

* ಹವಾಮಾನ ವೈಪರೀತ್ಯದಿಂದ ಶೇ.80 ಇಳುವರಿ ಕುಸಿತ
ಗಂಗಾಧರ್ ಬೈರಾಪಟ್ಟಣ ರಾಮನಗರ
ದಿನದಿಂದ ದಿನಕ್ಕೆ ತಾಪ ಹೆಚ್ಚುತ್ತಿರುವುದು ಸಾಮಾನ್ಯ ಜನರ ಜತೆಗೆ ಜಿಲ್ಲೆಯ ಮಾವು ಬೆಳೆಗಾರರನ್ನು ಕಂಗಾಲಾಗಿಸಿದೆ. ಹಲವು ವರ್ಷಗಳಿಂದಲೂ ಪ್ರಕೃತಿಯ ಕಣ್ಣಾಮುಚ್ಚಾಲೆ ಆಟಕ್ಕೆ ನಲುಗಿರುವ ಜಿಲ್ಲೆಯ ಮಾವು ಬೆಳೆಗಾರರು, ಈ ಬಾರಿಯಂತೂ ನೆಮ್ಮದಿಯನ್ನೇ ಕಳೆದುಕೊಂಡಿದ್ದಾರೆ. ಬಿಸಿಲಿನಿಂದ ಮಾವು ಬೆಳೆಗಾರರು ಸಂಕಷ್ಟಕ್ಕೆ ಒಳಗಾಗಿದ್ದರೆ, ಮಧ್ಯವರ್ತಿಗಳಿಗೂ ನಷ್ಟದ ಭೀತಿ ಎದುರಾಗಿದೆ. ಇಳುವರಿ ಸಂಪೂರ್ಣ ಕುಸಿದಿರುವ ಕಾರಣ ಬೆಲೆ ಹೆಚ್ಚಳವಾಗಿ ಗ್ರಾಹಕರ ಜೇಬಿಗೂ ಮಾವು ಭಾರವಾಗಲಿದೆ.
ಜಿಲ್ಲೆಯಲ್ಲಿ ಸುಮಾರು 27 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಮಾವು ಇರುವುದು ರಾಮನಗರ ತಾಲೂಕಿನಲ್ಲಿ. ಅಲ್ಲದೆ, ರಾಮನಗರ ಜಿಲ್ಲೆಯೇ ಮಾವು ಸಲು ರಾಜ್ಯದಲ್ಲಿಯೇ ಮೊದಲಿಗೆ ಮಾರುಕಟ್ಟೆಗೆ ಬರುತ್ತದೆ. ಆದರೆ, ಈ ಬಾರಿ ಮುಂಗಾರು ಸರಿಯಾಗಿ ಆಗದ ಕಾರಣ ಕಚ್ಚಿದ್ದ ಹೂವುಗಳು ಮಳೆ ಕೊರತೆ ಹಾಗೂ ಹವಾಮಾನ ವೈಪರೀತ್ಯಕ್ಕೆ ನೆಲ ಕಚ್ಚಿದವು. ಇದರಿಂದಾಗಿ ಶೇ.80 ಸಲು ನಷ್ಟವಾಗಿದೆ.
ಇರುವ ಅಷ್ಟೋ ಇಷ್ಟು ಮಾವು ಕೈ ಸೇರುತ್ತದೆ ಎಂದುಕೊಂಡಿದ್ದ ಬೆಳೆಗಾರರು ಈಗ ಏರುತ್ತಿರುವ ಬಿಸಿಲಿಗೆ ಕಾಯಿ ಉದುರಲು ಆರಂಭಿಸುವ ಕಾರಣ ಇದರ ಮೇಲಿನ ಆಸೆಯನ್ನು ಕೈ ಬಿಟ್ಟಿದ್ದಾರೆ.
ಹಣ್ಣುಗಳ ರಾಜ ಮಾವು ರಾಜ್ಯದ ಮಾರುಕಟ್ಟೆಗೆ ಲಗ್ಗೆ ಇಡುವುದೇ ರಾಮನಗರ ಜಿಲ್ಲೆಯಿಂದ ಬಾದಾಮಿ, ಸೇಂದೂರಾ, ರಸಪುರಿ, ಬೈಗಂಪಲ್ಲಿ ಜಾತಿಯ ಹಣ್ಣುಗಳು ಮಾರ್ಚ್ ಆರಂಭದಲ್ಲಿಯೇ ರಾಮನಗರ ಮಾರುಕಟ್ಟೆ ಪ್ರವೇಶ ಮಾಡಿ, ಪಲ್ಪ್ ಕಾರ್ಖಾನೆಗಳಿಗೆ ರವಾನೆ ಆಗುತ್ತವೆ. ಆದರೆ, ಈ ಸಲ ಅಷ್ಟಾಗಿ ಮಾವಿನ ಅಬ್ಬರವಿಲ್ಲ. ಸ್ವಲ್ಪ ಪ್ರಮಾಣದ ಬೆಳೆಯಷ್ಟೇ ಮಾರುಕಟ್ಟೆಗೆ ಬಂದಿದೆ.
ಬರದಿಂದಾಗಿ ಈ ಸಲ ಸಲು ಕೈ ಕೊಟ್ಟಿದೆ. ಸಾಮಾನ್ಯವಾಗಿ ನವೆಂಬರ್ - ಡಿಸೆಂಬರ್‌ನಲ್ಲಿ ಮಾವು ಹೂವು ಕಚ್ಚಿ, ಕಾಯಾಗಿ ಮಾರ್ಚ್ ವೇಳೆಗೆ ಮಾರುಕಟ್ಟೆಗೆ ಬರುತ್ತವೆ. ಹವಾಮಾನ ವೈಪರೀತ್ಯ ಹಾಗೂ ಮಳೆ ಕೊರತೆ ಕಾರಣ ಈ ಸಲ ತಡವಾಗಿದೆ. ಅದರಲ್ಲೂ ಶೇ. 70 ಮಾತ್ರ ಹೂವು ಬಿಟ್ಟಿತ್ತು. ಬಿಟ್ಟ ಹೂಗಳಲ್ಲಿ ಶೇ.20 ಮಾತ್ರ ಉಳಿದುಕೊಂಡಿದೆ.
ಆದರೆ, ಇರುವ ಕಾಯಿಗೂ ಜಿಗಿ ಹುಳು, ವೈಟ್ ಪ್ಲೈಸ್, ಜೋನಿ, ನುಸಿ ಕೀಟಬಾಧೆ ಹಾಗೂ ಬೂದು ರೋಗ ಕಾಣಿಸಿಕೊಂಡಿದೆ. ರೋಗ ಮತ್ತು ಕೀಟ ನಿಯಂತ್ರಣಕ್ಕೆ ಇಲಾಖೆಯು ಬೆಳೆಗಾರರಿಗೆ ಸಲಹೆ ಸೂಚನೆ ನೀಡುತ್ತಾ ಬಂದಿದೆಯಾದರೂ, ಇದು ಯಾವುದೇ ಪ್ರಯೋಜನವಾಗುತ್ತಿಲ್ಲ.
ಅತಿವೃಷ್ಟಿ ಹಾಗೂ ಅನಾವೃಷ್ಟಿ ಎರಡರಿಂದಲೂ ಬೆಳೆ ನಷ್ಟಕ್ಕೆ ಒಳಗಾಗುತ್ತಿರುವ ಮಾವು ಬೆಳೆಗಾರರು ಹೆಚ್ಚಿನ ಪ್ರಮಾಣದಲ್ಲಿ ವಿಮೆ ಮಾಡಸದೆ ಇರುವುದು ನಷ್ಟಕ್ಕೆ ದೂಡುವಂತೆ ಮಾಡಿದೆ. 5 ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ಬಾರಿ ಬರೋಬ್ಬರಿ ಸುಮಾರು 12 ಸಾವಿರ ರೈತರು ಮಾವಿನ ತೋಟಕ್ಕೆ ಬೆಳೆ ವಿಮೆ ಮಾಡಿಸಿದ್ದು, ಒಟ್ಟಾರೆ ಜಿಲ್ಲೆಯ ಮಾವು ಬೆಳೆಯು ವ್ಯಾಪ್ತಿಯ ಶೇ.22 ಪ್ರದೇಶ ಹಾಗೂ ಉತ್ಪಾದನೆಯ ಶೇ.30 ಬೆಳೆ ವಿಮೆ ವ್ಯಾಪ್ತಿಗೆ ಒಳಪಟ್ಟಂತೆ ಆಗಿದೆ.ಆದರೆ, ಉಳಿದಂತೆ ಇನ್ನೂ ಸುಮಾರು 18-20 ಸಾವಿರ ಹೆಕ್ಟೇರ್ ಪ್ರದೇಶ ವಿಮೆಗೆ ಒಳಪಡದಿರುವುದು ನಷ್ಟದ ಪ್ರಮಾಣ ಹೆಚ್ಚಿಸಿದೆ.
ಸಾಮಾನ್ಯವಾಗಿ ಇಳುವರಿ ಕುಸಿತದ ಸಂದರ್ಭದಲ್ಲಿ ಮಾವಿಗೆ ಹೆಚ್ಚಿನ ಬೆಲೆ ಇರುತ್ತದೆ. ಹಿಂದಿನ ವರ್ಷಗಳಲ್ಲಿ ಬಾದಾಮಿ ಪ್ರತಿ ಕೆಜಿಯನ್ನು 150-180 ರೂಪಾಯಿ ವರೆಗೂ ಖರೀದಿ ಮಾಡಿದ ಉದಾಹರಣೆ ಇವೆ. ಆದರೆ, ಈ ಬಾರಿ ಇಳುವರಿ ಕುಸಿತ ಕಂಡಿದ್ದರೂ ರಾಮನಗರ ಮಾರುಕಟ್ಟೆಯಲ್ಲಿ ಬಾದಾಮಿ ಬೆಲೆ ಪ್ರತಿ ಕೆಜಿಗೆ 60-90 ರೂ., ಸೇಂದುರಾ 25-45 ರೂ., ರಸಪೂರಿ 40-65 ರೂ. ಹಾಗೂ ಬೈಂಗಪಲ್ಲಿ 40-60 ರೂ. ಖರೀದಿ ಮಾಡಲಾಗುತ್ತಿದೆ. ಅಲ್ಲದೆ, ಕಾಯಿಗಳು ಉದುರುತ್ತವೆ ಎನ್ನುವ ಕಾರಣಕ್ಕೆ ರೈತರು ಗುಣಮಟ್ಟ ಕಾಪಾಡದೆ ಮಾರುಕಟ್ಟೆಗೆ ಮಾವು ತರುತ್ತಿರುವುದು ಬೆಲೆ ಕುಸಿತಕ್ಕೆ ಕಾರಣವಾಗಿದೆ.
ಈ ಬಾರಿ ಮಳೆಯ ಕೊರತೆ ಹಾಗೂ ಬಿಸಿಲ ಬೇಗೆಗೆ ಮಾವಿನ ಕಾಯಿಗಳು ನೆಲ ಕಚ್ಚುತ್ತಿವೆ. ಹೆಚ್ಚಿನ ಪ್ರಮಾಣದಲ್ಲಿ ಹೂವೂ ಬಿಟ್ಟಿಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೆ ಇರುವ ಕಾಯಿ ಉಳಿಯುವುದಿಲ್ಲ.
ಬಸವರಾಜು, ಮಾವು ಬೆಳೆಗಾರ, ಅಂಜಾಪುರ
ಈ ಬಾರಿಯೂ ಹವಾಮಾನ ವೈಪರೀತ್ಯ ಮತ್ತು ಮಳೆಯ ಕೊರತೆ ಕಾರಣಕ್ಕೆ ಮಾವಿನ ಸಲಿನ ಇಳುವರಿ ಕುಂಠಿತವಾಗಿದೆ. ಈ ಬಾರಿ ಶೇ.20 ಸಲು ಸಿಗುವ ನಿರೀಕ್ಷೆ ಇದೆ.
ಎಂ.ಎಸ್.ರಾಜು, ಉಪನಿರ್ದೇಶಕ, ತೋಟಗಾರಿಕೆ ಇಲಾಖೆ ರಾಮನಗರ