕ್ಷಣ ಕಂಡು ಬಂದರೆ ಮಾವಿನ ಇಳುವರಿ ಕುಂಠಿತವಾಗುವುದಲ್ಲದೆ, ರೆಂಬೆ ಕೊಂಬೆಗಳು ಒಣಗಿ ಕೊನೆಗೆ ಇಡೀ ಮರ ಒಣಗುತ್ತದೆ. ಆದ್ದರಿಂದ ಆರೋಗ್ಯವಂತ ಮರಗಳಿಗೆ ಸೀಲರ್, ಹೀಲರ್ ಚಿಕಿತ್ಸೆಯನ್ನು ವರ್ಷಕ್ಕೆ ಎರಡು ಬಾರಿ, ಇಲ್ಲವೇ ಕನಿಷ್ಠ ಒಮ್ಮೆಯಾದರೂ ಮಾಡಬೇಕು. ಸೀಲರ್, ಹೀಲರ್ ಕೊಡಲು ಮಳೆಗಾಲದ ನಂತರದ ದಿನಗಳು ಸರಿಯಾದ ಸಮಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಸ್ಯರೋಗ ಶಾಸ್ತ್ರದ ವಿಜ್ಞಾನಿ ಬಿ.ಸ್ವಾತಿ, ಕೃಷಿ ವಿಜ್ಞಾನ ಕೇಂದ್ರ, ಚಿಂತಾಮಣಿ ಮೊಬೈಲ್ ಸಂಖ್ಯೆ 99012 81402 ಸಂಪರ್ಕಿಸಬಹುದು.
ನಿರ್ವಹಣಾ ಕ್ರಮ
ಕಾಂಡ ಕೊರಕದಿಂದ ಬಳಲುತ್ತಿರುವ ಮರ ಗುರುತಿಸಿ, ಬಾಧೆಗೆ ಒಳಪಟ್ಟ ತೊಗಟೆಯನ್ನು ಸ್ವಚ್ಛಗೊಳಿಸಬೇಕು. ಕೊರಕಗಳು ಸಿಕ್ಕಿದಲ್ಲಿ ನಾಶಪಡಿಸಬೇಕು. ಕೆತ್ತಿದ ಭಾಗಕ್ಕೆ 250 ಗ್ರಾಂ ಸೀಲರ್ ಮತ್ತು ಹೀಲರ್ + ಪ್ರತಿ ಲೀಟರಿಗೆ 5 ಗ್ರಾಂ ಕಾಪರ್ ಆಕ್ಸಿಕ್ಲೋರೈಡ್ ಬೆರಸಿ ಕಾಂಡಕ್ಕೆ ಬಳಿಯಬೇಕು. ಇಲ್ಲವೇ 10 ಮಿ.ಲೀ. ಕ್ಲೋರೊಪೈರಿಫಾಸ್, 40 ಗ್ರಾಂ ಕಾಪರ್ ಆಕ್ಸಿಕ್ಲೋರೈಡ್, 100 ಮಿ.ಲೀ. ಡಿಸ್ಟೆಂಪರ್ ನೀರಿನಲ್ಲಿ ಬೆರಸಿದ ದ್ರಾವಣವನ್ನು ಕಾಂಡಕ್ಕೆ ಬಳಿಯಬೇಕು. ದ್ರಾವಣವನ್ನು ಬಳಿಯುವಾಗ ಶರೀರದ ಯಾವುದೇ ಭಾಗಕ್ಕೂ ತಾಗದಂತೆ ಎಚ್ಚರ ವಹಿಸಬೇಕು.
ಲೀಟರಿಗೆ 18.5 ಅ ಕ್ಲೋರಂಟ್ರಿ ನಿಲಿಪ್ರೋಲ್ ಬೆರೆಸಿದ ದ್ರಾವಣವನ್ನು ಸಿರಿಂಜ್ ಅಥವಾ ರಂಧ್ರ ದೊಡ್ಡದಿದ್ದಲ್ಲಿ ಹತ್ತಿಯಲ್ಲಿ ಅದ್ದಿ ರಂಧ್ರಗಳಿಗೆ ಹಾಕಿ 1 ಕೆ.ಜಿ. ಸೀಲರ್ ಹೀಲರ್ ಪುಡಿಯನ್ನು 500 ಮಿ.ಲೀ ನೀರಿಗೆ ಬೆರಸಿ ಚಪಾತಿ ಹಿಟ್ಟು ಅಥವಾ ರಾಗಿ ಮುದ್ದೆಯಂತೆ ಮಾಡಿಕೊಂಡು ರಂಧ್ರಗಳಿಗೆ ಬಿಗಿಯಾಗಿ ಒತ್ತಬೇಕು.
ಮರವು ಕಾಂಡ ಕೊರಕ ಕಾಟದಿಂದ ತೀರಾ ಹದಗೆಟ್ಟಿದ್ದಲ್ಲಿ ಗಿಡಕ್ಕೆ ಪೋಷಕಾಂಶಗಳ ಕೊರತೆ ಕಂಡು ಬರುತ್ತದೆ. ಆದ್ದರಿಂದ ರೈತರು ಅಂತಹ ಮರಗಳಿಗೆ ವಿಶೇಷ ಕಾಳಜಿ ವಹಿಸಿ 100 ಗ್ರಾಂ ಯೂರಿಯಾ, 200 ಗ್ರಾಂ , 100 ಗ್ರಾಂ ಒಔ ರಸಗೊಬ್ಬರಗಳನ್ನು 200 ಲೀಟರ್‌ನಲ್ಲಿ ಕರಗಿಸಿ ಗಿಡದ ಸುತ್ತ ಸುರಿಯಬೇಕು.
ಉಲ್ಬಣಕ್ಕೆ ಹೇಗೆ?
ಕಾಂಡಕೊರಕದ ಹೆಣ್ಣು ದುಂಬಿಗಳು ಒಂದೊಂದಾಗಿ ಮೊಟ್ಟೆಗಳನ್ನು ತೊಗಟೆಯ ಬಿರುಕುಗಳಲ್ಲಿ ಇಡುತ್ತವೆ. ಮರಿಹುಳುಗಳು ಕಾಂಡದ ಮೃದು ಭಾಗದಲ್ಲಿ ತಿನ್ನುತ್ತ ಸುರಂಗ ಕೊರೆಯುತ್ತವೆ. ತೊಗಟೆಯನ್ನು ಕೊರೆದು ರಂಧ್ರಗಳನ್ನು ಕಂದು ಬಣ್ಣದ, ಅಂಟು ದ್ರಾವಣ ಮತ್ತು ಕೊರೆದಂತಹ ಮರದ ಪುಡಿಯಿಂದ ಮುಚ್ಚುತ್ತವೆ. ಬಾಧೆಗೊಳಪಟ್ಟ ಭಾಗದಿಂದ ಕಂದು ಬಣ್ಣದ ಅಂಟು ದ್ರಾವಣ ಹಾಗೂ ಮರದ ಪುಡಿ ಉದುರುವುದು ಕಂಡು ಬರುತ್ತದೆ. ಈ ಹುಳುಗಳು ಮಧ್ಯಕಾಂಡ ಕೊರೆದು ತಿನ್ನುವುದರಿಂದ ರೆಂಬೆಗಳು ಒಣಗಿ, ಗಿಡಗಳು ನಿಶ್ಯಕ್ತಿ ಹೊಂದಿ, ಕೆಲತಿಂಗಳಲ್ಲಿಯೇ ಸಾಯುತ್ತವೆ. ಇದನ್ನು ಗುರುತಿಸಿ ಕ್ರಮ ಕೈಗೊಳ್ಳುವುದಕ್ಕೆ ತಡ ಮಾಡಿದರೆ ತೋಟವೆಲ್ಲ ಒಣಗುತ್ತದೆ. ಮಾವಿಗೆ ತಗಲುವ ಕಾಂಡ ಕೊರಕವು ಮಾವು ಅಲ್ಲದೇ ಇತರ 150 ವಿವಿಧ ಜಾತಿಯ ಹಣ್ಣಿನ ಮರಗಳಿಗೆ ಹಾನಿಯಂಟುಮಾಡುತ್ತದೆ. ಹಾಗಾಗಿ ರೈತರು ಕಾಂಡ ಕೊರಕದಿಂದ ತೋಟಗಳನ್ನು ಕಾಪಾಡಿಕೊಳ್ಳಬೇಕು.