

ಪುರುಷೋತ್ತಮ ಪೆರ್ಲ ಕಾಸರಗೋಡು
ನಗರದ ಜನರಲ್ ಆಸ್ಪತ್ರೆ ವಠಾರದಲ್ಲಿ ಅಭಿವೃದ್ಧಿ ಹೆಸರಲ್ಲಿ ರೆಂಬೆ ಕಟಾವುಗೊಳಿಸಿದ ಬೃಹತ್ ಮರ ಹೂವಿನ ಕುಂಡಗಳಿಗೆ ಆಸರೆಯಾಗುವ ಮೂಲಕ ಜನರ ಗಮನಸೆಳೆಯುತ್ತಿದೆ.
ಹಲವು ವರ್ಷಗಳಿಂದ ಇರುವ ಮಾವಿನ ಮರದ ರೆಂಬೆಗಳನ್ನು ಸಂಪೂರ್ಣ ಕಡಿದು ಕಾಂಡ ಮಾತ್ರ ಉಳಿದುಕೊಂಡಿದೆ. ಈ ಮರಕ್ಕೆ ನೀರುಣಿಸಿ ಮತ್ತೆ ಚಿಗುರೊಡೆಯುವಂತೆ ಮಾಡುತ್ತಿರುವ ಆಸ್ಪತ್ರೆ ನೌಕರ, ಮಾಙೌಡ್ ಮೇಲ್ಪಾರ ನಿವಾಸಿ ಶಿವರಾಮನ್ ಅವರು ಮರಕ್ಕೆ ಹೂವಿನ ಕುಂಡಗಳನ್ನು ನೇತುಹಾಕಿ ಇದರಲ್ಲೂ ಹೂವಿನ ಗಿಡಗಳನ್ನು ಪೋಷಿಸಿಕೊಂಡು ಬರುವ ಮೂಲಕ ತಮ್ಮ ಪರಿಸರ ಕಾಳಜಿ ಮೆರೆಯುತ್ತಿದ್ದಾರೆ.
ಕಾಸರಗೋಡು ಜನರಲ್ ಆಸ್ಪತ್ರೆ ವೈದ್ಯರು ಹಾಗೂ ಇತರ ಸಿಬ್ಬಂದಿ ಆಸ್ಪತ್ರೆಯಿಂದ ವರ್ಗಾವಣೆಗೊಂಡು ತೆರಳುವಾಗ ಹಾಗೂ ನಿವೃತ್ತರಾಗುವ ಸಂದರ್ಭ ಆಸ್ಪತ್ರೆಗೆ ಕೊಡುಗೆಯಾಗಿ ನೀಡಿದ್ದ ಹಲವಾರು ಹೂವಿನಕುಂಡಗಳನ್ನು ಆಸ್ಪತ್ರೆ ವಠಾರದಲ್ಲಿ ಎಲ್ಲೆಂದರಲ್ಲಿ ಇರಿಸಲಾಗಿತ್ತು. ಪರಿಸರ ಸ್ವಚ್ಛತೆ ನಡೆಸುವ ಮಧ್ಯೆ ಇವೆಲ್ಲವನ್ನೂ ಒಂದೆಡೆ ಇರಿಸಿ ಪೋಷಿಸುವ ಶಿವರಾಮನ್ ಅವರ ಕನಸಿಗೆ ರೆಂಬೆ ಕಟಾವುಗೊಳಿಸಿದ ಮಾವಿನ ಮರ ಆಸರೆ ಒದಗಿಸಿದೆ. ಹೂವಿನ ಕುಂಡಗಳನ್ನು ಮರದ ತಳಭಾಗದಿಂದ ತೊಡಗಿ ಮೇಲ್ಭಾಗದವರೆಗೆ ಕೊಂಬೆಗಳಲ್ಲಿರಿಸಿ ಬಳ್ಳಿಯಿಂದ ಬಿಗಿಯಲಾಗಿದೆ. ಇನ್ನು ಕೆಲವನ್ನು ನೇತುಹಾಕಲಾಗಿದೆ. ನಿತ್ಯ ಈ ಕುಂಡಗಳಿಗೆ ನೀರೆರೆಯುವ ಮೂಲಕ ಈ ಸಸಿಗಳನ್ನು ಶಿವರಾಮನ್ ಪೋಷಿಸಿಕೊಂಡು ಬರುತ್ತಾರೆ.
ರೆಂಬೆ ಕಟಾವುಗೊಳಿಸಿದ ಮಾವಿನ ಮರವನ್ನು ಮತ್ತೆ ಚಿಗುರೊಡೆಯುವಂತೆ ಮಾಡುವುದರ ಜತೆಗೆ ಈ ಮರವನ್ನು ಆಸರೆಯಾಗಿಸಿ ಮತ್ತಷ್ಟು ಸಸಿಗಳನ್ನು ಬೆಳೆಸುವುದು ಮನದ ಇಚ್ಛೆಯಾಗಿದೆ ಎಂದು ಶಿವರಾಮನ್ ತಿಳಿಸುತ್ತಾರೆ.
ಅಭಿವೃದ್ಧಿಗೆ ವೃಕ್ಷ ಬಲಿ
ಹತ್ತು ಹಲವು ಮರಗಳಿಂದ ಕಂಗೊಳಿಸುತ್ತಿದ್ದ ಜನರಲ್ ಆಸ್ಪತ್ರೆ ವಠಾರವನ್ನು ಇಂದು ಅಭಿವೃದ್ಧಿ ಹೆಸರಲ್ಲಿ ಮರಗಳನ್ನು ಬಲಿಕೊಟ್ಟು ಬರಿದುಮಾಡಲಾಗಿದೆ. ಈ ಮಧ್ಯೆ ರೆಂಬೆ ಕಡಿದ ಬೃಹತ್ ಮರವೊಂದನ್ನು ಮತ್ತೆ ಚಿಗುರೊಡೆಯುವಂತೆ ಮಾಡುವ ಹಾಗೂ ಇದರಲ್ಲಿ ಹೂವಿನ ಸಸಿಗಳನ್ನು ಬೆಳೆಸುತ್ತಿರುವ ಶಿವರಾಮನ್ ಅವರ ಚಿಂತನೆಗೆ ಪರಿಸರವಾದಿಗಳೂ ಭೇಷ್ ಅನ್ನುತ್ತಿದ್ದಾರೆ.