ರಣ ಬಿಸಿಲಿಗೆ ಸಾಯುತ್ತಿವೆ ಮಾವಿನ ಮರಗಳು

11-04-rama-mango2
Published on

ಗಂಗಾಧರ್ ಬೈರಾಪಟ್ಟಣ ರಾಮನಗರ

ಹಿಂದೆಂದೂ ಕಂಡರಿಯದ ಬಿಸಿಲ ಬೇಗೆಗೆ ಮಾವಿನ ಇಳುವರಿ ಕುಂಠಿತವಾಗಿರುವ ನಡುವೆಯೇ ಮಾವಿನ ಮರಗಳು ಸಾಯುತ್ತಿರುವುದು ರೈತರನ್ನು ಆತಂಕಕ್ಕೆ ದೂಡಿದೆ.

ರಾಜ್ಯದಲ್ಲಿ ಪ್ರಥಮವಾಗಿ ಮಾರುಕಟ್ಟೆ ಪ್ರವೇಶ ಮಾಡುವ ಹೆಗ್ಗಳಿಕೆ ರಾಮನಗರ ಮಾವಿಗೆ ಇದೆ. ಆದರೆ, ಕಳೆದ ಹಲವು ವರ್ಷಗಳಿಂದ ಹವಾಮಾನ ವೈಪರೀತ್ಯ ರೈತರನ್ನು ಒಂದಿಲ್ಲೊಂದು ಸಂಕಷ್ಟಕ್ಕೆ ದೂಡುತ್ತಿದೆ. ಇದರ ನಡುವೆ ಈ ಬಾರಿಯ ಬರ ಮತ್ತೊಮ್ಮೆ ಇಳುವರಿ ಕುಂಠಿತಕ್ಕೆ ಕಾರಣವಾಗಿರವ ಜತೆಗೆ ವಾತಾವರಣದಲ್ಲಿ ತೇವಾಂಶ ಕೊರತೆ ಮಾವಿನ ಮರಗಳ ಜೀವ ಬಲಿ ಪಡೆಯುತ್ತಿದೆ.

ಕುಸಿದ ಇಳುವರಿ

ಜಿಲ್ಲೆಯಲ್ಲಿ ಸುಮಾರು 85 ಸಾವಿರ ಎಕರೆ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಪ್ರಮುಖವಾಗಿ ಬಾದಾಮಿ, ಸೇಂದೂರಾ, ಬೈಂಗಪಲ್ಲಿ ಮತ್ತು ರಸ ಪೂರಿ ಮಾವಿನ ಹಣ್ಣುಗಳು ಬಹುತೇಕ ಮಾರ್ಚ್ ಮೊದಲ ವಾರದಲ್ಲಿ ಮಾರುಕಟ್ಟೆ ಪ್ರವೇಶ ಮಾಡುತ್ತಿವೆ. ಜಿಲ್ಲೆಯಲ್ಲಿ ಪ್ರತಿ ವರ್ಷ ಸರಾಸರಿ 2.5 ಲಕ್ಷ ಟನ್ ಮಾವು ಉತ್ಪಾದನೆಯನ್ನು ಅಂದಾಜಿಸಲಾಗಿದೆಯಾದರೂ, ಈ ಬಾರಿ ಬಿಸಿಲ ಬೇಗೆ, ಜೋನಿ ಸೇರಿ ಇತರ ಕಾರಣಗಳಿಗೆ ಇಳುವರಿ ಸಂಪೂರ್ಣ ಕುಸಿದೆ. ಈ ಬಾರಿ 20-25 ಸಾವಿರ ಟನ್ ಮಾವು ಮಾರುಕಟ್ಟೆಗೆ ಬಂದರೆ ಹೆಚ್ಚು ಎನ್ನುವಂತೆ ಆಗಿದೆ.

ಸಾಯುತ್ತಿವೆ ಮರಗಳು 

ಇಳುವರಿ ಕುಂಠಿತವಾದರೆ ಮುಂದಿನ ವರ್ಷ ಹೆಚ್ಚು ಬೆಳೆ ನಿರೀಕ್ಷೆಯಲ್ಲಿಯೇ ಮತ್ತೆ ಕೃಷಿಯಲ್ಲಿ ತೊಡಗುವ ರೈತರಿಗೆ ಈ ಬಾರಿ ಆಘಾತವೊಂದು ಎದುರಾಗಿದೆ. ಎಷ್ಟೇ ನೀರುಣಿಸಿದರೂ ಮರಗಳ ಜೀವವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪ್ರತಿ ತೋಟದಲ್ಲಿ ಕನಿಷ್ಠ 8-10 ಮರಗಳತಂತೆ ಸುಮಾರು 10 ಸಾವಿರ ಎಕರೆ ಪ್ರದೇಶದಲ್ಲಿ  ಸುಮಾರು 6-60 ವರ್ಷಗಳ ಮರುಗಳೂ ಸಾಯುತ್ತಿವೆ. ಬಹುತೇಕ ಮಾವಿನ ಪ್ರದೇಶ ಮಳೆ ಆಶ್ರೀತವಾಗಿದೆ. ಈ ಹಿನ್ನೆಲೆಯಲ್ಲಿ ಮರಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ರೈತರು 600-800 ರೂ.ವರೆಗೂ ಹಣ ತೆತ್ತು ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತಿದ್ದರೂ ಮರಗಳು ಬಿಸಿಲ ಜಳಕ್ಕೆ ತತ್ತರಿಸಿ ಹೋಗುತ್ತಿವೆ ಎನ್ನುವುದು ರೈತರ ಅಳಲು.

ಬೆಂಕಿಯ ಆರ್ಭಟ

ಒಂದೆಡೆ ಮಳೆ ಕೊರತೆ, ಬಿಸಿಲ ಜಳದ ಜತೆ ಜತೆಗೆ ಮಾವಿನ ಆಗಂತಕರು ಹಚ್ಚುರುತ್ತಿರುವ ಬೆಂಕಿ ನುಂಗಲಾರದ ತುತ್ತಾಗುತ್ತಿದೆ. ಈ ಬಾರಿ ಹವಾರು ತೋಟಗಳಿಗೆ ಬೆಂಕಿ ಬಿದ್ದು ಗಿಡಗಳು ಸುಟ್ಟು ಕರಲಾಗಿವೆ.

ನೆರವಿಗೆ ಬಾರದ ಇಲಾಖೆ

ಮಾವು ಬೆಳೆಗಾರರು ಸಂಕಷ್ಟಕ್ಕೆ ಒಳಗಾಗಿದ್ದರೂ ತೋಟಗಾರಿಕೆ ಇಲಾಖೆ ಮತ್ತು ಕೃಷಿ ವಿಜ್ಞಾನ ಕೇಂದ್ರದ ತಜ್ಞರು ಈ ಬಾರಿ ರೈತರ ನೆರವಿಗೆ ಧಾವಿಸಿಲ್ಲ ಎನ್ನುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಮಾವಿನ ಮರಗಳಿಗೆ ಟ್ಯಾಂಕರ್ ಮೂಲಕ ನೀರು ಉಣಿಸುತ್ತಿದ್ದರೂ ಆರ್ಥಿಕ ನೆರವು ನೀಡುವುದರಿಲಿ, ಏನಾಗಿದೆ ಎಂದು ಅಧಿಕಾರಿಗಳು ಕೇಳಿಲ್ಲ. ಜೋನಿ ರೋಗ ಹೆಚ್ಚಿದ್ದರೂ ಇದನ್ನು ಪರಿಣಾಮಕಾರಿಯಾಗಿ ಹೋಗಲಾಡಿಸಲು ಔಷಧಗಳನ್ನು ಶಿಾರಸು ಮಾಡುತ್ತಿಲ್ಲ. ಶಿಾರಸು ಮಾಡುವ ಔಷಧಗಳಿಂದ ಡೀಲರ್‌ಗಳ ಜೇಬು ತುಂಬುತ್ತಿದೆಯೇ ಹೊರತು, ಬೆಳೆಗಾರರಿಗೆ ಪ್ರಯೋಜನವಾಗುತ್ತಿಲ್ಲ ಎಂದು ರೈತರು ದೂರಿದ್ದಾರೆ.

ನೆರವಿಗೆ ಬರಬೇಕಿದೆ ಸರ್ಕಾರ

ಜಿಲ್ಲೆಯಲ್ಲಿ ಶೇ.22 ಮಾವು ಬೆಳೆ ಮಾತ್ರ ವಿಮೆಗೆ ಒಳಪಟ್ಟಿದೆ. ಬರುವ ವಿಮಾ ಮೊತ್ತವೂ ರೈತರಿಗೆ ಆಗುವ ನಷ್ಟವನ್ನು ಸರಿದೂಗಿಸುವುದಿಲ್ಲ. ಜತೆಗೆ ವಿಮೆಗೆ ಒಳಪಡದ ರೈತರು ಸಂಕಷ್ಟದಲ್ಲಿದ್ದು, ಇವರ ನೆರವಿಗೂ ಸರ್ಕಾರ ಪ್ಯಾಕೇಜ್ ರೂಪದಲ್ಲಿ ಆರ್ಥಿಕ ನೆರವು ೋಷಣೆ ಮಾಡಬೇಕು ಎನ್ನುವುದು ರೈತರ ಆಗ್ರಹವಾಗಿದೆ. ಅಲ್ಲದೆ, ಕೂಡಲೇ ತೋಟಗಾರಿಕೆ ಅಧಿಕಾರಿಗಳು, ಕೃಷಿ ವಿಜ್ಞಾನಿಗಳು ಮತ್ತು ರೈತರನ್ನು ಒಳಗೊಂಡ ಸಮಿತಿ ರಚನೆ ಮಾಡಿ ಸಂಕಷ್ಟಕ್ಕೆ ಸಿಲುಕಿರುವ ರೈತರ ಜಮೀನುಗಳಿಗೆ ತೆರಳಿ ವಸ್ತುಸ್ಥಿತಿಯನ್ನು ಅಧ್ಯಯನ ಮಾಡಬೇಕು ಎನ್ನುವುದು ರೈತರ ಬೇಡಿಕೆ ಆಗಿದೆ.

--

ಮಾವಿನ ತೋಟಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತಿದ್ದರೂ ಬಿಸಿಲ ಝಳಕ್ಕೆ ಅದು ಸಾಲುತ್ತಿಲ್ಲ. ಈಗ ಬಾರಿ ಬೆಳೆ ಇರಲಿ, ಮರಗಳನ್ನು ಉಳಿಸಿಕೊಂಡರೆ ಸಾಕು ಎನ್ನುವ ಹಂತಕ್ಕೆ ಬಂದಿದ್ದೇನೆ. ಕೆ. ಲಿಂಗೇಗೌಡ, ಮಾವು ಬೆಳೆಗಾರರು, ರಾಮನಗರ

==

ಈ ಬಾರಿ ಮಾವಿನ ಮರಗಳನ್ನು ಉಳಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ. ಸರ್ಕಾರ ಕೂಡಲೇ ಸಮಿತಿ ರಚನೆ ಮಾಡಿ ವಸ್ತು ಸ್ಥಿತಿ ಅರಿಯಲು ಮುಂದಾಗಬೇಕು. ಸಂಕಷ್ಟದರುವ ಮಾವು ಬೆಳಗಾರರಿಗೆ ಕೂಡಲೇ ಆರ್ಥಿಕ ಪ್ಯಾಕೇಜ್ ೋಷಣೆ ಮಾಡಬೇಕು. ಸಿ. ಪುಟ್ಟಸ್ವಾಮಿ, ರೈತ ಸಂಘದ ಹಿರಿಯ ಮುಖಂಡ

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net