ಅಂಚೆ ಮೂಲಕ ಮಾವು ಸೇವೆಗೆ ಚಾಲನೆ

Mango sale
Published on

ಬೆಂಗಳೂರು: ಮಾವಿನ ಕಾಲ ಆರಂಭವಾಗಿದ್ದು, ಹಣ್ಣನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲು ಅಂಚೆ ಇಲಾಖೆ ಮುಂದಾಗಿದ್ದು, ಈ ಸಂಬಂಧ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮವು ಭಾರತೀಯ ಅಂಚೆ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಈ ಸೇವೆಗೆ ಅಂಚೆ ಇಲಾಖೆಯಲ್ಲಿ ಗುರುವಾರ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು. ಆದರೆ ಹಣ್ಣುಗಳು ಪೂರ್ಣ ಪ್ರಮಾಣದಲ್ಲಿ ಇನ್ನೂ ಮಾರುಕಟ್ಟೆ ಪ್ರವೇಶಿಸದ ಕಾರಣ ಏಪ್ರಿಲ್ ಕೊನೆಯ ವಾರದ ವೇಳೆಗೆ ಗ್ರಾಹಕರಿಂದ ಬುಕಿಂಗ್ ಆರಂಭವಾಗಲಿದೆ. ಹಣ್ಣು ಬಂದ ನಂತರ ರೈತರು ನಮ್ಮ ವೆಬ್ ಪೋರ್ಟಲ್‌ಗೆ ನೋಂದಣಿ ಮಾಡಿಕೊಳ್ಳಬೇಕು. ಇದಾದ ನಂತರ ಗಾಹಕರ ಬೇಡಿಕೆಗೆ ಅನುಗುಣವಾಗಿ ಪೂರೈಕೆ ಮಾಡಲಾಗುವುದು ಎಂದು ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ. ಸಿ.ಜಿ. ನಾಗರಾಜ್ ತಿಳಿಸಿದರು.

ಆನ್‌ಲೈನ್‌ನಲ್ಲಿ ಮಾವಿನ ಹಣ್ಣು ಬುಕ್ ಮಾಡಿದರೆ ಅಂಚೆ ಸಿಬ್ಬಂದಿ ಮನೆಗೆ ಡೆಲಿವರಿ ಕೊಡಲಿದ್ದಾರೆ. ರೈತರು ಅಚ್ಚುಕಟ್ಟಾಗಿ ಪ್ಯಾಕ್ ಮಾಡಿ ಕೊಡಬೇಕು. ಜತೆಗೆ ಬಾಕ್ಸ್ ಮೇಲೆ ಗ್ರಾಹಕರ ವಿಳಾಸ, ಮೊಬೈಲ್ ಸಂಖ್ಯೆ ನಮೂದಿಸಿರಬೇಕು. ಗ್ರಾಹಕರು www.karsirimangoes.karnataka.gov.in  ಈ ಪೋರ್ಟಲ್‌ಗೆ ಭೇಟಿ ನೀಡಿ ಹಣ್ಣುಗಳ ಬುಕ್ಕಿಂಗ್ ಮಾಡಬಹುದಾಗಿದೆ.

ಬುಕ್ಕಿಂಗ್ ಹೇಗೆ? ಪೋರ್ಟಲ್‌ನಲ್ಲಿ ನೋಂದಾಯಿತ ರೈತರ ವಿಭಾಗಗಳು ತೆರೆದುಕೊಳ್ಳುತ್ತವೆ. ತಮಗೆ ಬೇಕಾದ ರೈತರ ಹೆಸರಿನ ವಿಭಾಗಕ್ಕೆ ಹೋದರೆ ಮಾವಿನ ಹಣ್ಣಿನ ತಳಿಯ ಹೆಸರು ಹಾಗೂ ದರದೊಂದಿಗೆ ಪ್ರದರ್ಶನಗೊಂಡಿರುತ್ತದೆ. ಗ್ರಾಹಕರು ತಮಗೆ ಬೇಕಾದ ತಳಿಯ ಮಾವಿನ ಹಣ್ಣಿನ ಮೇಲೆ ಕ್ಲಿಕ್ ಮಾಡಿ, ಆನ್‌ಲೈನ್‌ನಲ್ಲೇ ಅಂಚೆ ಶುಲ್ಕ ಸಹಿತ ಹಣ ಪಾವತಿಸಬೇಕು. ಬುಕ್ ಆದ ಕೂಡಲೇ ಇಮೇಲ್ ಮತ್ತು ಮೊಬೈಲ್ ಮೂಲಕ ಅಂಚೆ ಇಲಾಖೆಗೆ ಹಾಗೂ ರೈತರಿಗೆ ಸಂದೇಶ ರವಾನೆಯಾಗುತ್ತದೆ. ಬುಕ್ ಮಾಡಿದ ಒಂದು ದಿನದಲ್ಲಿ ಗ್ರಾಹಕರ ಮನೆ ಬಾಗಿಲಿಗೆ ತಾಜಾ ಹಣ್ಣು ತಲುಪಲಿದೆ.

3 ಕೆ.ಜಿ. ಹಾಗೂ ಮೇಲ್ಪಟ್ಟು ತರಿಸಬಹುದು. ಆನ್‌ಲೈನ್‌ನಲ್ಲಿ 3 ಕೆ.ಜಿ. ಹಾಗೂ ಮೇಲ್ಪಟ್ಟು ಬುಕ್ ಮಾಡಬಹುದು. ಪ್ರತಿ 3 ಕೆ.ಜಿ.ಯ ಬಾಕ್ಸ್‌ನಲ್ಲಿ ಹಣ್ಣು ಪಾರ್ಸೆಲ್ ಬರಲಿದೆ. ಬೆಂಗಳೂರಿನಲ್ಲಿ ಈ ಸೇವೆ ಲಭ್ಯವಿರಲಿದೆ. ಭಾರತೀಯ ಅಂಚೆ ಇಲಾಖೆಯ ಪೋಸ್ಟ್ ಮಾಸ್ಟರ್ ಜನರಲ್ ಎಸ್. ರಾಜೇಂದ್ರಕುಮಾರ್ ಮತ್ತಿತರರು ಭಾಗವಹಿಸಿದ್ದರು.

74.59 ಲಕ್ಷ ವಹಿವಾಟು:

ಅಂಚೆ ಮೂಲಕ ಮನೆ ಬಾಗಿಲಿಗೆ ಮಾವು ತಲುಪಿಸುವ ಸೇವೆ 2019 ರಲ್ಲಿ ಆರಂಭಿಸಲಾಗಿದ್ದು,

2023ರವರೆಗೆ ಒಟ್ಟಾರೆ 3.15 ಲಕ್ಷ ಕೆಜಿ. ಹಣ್ಣು ಮಾರಾಟವಾಗಿದ್ದು, 74.59 ಲಕ್ಷ ವಹಿವಾಟು ನಡೆದಿದೆ ಎಂದು ಅಂಚೆ ಅಧಿಕಾರಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net